ಬಾಬಾ ರಾಮದೇವ್ ಪಂಚೆ ತೊಟ್ಟ ಸಂಜು ಬಾಬಾ
ನಿರ್ದೇಶಕ ಮಣಿಶಂಕರ್ ಗೆ ಥಟ್ಟನೆ ಜ್ಞಾನೋದಯವಾಗಿದೆ. ಬಾಬಾ ರಾಮದೇವ್ ಅವರ ಒಡನಾಟ ಹೊಂದಿರುವ ಮಣಿಗೆ ಭ್ರಷ್ಟಾಚಾರದ ವಿರುದ್ಧ ಕೈಗೊಂಡಿರುವ ಆಮರಣಾಂತ ಉಪವಾಸ ಹಾಗೂ ಇತ್ತೀಚೆಗೆ ದಿಲ್ಲಿಯ ರಾಮ್ ಲೀಲಾ ಮೈದಾನದಲ್ಲಿ ನಡೆದ ಘಟನೆಗಳು ಚಿತ್ರಕಥೆಗೆ ಸ್ಪೂರ್ತಿ ನೀಡಿದೆ.
ಬಾಬಾ ರಾಮದೇವ್ ಅವರನ್ನು ನಾಯಕನನ್ನಾಗಿ ಕಪ್ಪು ಹಣ ವಿರುದ್ಧ ಬೆಳ್ಳಿತೆರೆಯ ಮೂಲಕ ಸಮರ ಸಾರಲು ಮಣಿ ಸಿದ್ಧತೆ ನಡೆಸಿದ್ದಾರೆ. ಯೋಗ ಗುರು ಬಾಬಾ ರಾಮದೇವ್ ಪಾತ್ರಕ್ಕೆ ಖಳನಾಯಕ್ ಖ್ಯಾತಿಯ ಸಂಜು ಬಾಬಾ ಯಾನೆ ಸಂಜಯ್ ದತ್ ಅವರನ್ನು ಆರಿಸಿಕೊಂಡಿದ್ದಾರೆ.
'ಈಗಾಗಲೇ ಚಿತ್ರಕ್ಕೆ ಸಂಜಯ್ ದತ್ ಸೂಕ್ತ ವ್ಯಕ್ತಿ ಎಂದು ನಿರ್ಧರಿಸಿದ್ದೇನೆ. ಆದರೆ ನಟನಿಗೆ ಯಾವುದೇ ವಿಷಯ ತಿಳಿಸಿಲ್ಲ. ಆತ ನನ್ನ ಮಾತನ್ನು ತಳ್ಳಿ ಹಾಕುವುದಿಲ್ಲ. ಚಿತ್ರದ ಕಥೆ ಆ ರೀತಿ ಹೆಣೆಯಲಾಗಿದೆ' ಎಂದು ಮಣಿಶಂಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಾಬಾ ನಿರಶನವು ಪ್ರಮುಖ ಘಟ್ಟ ತಲುಪುತ್ತಿದ್ದಂತೆ ನೇರವಾಗಿ ರಾಮಲೀಲಾ ಮೈದಾನದಲ್ಲಿ ಝಂಡಾ ಊರಿದನಿರ್ದೇಶಕ ಮಣಿ, ಅಲ್ಲಿನ ಪ್ರತಿಯೊಂದು ಘಟನೆಯನ್ನೂ ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿದಿದ್ದಾರಂತೆ. ಹಾಗಾಗಿ ಚಿತ್ರದಲ್ಲಿ ಎಲ್ಲವೂ ರಿಯಲ್ ಆಗಿ ದೃಶ್ಯಗಳನ್ನು ಕಾಣ ಬಹುದಾಗಿದೆ.
ಈ ಹಿಂದೆ ವಿದೇಶಿ ಬ್ಯಾಂಕುಗಳಲ್ಲಿನ ಹಣ ವಾಪಸಾತಿ ಕುರಿತಾದ 'ನಾಕ್ ಔಟ್" ಎಂಬ ಚಿತ್ರ ನಿರ್ದೇಶಿಸಿದ್ದ ಮಣಿ, ಚಿತ್ರದಲ್ಲಿ ರಾಜಕಾರಣಿಗಳೆಲ್ಲರ ವಿದೇಶಿ ಹಣ ವಾಪಸಾತಿಗಾಗಿ ಬೇಡಿಕೆ ಇಟ್ಟಿರುವುದನ್ನು ನೆನಪಿಸಿಕೊಳ್ಳುತ್ತಾರೆ. ಇದೀಗ ರಾಮದೇವ್ ನಡೆಸುತ್ತಿರುವ ಹೋರಾಟ ಅದೇ ಉದ್ದೇಶಕ್ಕಾಗಿದೆ. ಹಾಗಾಗಿ ಅವರ ಬಗ್ಗೆ ಚಿತ್ರ ನಿರ್ಮಿಸಲು ನನಗೆ 'ಕೆಒ" (ನಾಕ್ ಔಟ್) ಪ್ರೇರಣೆಯಾಗಿದೆ ಎಂದಿದ್ದಾರೆ.


Click it and Unblock the Notifications











