ಅಭಿಷೇಕ್ ಚಿತ್ರದಲ್ಲಿ ಧನುಷ್ 'ಕೊಲವೆರಿ' ಹಾಡು
ಎಲ್ಲವೂ ಅಂದುಕೊಂಡಂತೆ ನಡೆದರೆ ಈಗ ದೇಶದಲ್ಲೆಡೆ ಮಿಂಚಿನ ಸಂಚಲನ ಸೃಷ್ಟಿಸಿರುವ 'ತಂಗ್ಲಿಷ್' (ತಮಿಳು+ಇಂಗ್ಲಿಷ್) ಕೊಲವೆರಿ...ಡಿ ಹಾಡು ಬಾಲಿವುಡ್ ನಲ್ಲಿ ಬರಲಿದೆ. ಬಾಲಿವುಡ್ ಚಿತ್ರಕ್ಕೆ ಹೊಂದುವಂತೆ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಅದನ್ನು ಬರೆದುಕೊಡುವಂತೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ರಜನಿಕಾಂತ್ ಅಳಿಯ ಧನುಷ್ ರನ್ನು ಕೇಳಿಕೊಂಡಿದ್ದಾರೆ.
ಬಾಲಿವುಡ್ ನಲ್ಲಿ ಅಬಿಷೇಕ್ ಬಚ್ಚನ್ ನಟನೆಯ ಚಿತ್ರದಲ್ಲಿ ಅದನ್ನು ಬಳಸಿಕೊಳ್ಳುವುದಾಗಿ ಹೇಳಿರುವ ಅಮಿತಾಬ್, ತಾವು ಈ ಹಾಡಿನಿಂದ ಬಹಳಷ್ಟು ಪ್ರಭಾವಿತರಾಗಿದ್ದಾಗಿ ತಿಳಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಅಮಿತಾಬ್ ರನ್ನು ಮುಂಬೈನಲ್ಲಿ ಧನುಷ್ ಭೇಟಿ ಮಾಡಿದ್ದರು. ಅದು ಅವಿಸ್ಮರಣೀಯ ಭೇಟಿ ಎಂದೂ ಧನುಷ್ ಟ್ವೀಟ್ ಮಾಡಿದ್ದಾರೆ.
ಹಲವು ದಶಕಗಳಿಂದಲೂ ಅಮಿತಾಬ್ ಮತ್ತು ರಜನಿಕಾಂತ್ ಆಪ್ತಮಿತ್ರರು ಎಂಬುದು ಎಲ್ಲರಿಗೂ ತಿಳಿದಿದೆ. ಇದೀಗ ರಜಿನಿಕಾಂತ್ ಅಳಿಯ ಧನುಷ್ ರ ಸಿಂಪ್ಲಿಸಿಟಿಯನ್ನು ಬಹಳವಾಗಿ ಮೆಚ್ಚಿಕೊಂಡಿರುವ ಅಮಿತಾಬ್, ಅವರನ್ನು ಅಪಾದಮಸ್ತಕ ಹೊಗಳಿದ್ದಾರೆ. ಹಿಂದಿಯಲ್ಲಿ ಧನುಷ್ ಬರೆದ 'ಹಿಂಗ್ಲಿಷ್' (ಹಿಂದಿ+ಇಂಗ್ಲಿಷ್) ಹಾಡು ಯಾವಾಗ ಬರುತ್ತೆ ಎಂದು ಕಾಯುತ್ತಿರಿ. (ಒನ್ ಇಂಡಿಯಾ ಕನ್ನಡ)


Click it and Unblock the Notifications











