ಈ ವರ್ಷ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಪ್ರಭಾಸ್ ನಟನೆಯ 'ಫೌಜಿ' ಸಿನಿಮಾ ಮರೆಯುವಂತಿಲ್ಲ. ಈ ವರ್ಷದ ಆರಂಭದಲ್ಲಿ 'ರಾಜಾಸಾಬ್' ಆಗಿ ಬಂದು ಯಂಗ್ ರೆಬಲ್ ಸ್ಟಾರ್ ಸೋಲುಂಡಿದ್ದರು. ಇದೇ ವರ್ಷ ಮತ್ತೊಂದು ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಈ ಐತಿಹಾಸಿಕ ಕಥಾಹಂದರದ ಸಿನಿಮಾ ನಿರ್ಮಾಣವಾಗ್ತಿದೆ. ಅಧಿಕೃತವಾಗಿ ರಿಲೀಸ್ ಡೇಟ್ ಘೋಷಣೆಯಾಗಿದೆ.
'ಸೀತಾರಾಮಂ' ಸಿನಿಮಾ ಕಟ್ಟಿಕೊಟ್ಟು ಸಕ್ಸಸ್ ಕಂಡಿದ್ದ ಹನು ರಾಘವಪುಡಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇಮಾನ್ವಿ ಇಸ್ಮಾಯಿಲ್ ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ಜಯಪ್ರದ, ರಾಹುಲ್ ರವಿಂದ್ರನ್ ಸೇರಿ ದೊಡ್ಡ ತಾರಾಗಣ 'ಫೌಜಿ' ಚಿತ್ರದಲ್ಲಿದೆ. ಪ್ರಭಾಸ್ ಸೈನಿಕನ ಪಾತ್ರದಲ್ಲಿ ನಟಿಸಿದ್ದಾರೆ. ಸ್ವಾತಂತ್ರ್ಯ ಪೂರ್ವ ಕಾಲಘಟ್ಟದ ಕಥೆಯನ್ನು ಚಿತ್ರದಲ್ಲಿ ಹೇಳಲಾಗ್ತಿದೆ. ಡಿಸೆಂಬರ್ 3ರಂದು ಸಿನಿಮಾ ತೆರೆಗೆ ಬರಲಿದೆ.
ಖಡಕ್ ಪೋಸ್ಟರ್ ಜೊತೆಗೆ 'ಫೌಜಿ' ರಿಲೀಸ್ ಬಗ್ಗೆ ಚಿತ್ರತಂಡ ಅಪ್‌ಡೇಟ್ ಕೊಟ್ಟಿದೆ. ಕತ್ತಿ ಹಿಡಿದು ರಕ್ತಸಿಕ್ತ ಅವತಾರದಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡ್ತಿದೆ. ಕನ್ನಡ ಸೇರಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಆಕ್ಷನ್ ಥ್ರಿಲ್ಲರ್ ಸಿನಿಮಾ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಬಹುದು ಎನ್ನುವ ಲೆಕ್ಕಾಚಾರ ಶುರುವಾಗಿದೆ.More Articles