ತಮಿಳುನಾಡು ಸಿಎಂ ವಿಜಯ್ ನಟನೆಯ 'ಜನನಾಯಗನ್' ಸಿನಿಮಾ ಬಿಡುಗಡಗೆ ವೇದಿಕೆ ಸಿದ್ಧವಾಗಿದೆ. ಅಂತೂ ಇಂತೂ ಸಿನಿಮಾ ಸೆನ್ಸಾರ್ ಸರ್ಟಿಫಿಕೇಟ್ ಪಡೆದುಕೊಂಡಿದೆ. ಒಂದಷ್ಟು ಬದಲಾವಣೆಗಳಿಗೆ ಒಪ್ಪಿದ ಬಳಿಕ 'A' ಸರ್ಟಿಫಿಕೇಟ್ ಕೊಡಲಾಗಿದೆ. ಸಿನಿಮಾ ರಿಲೀಸ್ ಡೇಟ್ ಅಧಿಕೃತವಾಗಿ ಘೋಷಣೆ ಆಗಿಲ್ಲ. ಜುಲೈ 23 ಅಥವಾ 24ರಂದು ಸಿನಿಮಾ ತೆರೆಗೆ ಬರುವುದು ಬಹುತೇಕ ಖಚಿತ ಎನ್ನಲಾಗ್ತಿದೆ.
ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ 'ಜನನಾಯಗನ್' ಸಿನಿಮಾ ನಿರ್ಮಾಣ ಮಾಡಿದೆ. ಅನಿರುದ್ಧ್ ರವಿಚಂದರ್ ಸಂಗೀತದಲ್ಲಿ ಆಲ್ಬಮ್ ಹಿಟ್ ಆಗಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಜನವರಿ 9ರಂದು ಆಕ್ಷನ್ ಥ್ರಿಲ್ಲರ್ ಸಿನಿಮಾ ತೆರೆಗೆ ಬರಬೇಕಿತ್ತು. ಸೆನ್ಸಾರ್ ಸಮಸ್ಯೆಯಿಂದಲೇ 6 ತಿಂಗಳು ತಡವಾಗಿದೆ. ಜುಲೈ 31ರಂದು ವಿಜಯ್ ಮಗ ಜೇಸನ್ ಸಂಜಯ್ ನಿರ್ದೇಶನದ 'ಸಿಗ್ಮಾ' ಸಿನಿಮಾ ಬಿಡುಗಡೆ ಆಗಬೇಕಿದೆ. ಅದಕ್ಕೂ ಮುನ್ನ ವಿಜಯ್ ಸಿನಿಮಾ ಬರುತ್ತಾ ಕಾದು ನೋಡಬೇಕಿದೆ.
ವಿಜಯ್ ಮಗ ಜೇಸನ್ ಈಗಾಗಲೇ ಚಿತ್ರರಂಗಕ್ಕೆ ಬಂದಿದ್ದಾರೆ. ಹೀರೊ ಆಗಿ ನಟಿಸುವ ಬದಲು ಕ್ಯಾಮರಾ ಹಿಂದೆ ನಿಂತು ಆಕ್ಷನ್ ಕಟ್ ಹೇಳಿದ್ದಾರೆ. ಸಂದೀಪ್ ಕಿಶನ್ ನಟನೆಯ 'ಸಿಗ್ಮಾ' ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಜುಲೈ 31ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇದೀಗ 'ಜನನಾಯಗನ್' ಸಿನಿಮಾ ಕೂಡ ಅದೇ ಸಮಯಕ್ಕೆ ಬರ್ತಿರೋದು ಕುತೂಹಲ ಮೂಡಿಸಿದೆ. ಸಕ್ರಿಯ ರಾಜಕಾರಣದಲ್ಲಿ ವಿಜಯ್ ತೊಡಗಿಸಿಕೊಂಡಿದ್ದಾರೆ. ಸದ್ಯಕ್ಕೆ ಯಾವುದೇ ಸಿನಿಮಾದಲ್ಲಿ ಅವರು ನಟಿಸುವುದಿಲ್ಲ. ಒಂದರ್ಥದಲ್ಲಿ 'ಜನನಾಯಗನ್' ಕೊನೆ ಸಿನಿಮಾ ಎನ್ನುವಂತಾಗಿದೆ. ಆ ಸಿನಿಮಾವನ್ನು ದೊಡ್ಡದಾಗಿ ಗೆಲ್ಲಿಸಬೇಕು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ದೊಡ್ಡ ಸಿನಿಮಾ ಬರುವ ಒಂದು ವಾರ ಹಿಂದೆ ಅಥವಾ ಮುಂದೆ ಸಣ್ಣ ಸಿನಿಮಾ ಬಿಡುಗಡೆ ಧೈರ್ಯ ಯಾರು ಮಾಡಲ್ಲ. ಹಾಗಾಗಿ 'ಸಿಗ್ಮಾ' ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗಬಹುದು ಎನ್ನುವ ಗುಸುಗುಸು ಶುರುವಾಗಿದೆ. ವಿಜಯ್ ಪತ್ನಿ ಸಂಗೀತಾ ಡಿವೋರ್ಸ್ ಕೇಳಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಮಗ, ಮಗಳು ಇಬ್ಬರೂ ಅಮ್ಮನ ಬೆಂಬಲಕ್ಕೆ ನಿಂತಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿಜಯ್ ಜೊತೆ ಅವರು ಕಾಣಿಸಿಕೊಳ್ಳಲಿಲ್ಲ. ಅಂತರ ಕಾಯ್ದುಕೊಂಡಿದ್ದಾರೆ. ತಮಿಳುನಾಡು ಸಿಎಂ ಆಗಿ ವಿಜಯ್ ಪ್ರಮಾಣವಚನ ಕಾರ್ಯಕ್ರಮಕ್ಕೂ ಗೈರಾಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಲಿಲ್ಲ. ಹಾಗಾಗಿ ವಿಜಯ್ ಬಗ್ಗೆ ಜೇಸನ್ ಎಲ್ಲವೂ ಸರಿಯಿಲ್ಲ ಎನ್ನುವ ಊಹಾಪೋಹ ಶುರುವಾಗಿದೆ. ಜುಲೈ 23ಕ್ಕೆ 'ಜನನಾಯಗನ್' ಸಿನಿಮಾ ತೆರೆಗೆ ಬರುವುದು ಗ್ಯಾರಂಟಿ ಎನ್ನಲಾಗ್ತಿದೆ. ಇನ್ನೆರಡು ದಿನಗಳಲ್ಲಿ ಇದು ಪಕ್ಕಾ ಆಗಲಿದೆ. ಹಾಗಾಗಿ ಜುಲೈ 31ರಂದು ಜೇಸನ್ ತಾವು ನಿರ್ದೇಶಿಸಿರುವ 'ಸಿಗ್ಮಾ' ಸಿನಿಮಾ ಬಿಡುಗಡೆ ಮಾಡದಿರಲು ನಿರ್ಧರಿಸಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ. ಸುಖಾಸುಮ್ಮನೆ ಕ್ಲ್ಯಾಶ್ ಬೇಡ, ಇದು ಬೇರೆಯದ್ದೇ ಸಂದೇಶ ರವಾನೆ ಮಾಡುತ್ತದೆ ಎನ್ನುವ ಕಾರಣಕ್ಕೆ ಜೇಸನ್ ಈ ನಿರ್ಣಯಕ್ಕೆ ಬಂದಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಇಲ್ಲ. 4 ದಿನಗಳ ಹಿಂದೆ 'ಜನನಾಯಗನ್' ಸಿನಿಮಾ ಸೆನ್ಸಾರ್ ಮುಗಿಸಿತ್ತು. 40 ಸೆಕೆಂಡ್‌ಗಳ ಹೊಸ ದೃಶ್ಯವನ್ನು ಸೇರಿಸಿ ಮತ್ತೆ ಸೆನ್ಸಾರ್ ಮಾಡಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ವಿಜಯ್ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ದೃಶ್ಯಗಳನ್ನು ಸೇರಿಸಿರುವ ಸಾಧ್ಯತೆಯಿದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಆ ಬಗ್ಗೆ ಖಚಿತ ಮಾಹಿತಿ ಇಲ್ಲ.'ಸಿಗ್ಮಾ' ಚಿತ್ರ ಮುಂದಕ್ಕೆ?
ತಂದೆ- ಮಗನ ನಡುವೆ ಬಿರುಕು ?
'ಸಿಗ್ಮಾ' ರಿಲೀಸ್ ಡೇಟ್ ಬದಲು ?
'ಜನನಾಯಗನ್' ಮತ್ತೆ ಸೆನ್ಸಾರ್ ?
More Articles