''ಬಿಗ್ ಬಾಸ್'' ಕೇವಲ ಕಾರ್ಯಕ್ರಮ ನಡೆಸಿಕೊಡುವ ಸ್ಟಾರ್ ನಿರೂಪಕರಿಗೆ ಮಾತ್ರ ಚಿನ್ನದ ಮೊಟ್ಟೆ ಇಡುವ ಕೋಳಿ ಅಲ್ಲ. ಬದಲಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಫರ್ಧಿಗಳಿಗೆ ಕೂಡ ಇಲ್ಲಿ ಭಾರೀ ಹಣವನ್ನು ನೀಡಲಾಗುತ್ತೆ. ಕೆಲವರು ಇಲ್ಲಿ ವಾರಕ್ಕೆ ಲಕ್ಷ ಎಣಿಸಿದರೆ ಇನ್ನೂ ಕೆಲವರ ಸಂಭಾವನೆ ವಾರದ ಲೆಕ್ಕ ತಪ್ಪಿ ಹೋಗುವಷ್ಟಿರುತ್ತೆ. ''ಬಿಗ್ ಬಾಸ್‌''ನಲ್ಲಿ ಹೇಗಾದರೂ ಮಾಡಿ ಭಾಗವಹಿಸಬೇಕು ಎಂದು ಹಲವರು ಕನಸು ಕಾಣಲು ಇದು ಕೂಡ ಪ್ರಮುಖ ಕಾರಣ.

Advertisement

ಆದರೆ ಈ ಬಾರಿ ಈ ಕನಸು ಸ್ಫರ್ಧಿಗಳ ಪಾಲಿಗೆ ತುಂಬಾನೇ ದುಬಾರಿ ಆಗಬಹುದು. ಯಾಕೆಂದರೆ ಈ ಹಿಂದೆ ಮನೆಯಿಂದ ಬಹುಬೇಗ ಹೊರ ಬರುವ ಭಯ ಮಾತ್ರ ಸ್ಫರ್ಧಿಗಳಲ್ಲಿ ಇರುತ್ತಿತ್ತು. ಇಮೇಜ್ ಡ್ಯಾಮೇಜ್ ಆಗಬಾರದು ಎಂಬ ಸ್ಥಿತಪ್ರಜ್ಞೆ ಇರುತ್ತಿತ್ತು. ಆದರೆ ಈಗ ಮನೆಯಲ್ಲಿದ್ದು ಮಾನಸಿಕ ಒತ್ತಡಕ್ಕೆ ಒಳಗಾಗುವುದಲ್ಲದೆ ಸ್ಫರ್ಧಿಗಳೇ ''ಬಿಗ್ ಬಾಸ್‌''ಗೆ ಹಣವನ್ನು ಕೂಡ ನೀಡಬೇಕು. ಇಂತಹದ್ದೊಂದು ಸುದ್ದಿ ಸದ್ಯ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಚರ್ಚೆಯೂ ನಡೆಯುತ್ತಿದೆ.

Advertisement

ಹೌದು. ಇನ್ನೇನು ಕೆಲವೇ ದಿನ. ಪಕ್ಕದ ಆಂಧ್ರದಲ್ಲಿ ''ಬಿಗ್ ಬಾಸ್''ನ ಹತ್ತನೇ ಸೀಸನ್ ಶುರುವಾಗಲಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಅದ್ಧೂರಿಯಾಗಿ ಲಾಂಚ್ ಆಗುವ ಸಾಧ್ಯತೆ ಇದೆ. ಈ ಬಾರಿ ಕೂಡ ನಾಗಾರ್ಜುನ ಅವರಿಗೆ ಕಾರ್ಯಕ್ರಮ ನಡೆಸಿಕೊಡುವ ಜವಾಬ್ಧಾರಿ ವಹಿಸಲಾಗಿದೆ.

ಇನ್ನು ಪ್ರತಿ ವರ್ಷದಂತೆ ಈ ವರ್ಷ ಕೂಡ ಅವರಿವರ ಹೆಸರು ಅಂತೆ-ಕಂತೆಯ ಸಂತೆಯಲ್ಲಿ ಕೇಳಿ ಬರುತ್ತಿದೆ. ಆ ಪೈಕಿ ಯಾರೆಲ್ಲ ಹೋಗ್ತಾರೆ ಎನ್ನುವುದಕ್ಕೆ ನಿಖರವಾದ ಉತ್ತರ ಕಾರ್ಯಕ್ರಮ ಶುರುವಾದ ದಿನದಂದೇ ಗೊತ್ತಾಗಲಿದೆ ಆದರೂ, ತೆಲುಗು ''ಬಿಗ್ ಬಾಸ್‌''ನಲ್ಲಿ ಈ ಬಾರಿ ನಿಯಮ ಉಲ್ಲಂಘಿಸಿದರೆ 10 ಲಕ್ಷ ದಂಡವನ್ನು ಸ್ಫರ್ಧಿಗಳಿಗೆ ಹಾಕಲಾಗುತ್ತೆ ಎಂಬ ಮಾತು ಕೇಳಿ ಬರುತ್ತಿದೆ.

Advertisement

10 ಲಕ್ಷ ದಂಡ , ಯಾಕೆ ಈ ನಿರ್ಧಾರ

ಸಾಮಾನ್ಯವಾಗಿ ಪ್ರತಿ ವರ್ಷ ''ಬಿಗ್ ಬಾಸ್'' ಶುರುವಾಗುವ ಮುನ್ನ ಎಲ್ಲ ಭಾಷೆಗಳಲ್ಲಿಯೂ ಈ ಕಾರ್ಯಕ್ರಮದ ಕುರಿತು ಅಪಸ್ವರ ಕೇಳಿ ಬರುತ್ತೆ. ಮಕ್ಕಳಿಂದ ಹಿಡಿದು ವೃದ್ದರವರೆಗೆ ನೋಡುವ ಈ ಕಾರ್ಯಕ್ರಮದಲ್ಲಿ ನೀಡಲಾಗುವ ಸಂದೇಶವಾದರೇನು ಎನ್ನುವ ಪ್ರಶ್ನೆ ಎದ್ದೇಳುತ್ತೆ. ಇನ್ನೂ ಕೆಲ ಒಮ್ಮೆ ಈ ವ್ಯಕ್ತಿ ನಿಂದನೆ, ಅಶ್ಲೀಲತೆ ಎಲ್ಲೆಯನ್ನು ಮೀರಿರುತ್ತೆ. ಇದೆಲ್ಲದಕ್ಕೂ ಈಗ ಕಡಿವಾಣ ಹಾಕಲು ಕಾರ್ಯಕ್ರಮದ ಆಯೋಜಕರು ಮುಂದಾಗಿದ್ದಾರೆ ಎನ್ನುವುದು ಸದ್ಯದ ನ್ಯೂಸ್.

ಯಾವೆಲ್ಲ ವಿಚಾರ ಮಾತನಾಡುವಂತಿಲ್ಲ

ಆ ಪ್ರಕಾರ ಈ ಬಾರಿಯ ತೆಲುಗು ''ಬಿಗ್ ಬಾಸ್‌''ನಲ್ಲಿ ಧರ್ಮ, ಭಾಷೆ, ಪ್ರಾಂತ್ಯದ ಕುರಿತು ಮಾತನಾಡುವಂತೆ ಇಲ್ಲ. ವೈಯಕ್ತಿಕವಾಗಿ ಗುರಿಯಾಗಿಸಿಕೊಂಡು ದೈಹಿಕ ಅಥವಾ ಮೌಖಿಕ ದಾಳಿಯನ್ನು ಕೂಡ ಮಾಡುವಂತೆ ಇಲ್ಲ. ಒಂದು ವೇಳೆ ಯಾರಾದರೂ ಈ ನಿಯಮ ಮುರಿದರೆ ಹತ್ತು ಲಕ್ಷ ದಂಡ ವಿಧಿಸಲಾಗುತ್ತೆ. ದಂಡದ ಮೊತ್ತವನ್ನು ಸ್ಫರ್ಧಿಗಳ ಸಂಭಾವನೆಯಲ್ಲಿ ಕಡಿತಗೊಳಿಸಲಾಗುತ್ತೆ.

Advertisement

8ನೇ ಸೀಸನ್‌ನಲ್ಲಿ ಭುಗಿಲೆದ್ದಿತ್ತು ವಿವಾದ

''ಬಿಗ್ ಬಾಸ್''8ರಲ್ಲಿ ಧರ್ಮದ ವಿಷಯ ಮನೆಯಲ್ಲಿ ಹೆಚ್ಚು ಸದ್ದು ಮಾಡಿತ್ತು. ಆ ಸಮಯದಲ್ಲಿ ಸ್ಫರ್ಧಿಗಳಾಗಿದ್ದ ನಬೀಲ್ ಮತ್ತು ಮೆಹಬೂಬ್ ಅವರ ಸಮುದಾಯದ ಕುರಿತು ಮನೆಯಲ್ಲಿನ ಸಂಭಾಷಣೆ ವಿವಾದದ ಕಿಡಿ ಹೊತ್ತಿಸಿತ್ತು.

ಈಗಾಗಲೇ ''ಬಿಗ್ ಬಾಸ್‌''ನಲ್ಲಿರುವ ನಿಯಮಗಳ ಪ್ರಕಾರ ಮನೆಯಲ್ಲಿ ಕೆಲ ವಿಚಾರಗಳನ್ನು ಪ್ರಸ್ತಾಪಿಸುವಂತೆ ಇಲ್ಲ. ಆದರೂ ಕೂಡ ನಿಯಮಗಳ ಉಲ್ಲಂಘನೆಯಾಗುತ್ತಲೇ ಇದೆ. ಈ ಹಿನ್ನೆಲೆ ದಂಡ ಹಾಕಿದರೆ ನಿಯಮಗಳ ಪರಿಪಾಲನೆ ಸರಿಯಾಗಿರುತ್ತೆ ಎನ್ನುವ ಉದ್ದೇಶದಿಂದ ಆಯೋಜಕರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂಬ ಚರ್ಚೆ ಹೈದರಾಬಾದ್‌ ನ ರಾಮೋಜಿ ರಾವ್ ಫಿಲ್ಮ್ ಸಿಟಿ ಸುತ್ತ ಮುತ್ತ ಕೇಳಿ ಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಈ ಕುರಿತು ಚರ್ಚೆ ನಡೆಯುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಅಧಿಕೃತವಾದ ಸ್ಪಷ್ಟನೆ ಸಿಗುವ ಸಾಧ್ಯತೆ ಇದೆ.