ಬಾಲಿವುಡ್ ಬಾಹು ಬಂಧನದಲ್ಲಿ ನಟಿ ಶಿಲ್ಪಾ ಶೆಟ್ಟಿ
ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದಾಯಿತು. ಆದರೂ ಆಕೆಯನ್ನು ಇನ್ನೂ ಪಾತ್ರಗಳು ಹುಡುಕಿಕೊಂಡು ಬರುತ್ತಿವೆಯಂತೆ. ಆದರೆ ತಾವು ಯಾವುದೇ ಚಿತ್ರಗಳನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ತಾವು ಈಗಾಗಲೆ ಮಾಡಿದಂತಹ ಪಾತ್ರಗಳೇ ಮತ್ತೆ ಮತ್ತೆ ತಮ್ಮನ್ನು ಹುಡುಕಿಕೊಂಡು ಬರುತ್ತಿವೆ. ಹಾಗಾಗಿ ತಾವು ಯಾವುದೇ ಚಿತ್ರಕ್ಕೂ ಸಹಿಹಾಕುತ್ತಿಲ್ಲ. ಪ್ರತಿಭೆಗೆ ಸವಾಲೊಡ್ಡುವಂತಹ ಪಾತ್ರಗಳು ಬಂದರೆ ಮನಸ್ಸು ಬದಲಾಯಿಸಿಕೊಳ್ಳುವ ಯೋಚನೆ ಮಾಡುತ್ತೇನೆ ಎಂದಿದ್ದಾರೆ.
ಸದ್ಯಕ್ಕೆ ತಾನು ಮಹಿಳಾ ಉದ್ಯಮಿಯಾಗಿ ಬ್ಯುಸಿಯಾಗಿದ್ದೇನೆ. ಸಂಸಾರದ ಜವಾಬ್ದಾರಿಗಳು ಹೆಚ್ಚಾಗಿವೆ. ಪ್ರಸ್ತುತ ಚಿತ್ರರಂಗದ ಕಡೆ ಮುಖ ಮಾಡುವ ಯೋಚನೆ ಇಲ್ಲ. ಚಿತ್ರರಂಗದಿಂದ ದೂರವಾಗಿದ್ದೇನೆ ಎಂಬ ಕೊರಗು ತಮ್ಮನ್ನು ಕಾಡುತ್ತಿಲ್ಲ ಎಂದಿದ್ದಾರೆ.
ಸದ್ಯಕ್ಕೆ ಸ್ಪಾ ಬ್ಯುಸಿನೆಸ್, ರಾಜಸ್ತಾನ್ ರಾಯಲ್ಸ್ ಐಪಿಎಲ್ ತಂಡ, ತಮ್ಮದೇ ಆದಂತಹ ಯೋಗಾ ಡಿವಿಡಿಗಳು ಹೀಗೆ ಬಿಡುವಿಲ್ಲದ ಕೆಲಸಗಳಲ್ಲಿ ತೊಡಗಿಕೊಂಡಿದ್ದೇನೆ. ಶೀಘ್ರದಲ್ಲೆ ತಮ್ಮದೇ ನಿರ್ಮಾಣ ಸಂಸ್ಥೆಯ ಮೂಲಕ ಚಿತ್ರ ನಿರ್ಮಾಣಕ್ಕೂ ಇಳಿಯುವುದಾಗಿ 36ರ ಹರೆಯದ ಶಿಲ್ಪಾ ಶೆಟ್ಟಿ ಹೇಳಿದ್ದಾರೆ. (ಏಜೆನ್ಸೀಸ್)


Click it and Unblock the Notifications











