ತೆಲುಗು ನಟ ಜ್ಯೂ. ಎನ್‌ಟಿಆರ್ ರಾಜಕೀಯರಂಗ ಪ್ರವೇಶಿಸುತ್ತಾರೆ. ತಾತನ ರೀತಿಯಲ್ಲೇ ಆಂಧ್ರ, ತೆಲಂಗಾಣ ರಾಜ್ಯಗಳಲ್ಲಿ ದರ್ಬಾರ್ ನಡೆಸುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತಿತ್ತು. ಜುಲೈ 18 ರಂದು ತಾರಕ್ ಪ್ರಮುಖ ಘೋಷಣೆ ಮಾಡುತ್ತಾರೆ, ತಮ್ಮ ಅಭಿಮಾನಿಗಳನ್ನೆಲ್ಲಾ ಒಂದೆಡೆ ಸೇರಿಸಿ ರಾಜಕೀಯ ಎಂಟ್ರಿಗೆ ನಾಂದಿ ಹಾಡುತ್ತಾರೆ ಎನ್ನುವ ಊಹಾಪೋಹ ಶುರುವಾಗಿತ್ತು. ಈ ಬಗ್ಗೆ ಇದೀಗ ಸ್ವತಃ ಎನ್‌ಟಿಆರ್ ಕಾರ್ಯಾಲಯದಿಂದಲೇ ಅಧಿಕೃತವಾಗಿ ಪ್ರೆಸ್‌ನೋಟ್ ಬಂದಿದ್ದು ಎಲ್ಲಾ ವದಂತಿಗೆ ತೆರೆ ಎಳೆಯಲಾಗಿದೆ.
'ಉರು-ವಾಡ' ಹೆಸರಿನಲ್ಲಿ ಗ್ರಾಮೀಣ ಪ್ರದೇಶದ ಬಡವರು ಮತ್ತು ಹಿಂದುಳಿದ ವರ್ಗಗಳಿಗೆ ಸೇವೆ ಸಲ್ಲಿಸುವ ಉದ್ದೇಶದಿಂದ ಜುಲೈ 18ರಂದು ಒಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಜ್ಯೂ. ಎನ್‌ಟಿಆರ್ ಬರ್ತಾರೆ ಎಂದು RAW NTR ಹೆಸರಿನ ಸಂಘ ಘೋಷಿಸಿತ್ತು. ಇದ್ದಕ್ಕಿದಂತೆ ತಾರಕ್ ಈ ಸಮಾಜಮುಖಿ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿಚಾರ ಚರ್ಚೆ ಹುಟ್ಟಾಕ್ಕಿತ್ತು. ಎನ್‌ಟಿಆರ್ ಪೊಲಿಟಿಕಲ್ ಎಂಟ್ರಿಗಾಗಿ ನಡೆಸುತ್ತಿರುವ ಕಾರ್ಯಕ್ರಮ ಇದು ಎನ್ನುವಂತೆ ಚರ್ಚೆ ನಡೆದಿತ್ತು. ಅಭಿಮಾನಿಗಳು ಇದು ನಿಜ ಎಂದೇ ಭಾವಿಸಿದ್ದರು. ಆದರೆ ಅದೆಲ್ಲಾ ಸುಳ್ಳು ನಮಗೂ RAW NTR ಸಂಘಕ್ಕೂ ಸಂಬಂಧ ಇಲ್ಲ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
RAW NTR ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಒಂದು ಸಂಸ್ಥೆಯು NTR ಅವರಿಗೆ ಸಂಬಂಧಿಸಿದ್ದು ಎನ್ನುವಂತೆ ವರ್ತಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. NTR ಅವರು ಅಥವಾ ಅವರ ಕಚೇರಿಗೂ ಹಾಗೂ RAW NTR ಸಂಘಕ್ಕೂ ಅಥವಾ ಅದರ ಚಟುವಟಿಕೆಗಳಿಗೂ ಯಾವುದೇ ಸಂಬಂಧ, ಅನುಮತಿ ಅಥವಾ ಒಳಗೊಳ್ಳುವಿಕೆ ಇಲ್ಲ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ಆ ಸಂಸ್ಥೆಗೆ NTR ಅವರನ್ನು ಪ್ರತಿನಿಧಿಸುವ ಯಾವುದೇ ಹಕ್ಕಿಲ್ಲ. ಅವರ ಹೆಸರಿನಲ್ಲಿ ಯಾವುದೇ ಘೋಷಣೆ ಮಾಡಲು ಅಥವಾ ಕಾರ್ಯಕ್ರಮಗಳನ್ನು ಆಯೋಜಿಸಲು ಯಾವುದೇ ಅಧಿಕಾರವಿಲ್ಲ ಎಂದು ಪ್ರೆಸ್‌ನೋಟ್‌ನಲ್ಲಿ ಸ್ಪಷ್ಟಪಡಿಸಲಾಗಿದೆ. NTR ಅವರಿಗೆ ಸಂಬಂಧಿಸಿದ ಯಾವುದೇ ಸೇವಾ ಕಾರ್ಯಕ್ರಮ, ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮ, ಅಧಿಕೃತ ಘೋಷಣೆ ಅಥವಾ ಇತರ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು NTR ಅಥವಾ ಅವರ ಅಧಿಕೃತ ತಂಡ ಹೇಳುತ್ತದೆ. ಅನಧಿಕೃತ ವ್ಯಕ್ತಿಗಳು ಅಥವಾ ಸಂಸ್ಥೆಗಳು ಪ್ರಚಾರ ಮಾಡುವ ಮಾಹಿತಿ, ಪ್ರಕಟಣೆಗಳು ಅಥವಾ ಕಾರ್ಯಕ್ರಮಗಳನ್ನು ಅಧಿಕೃತ ಅಥವಾ ವಿಶ್ವಾಸಾರ್ಹವೆಂದು ಪರಿಗಣಿಸಬಾರದು. ಈ ವಿಷಯದ ಕುರಿತು ಇದು ನಮ್ಮ ಅಂತಿಮ ವಿವರಣೆಯಾಗಿದೆ. ಈ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ತಪ್ಪು ಕಲ್ಪನೆಗಳು, ವದಂತಿಗಳು ಮತ್ತು ಊಹಾಪೋಹಗಳಿಗೆ ಇದರಿಂದ ಸ್ಪಷ್ಟನೆ ಸಿಕ್ಕಿದೆ ಎಂದು ನಾವು ಭಾವಿಸುತ್ತೇವೆ. ಪರಿಶೀಲಿಸದೇ ಮಾಧ್ಯಮಗಳು ಯಾವುದನ್ನು ನಂಬಬೇಡಿ ಎಂದು ಮನವಿ ಮಾಡಲಾಗಿದೆ.ಪ್ರೆಸ್‌ನೋಟ್
More Articles