ಹೊಸ ಸಿನಿಮಾಗಳು ಕೂಡ ಈಗ ಬಹಳ ಬೇಗ ಓಟಿಟಿಗೆ ಬರ್ತಿವೆ. ಅಷ್ಟೇ ಬೇಗ ಟಿವಿಯಲ್ಲಿ ಪ್ರಸಾರವಾಗುತ್ತದೆ. ಬಹುತೇಕ ಹಳೇ ಸಿನಿಮಾಗಳು ಯುಟ್ಯೂಬ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಹೊಸ ಸಿನಿಮಾಗಳನ್ನು ಯುಟ್ಯೂಬ್‌ಗೆ ಅಪ್‌ಲೋಡ್ ಮಾಡುವ ಪ್ರಯತ್ನ ಇತ್ತೀಚೆಗೆ ನಡೀತಿದೆ. ಆಮೀರ್ ಖಾನ್ ತಮ್ಮ 'ಸಿತಾರೆ ಜಮೀನ್ ಪರ್' ಚಿತ್ರವನ್ನು ಓಟಿಟಿಗೆ ಬಿಡದೇ ನೇರವಾಗಿ ಯೂಟ್ಯೂಬ್‌ಗೆ ಬಿಟ್ಟಿದ್ದರು.

Advertisement

ಇದೀಗ ತೆಲುಗಿನ 'ಕಣ್ಣಪ್ಪ' ಸಿನಿಮಾ ಯೂಟ್ಯೂಬ್‌ಗೆ ಬಂದಿದೆ. ಕಳೆದ ವರ್ಷ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬಂದಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಗೆಲ್ಲಲಿಲ್ಲ. ಆಕ್ಷಯ್‌ಕುಮಾರ್, ಪ್ರಭಾಸ್ ಹಾಗೂ ಮೋಹನ್ ಲಾಲ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಮಗನಿಗಾಗಿ ಮೋಹನ್ ಬಾಬು ಸಿನಿಮಾ ನಿರ್ಮಾಣ ಮಾಡಿದ್ದರು. ಕಣ್ಣಪ್ಪನ ಪಾತ್ರದಲ್ಲಿ ಮಂಚು ವಿಷ್ಣು ನಟಿಸಿದ್ದರು.

Advertisement

ಮುಕೇಶ್ ಕುಮಾರ್ ಸಿಂಗ್ ನಿರ್ದೇಶನದ ಪೌರಾಣಿಕ ಭಕ್ತಿ ಪ್ರಧಾನ ಚಿತ್ರಕ್ಕೆ ಹಾಲಿವುಡ್ ತಂತ್ರಜ್ಞರು ಕೆಲಸ ಮಾಡಿದ್ದರು. ವರ್ಷದ ಹಿಂದೆ ಸಿನಿಮಾ ತೆರೆಕಂಡು ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿತ್ತು. ರುದ್ರನಾಗಿ ಪ್ರಭಾಸ್, ಶಿವನಾಗಿ ಅಕ್ಷಯ್‌ಕುಮಾರ್, ಪಾರ್ವತಿಯಾಗಿ ಕಾಜಲ್ ಅಗರ್‌ವಾಲ್, ಕಿರಾಟನಾಗಿ ಮೋಹಲ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದು ಚಿತ್ರದ ಬಗ್ಗೆ ನಿರೀಕ್ಷೆ ಮೂಡಿಸಿತ್ತು. ಪ್ರಭಾಸ್ ಹಾಗೂ ಮೋಹನ್ ಲಾಲ್ ದೃಶ್ಯಗಳು ತೆರೆಮೇಲೆ ಮ್ಯಾಜಿಕ್ ಮಾಡಿತ್ತು. ಇನ್ನುಳಿದಂತೆ ಸಿನಿಮಾ ನಿರಾಸೆ ಮೂಡಿಸಿತ್ತು.

ಯೂಟ್ಯೂಬ್‌ನಲ್ಲಿ ಸಿನಿಮಾ

ಹೌದು.. 'ಕಣ್ಣಪ್ಪ' ಸಿನಿಮಾ ಈಗ ಯೂಟ್ಯೂಬ್‌ನಲ್ಲಿ ವೀಕ್ಷಣೆಗೆ ಸಿಗುತ್ತಿದೆ. ತೆರೆಕಂಡ ಒಂದೇ ವರ್ಷಕ್ಕೆ ಸಿನಿಮಾ ಉಚಿತವಾಗಿ ಯೂಟ್ಯೂಬ್‌ನಲ್ಲಿ ಸಿಗುತ್ತಿರುವುದು ವಿಶೇಷ. ಸಿನಿಮಾ ನಿರ್ಮಾಣಕ್ಕೆ ಕೈಜೋಡಿಸಿದ್ದ AVAA Entertainment ಸಂಸ್ಥೆ ತಮ್ಮ ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿ ಸಿನಿಮಾ ಅಪ್‌ಲೋಡ್ ಮಾಡಿದ್ದಾರೆ. ಉಚಿತವಾಗಿಯೇ ಸಿನಿಮಾ ನೋಡುವ ಅವಕಾಶ ಸಿಕ್ಕಿದೆ. ಕನ್ನಡಕ್ಕೂ ಡಬ್ ಆಗಿ ಸ್ಟ್ರೀಮಿಂಗ್ ಆಗ್ತಿದೆ.

Advertisement

ಶಿವಮೆಚ್ಚಿದ ಕಣ್ಣಪ್ಪ ರೀಮೆಕ್

ಭಕ್ತ ಕಣ್ಣಪ್ಪನ ಕಥೆ ಈಗಾಗಲೇ ನಾಟಕ ಹಾಗೂ ಸಿನಿಮಾಗಳಲ್ಲಿ ಬಂದು ಹೋಗಿದೆ. ಕನ್ನಡದಲ್ಲಿ 'ಬೇಡರ ಕಣ್ಣಪ್ಪ' ಹಾಗೂ 'ಶಿವಮೆಚ್ಚಿದ ಕಣ್ಣಪ್ಪ' ಹೆಸರುಗಳಲ್ಲಿ ಸಿನಿಮಾ ತೆರೆಗೆ ಬಂದಿತ್ತು. ಶಿವರಾಜ್‌ಕುಮಾರ್ ನಟನೆಯ 'ಶಿವಮೆಚ್ಚಿದ ಕಣ್ಣಪ್ಪ' ಚಿತ್ರದಲ್ಲಿ ಡಾ. ರಾಜ್‌ಕುಮಾರ್ ಕೂಡ ಶಿವನಾಗಿ ನಟಿಸಿದ್ದರು. ತೆಲುಗಿನಲ್ಲಿ ಕೂಡ 'ಕಣ್ಣಪ್ಪ' ಸಿನಿಮಾ ತೆರೆಗೆ ಬಂದಿತ್ತು. ಆದರೆ 'ಶಿವಮೆಚ್ಚಿದ ಕಣ್ಣಪ್ಪ' ಚಿತ್ರದಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿತ್ತು. ಇದೇ ಕಥೆಯನ್ನು ಈಗ 'ಕಣ್ಣಪ್ಪ' ಮಂಚು ವಿಷ್ಣು ಹೆಸರಿನಲ್ಲಿ ನಟಿಸಿದ್ದಾರೆ. ಒಂದರ್ಥದಲ್ಲಿ ರೀಮೆಕ್ ಎನ್ನಬಹುದು.

ಬಾಕ್ಸಾಫೀಸ್‌ನಲ್ಲಿ ಸೋಲು

ಅಂದಾಜು 200 ಕೋಟಿ ರೂ. ಬಜೆಟ್‌ನಲ್ಲಿ 'ಕಣ್ಣಪ್ಪ' ಸಿನಿಮಾ ನಿರ್ಮಾಣವಾಗಿರುವುದಾಗಿ ವರದಿಯಾಗಿತ್ತು. ಆದರೆ ಬಾಕ್ಸಾಫೀಸ್ ಕಲೆಕ್ಷನ್ ವಿಚಾರದಲ್ಲಿ ಭಾರೀ ಹಿನ್ನಡೆಯಾಗಿತ್ತು. 50-60 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡುವುದರಲ್ಲಿ ಕೂಡ ಸಿನಿಮಾ ಸೋತಿತ್ತು. ಹಾಗಾಗಿ ನಿರ್ಮಾಪಕರಿಗೆ ಭಾರೀ ನಷ್ಟ ತಂದೊಡ್ಡಿತ್ತು. ಬಹಳ ನಿರೀಕ್ಷೆ ಮೂಡಿಸಿದ್ದ ಸಿನಿಮಾ ನಿರಾಸೆ ಮೂಡಿಸಿತ್ತು. ಓಟಿಟಿ ರೈಟ್ಸ್ ಕೊಂಡುಕೊಳ್ಳಲು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಹಿಂದೇಟು ಹಾಕಿದ್ದವು.

Advertisement

ಪ್ರಭಾಸ್ ಮಾಡಬೇಕಿದ್ದ ಚಿತ್ರ

ಅಣ್ಣಾವ್ರ 'ಬೇಡರ ಕಣ್ಣಪ್ಪ' ಚಿತ್ರವನ್ನು ಕೃಷ್ಣಂರಾಜು ದಶಕಗಳ ಹಿಂದೆಯೇ ರೀಮೆಕ್ ಮಾಡಿದ್ದರು. ಇದೇ ಕಥೆಯಲ್ಲಿ ತಮ್ಮನ ಮಗ ಪ್ರಭಾಸ್ ನಟಿಸಬೇಕು ಎನ್ನುವುದು ಕೃಷ್ಣಂರಾಜು ಮಹದಾಸೆ ಆಗಿತ್ತು. ಪ್ರಭಾಸ್ ಕೂಡ ಈ ಬಗ್ಗೆ ಹಿಂದೆ ಮಾತನಾಡಿದ್ದರು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ಅದೇ ಕಾರಣಕ್ಕೆ ಮಂಚು ವಿಷ್ಣು ನಟನೆಯ 'ಕಣ್ಣಪ್ಪ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುವಂತೆ ಕೇಳಿದಾಗ ಒಪ್ಪಿ ನಟಿಸಿದ್ದರು.