ಖ್ಯಾತ ಗಾಯಕಿ ಎಸ್. ಜಾನಕಿ ಅಗಲಿಕೆ ಭಾರತೀಯ ಚಿತ್ರರಂಗಕ್ಕೆ ದಿಗ್ಭ್ರಮೆ ಮೂಡಿಸಿದೆ. ಸಾಕಷ್ಟು ಜನ ತಾರೆಯರು, ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ನುಡಿನಮನ ಸಲ್ಲಿಸಿದ್ದಾರೆ. ಆಕೆಯ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ. ಗಾನಕೋಗಿಲೆಯ ಹಾಡುಗಳನ್ನು ಮೆಲುಕು ಹಾಕಿದ್ದಾರೆ. ಎಸ್. ಜಾನಕಿ ಬಗ್ಗೆ ನಟಿ ತ್ರಿಷಾ ಪೋಸ್ಟ್ ವೈರಲ್ ಆಗ್ತಿದೆ.

Advertisement

'96' ಚಿತ್ರದಲ್ಲಿ ಎಸ್‌. ಜಾನಕಿ ಅಭಿಮಾನಿಯ ಪಾತ್ರದಲ್ಲಿ ತ್ರಿಷಾ ನಟಿಸಿದ್ದರು. ಗಾನಕೋಗಿಲೆಯ ಜೊತೆ ಒಂದೆರಡು ದೃಶ್ಯಗಳಲ್ಲಿ ನಟಿಸಿದ್ದರು. ಹಾಗಾಗಿ ಜಾನಕಿ ಇನ್ನಿಲ್ಲ ಎನ್ನುವ ಸುದ್ದಿ ಕೇಳಿ ತಮಿಳು ನಟಿ ಕಂಬನಿ ಮಿಡಿದಿದ್ದಾರೆ. '96' ಚಿತ್ರಕ್ಕಾಗಿ ಜಾನಕಿ ಅವರ ಜೊತೆ ನಟಿಸಿದ್ದನ್ನು ನೆನಪು ಮಾಡಿಕೊಂಡಿದ್ದಾರೆ. ಅಂದಹಾಗೆ ಚಿತ್ರದಲ್ಲಿ ಈ ದೃಶ್ಯವನ್ನು ಕೈಬಿಟ್ಟಿದ್ದರು. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಡಿಲೀಟೆಡ್ ವೀಡಿಯೋ ವೈರಲ್ ಆಗಿತ್ತು.

Advertisement

"ನನ್ನ ಅತ್ಯಂತ ವಿಶೇಷ ಚಿತ್ರಗಳಲ್ಲಿ ಒಂದಾದ '96' ಚಿತ್ರದಲ್ಲಿ ನಿಮ್ಮ ಹೆಸರನ್ನು ಹೊಂದಿರುವುದು ನನ್ನ ಜೀವನದ ಶ್ರೇಷ್ಠ ಗೌರವಗಳಲ್ಲಿ ಒಂದಾಗಿರುತ್ತದೆ. ಆದರೆ ನಿಮ್ಮನ್ನು ತಿಳಿದುಕೊಳ್ಳುವುದು ಮತ್ತು ನಿಮ್ಮ ಪ್ರೀತಿ ಗಳಿಸಿದ್ದನ್ನು ನಾನು ಮರೆಯುವುದಿಲ್ಲ. ನಿಮ್ಮ ಅಪ್ಪುಗೆ, ನಿಮ್ಮ ದಯೆ, ನಿಮ್ಮ ನಗು ಹಾಗೂ ಶ್ರೇಷ್ಠ ಕಲಾವಿದರು ಅತ್ಯಂತ ವಿನಮ್ರರು ಎಂದು ನನಗೆ ನೆನಪಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಧ್ವನಿ ಶಾಶ್ವತವಾಗಿ ಜೀವಂತವಾಗಿರುತ್ತದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಜಾನಕಿ ಅಮ್ಮ. ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ನನ್ನು ಹೃದಯ ಛಿದ್ರವಾಗಿದೆ" ಎಂದು ತ್ರಿಷಾ ಬರೆದುಕೊಂಡಿದ್ದಾರೆ.

Advertisement

'96' ಸಿನಿಮಾ ಚಿತ್ರೀಕರಣದ ವೇಳೆ ಎಸ್. ಜಾನಕಿ ಅವರೊಟ್ಟಿಗೆ ಕ್ಲಿಕ್ಕಿಸಿದ ಫೋಟೊಗಳನ್ನು ತ್ರಿಷಾ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಆಕೆಯ ಪಾತ್ರವನ್ನು ಬಹಳ ವಿಶೇಷವಾಗಿ ಕಟ್ಟಿಕೊಡಲಾಗಿತ್ತು. ಸಂಗೀತ ಪ್ರೇಮಿಗಳಾಗಿರುವ ಪೋಷಕರು ಗಂಡು ಮಗು ಹುಟ್ಟಿದ್ರೆ ಎಸ್. ಪಿ ಬಾಲಸುಬ್ರಮಣ್ಯಂ ಹಾಗೂ ಹೆಣ್ಣು ಮಗು ಹುಟ್ಟಿದ್ರೆ ಎಸ್. ಜಾನಕಿ ಎಂದು ಹೆಸರಿಡುವುದಾಗಿ ಮೊದಲೇ ನಿರ್ಧರಿಸುತ್ತಾರೆ. ಮಗಳು ಹುಟ್ಟಿದ್ದಾಗ ಜಾನಕಿ ಎಂದು ನಾಮಕರಣ ಮಾಡುತ್ತಾರೆ. ಆಕೆ ಕೂಡ ಜಾನಕಿ ಅವರ ಹಾಡುಗಳನ್ನು ಹಾಡುತ್ತಾ ದೊಡ್ಡ ಅಭಿಮಾನಿ ಆಗಿಬಿಡುತ್ತಾಳೆ. ವಿಜಯ್ ಸೇತುಪತಿ ಹೀರೊ ಆಗಿ ನಟಿಸಿದ್ದಾರೆ.

ರಾಮ್ ಹಾಗೂ ಜಾನು ರಸ್ತೆಯಲ್ಲಿ ಹೋಗುವಾಗ ಎಸ್. ಜಾನಕಿ ತಮ್ಮ ಮಗ ಮುರಳಿಕೃಷ್ಣ ಜೊತೆ ಕಾರಿನಲ್ಲಿ ಹೋಗುವಾಗ ಭೇಟಿಯಾಗುತ್ತಾರೆ. ಬಳಿಕ ತಮ್ಮ ಮನೆಗೆ ಬರಲು ಹೇಳಿದಾಗ ಇಬ್ಬರೂ ಅಲ್ಲಿಗೆ ಹೋಗುತ್ತಾರೆ. ಎಸ್. ಜಾನಕಿ ಅವರ ಮುಂದೆ ಜಾನು (ತ್ರಿಷಾ) ಹಾಡು ಹಾಡುವ ಸನ್ನಿವೇಶ ಕೂಡ ಇದೆ. ಎಸ್. ಜಾನಕಿ ಅಗಲಿಕೆ ಬೆನ್ನಲ್ಲೇ ಆ ವೀಡಿಯೋ ವೈರಲ್ ಆಗುತ್ತಿದೆ.

Advertisement

ಪ್ರಧಾನಿ ಮೋದಿ, ತಮಿಳುನಾಡು ಸಿಎಂ ವಿಜಯ್, ತೆಲುಗು ನಟ ಚಿರಂಜೀವಿ ಸೇರಿದಂತೆ ಸಾಕಷ್ಟು ಗಣ್ಯರು, ಸಿನಿಮಾ ತಾರೆಯರು ಎಸ್. ಜಾನಕಿ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಇಳಯರಾಜಾ ಹಾಗೂ ಎಸ್‌. ಜಾನಕಿ ಕಾಂಬಿನೇಷನ್ ಗೀತೆಗಳು ಸೂಪರ್ ಹಿಟ್ ಆಗಿತ್ತು. ಸದ್ಯ ಲಂಡನ್‌ನಲ್ಲಿರುವ ಇಳಯರಾಜಾ ವೀಡಿಯೋ ಮಾಡಿ ಮಾತನಾಡಿದ್ದಾರೆ. ಗಾನಕೋಗಿಲೆ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. ಜಾನಕಿ ಅವರ ನಿಧನ ಚಲನಚಿತ್ರ ಸಂಗೀತಲೋಕಕ್ಕೆ ತುಂಬಲಾರದ ನಷ್ಟ ಎಂದು ಅವರು ಬಣ್ಣಿಸಿದ್ದಾರೆ.