ಮತ್ತೆ ಬರಲಿದ್ದಾರೆ ಅಮರ್ ಅಕ್ಬರ್ ಅಂಥೋನಿ
ಅಮರ್ , ಅಕ್ಬರ್ , ಅಂಥೋನಿ ಭಾರತದ 'ವಿವಿಧತೆಯಲ್ಲಿ ಏಕತೆ' ಮಂತ್ರವನ್ನು ಸಾರಿದ, ಚಿಕ್ಕಂದಿನಲ್ಲಿ ಬೇರೆಯಾಗಿ ಕ್ಲೈಮ್ಯಾಕ್ಸ್ ನಲ್ಲಿ ಮತ್ತೆ ಒಂದಾಗುವ ಸೋದರರ ಕಥೆ ಹೇಳುವ ಹಿಂದಿ ಚಿತ್ರರಂಗದ ಪ್ರಮುಖ ಚಿತ್ರ.
ಅಮಿತಾಬ್, ವಿನೋದ್ ಖನ್ನಾ ಹಾಗೂ ರಿಷಿ ಕಪೂರ್ ನಟನೆಯ ಈ ಚಿತ್ರದ ಸಿನಿ ರಸಿಕರ ಡಿವಿಡಿ ಲೈಬ್ರರಿ ಸೇರಿರುವುದರಲ್ಲಿ ಅನುಮಾನೇ ಇಲ್ಲ. ಈಗ ವಿಷಯ ಏನಪ್ಪಾ ಅಂದರೆ, ಈ ಅದ್ಭುತ ಮನರಂಜನೆಯ ಚಿತ್ರವನ್ನು ಮತ್ತೆ ನಿರ್ಮಿಸಲು ಬಾಲಿವುಡ್ ಮಂದಿ ಮುಂದಾಗಿದ್ದಾರೆ. ಹೌದು, ಚಿತ್ರ ರಿಮೇಕ್ ಆಗುತ್ತಿದೆ.
ಹಳೆ ಹಿಂದಿ ಚಿತ್ರವನ್ನು ಮತ್ತೆ ರಿಮೇಕ್ ಮಾಡಿ ಹೊಸ ನಟನರನ್ನು ಹಾಕಿಕೊಂಡು ಸಂಭಾಳಿಸುವುದು, ಗೆಲ್ಲುವುದು ಎಷ್ಟು ಕಷ್ಟ ಎಂಬುದು ಸಿನಿಮಾ ಫ್ಯಾಕ್ಟರಿ ತೆಗೆದಿರುವ ವರ್ಮಾಜಿಗೆ ಗೊತ್ತು. ಶೋಲೆ ಚಿತ್ರವನ್ನು ಮತ್ತೆ ತೆರೆಗೆ ತಂದ ವರ್ಮಾ ಕೈ ಸುಟ್ಟಿಕೊಂಡಿದ್ದು ಸರ್ವವಿದಿತ.
ಆದರೂ ಈಗಿನ ಚಾಲ್ತಿಯಲ್ಲಿರುವ ನಟರನ್ನು ಇಟ್ಟುಕೊಂಡು ಹಳೆ ಚಿತ್ರಗಳನ್ನು ರಿಮೇಕ್ ಮಾಡುವ ಟ್ರೆಂಡ್ ಬಾಲಿವುಡ್ ನಲ್ಲಿ ನಿಂತಿಲ್ಲ. ಅದರಲ್ಲೂ ಅಮಿತಾಬ್ ರ ಹಳೆ ಚಿತ್ರಗಳಿಗೆ ತುಂಬಾ ಬೇಡಿಕೆ ಇದೆ. ಕರಣ್ ಜೋಹರ್ ಅಮಿತಾಬ್ ರ 'ಅಗ್ನಿಪಥ್ ' ಚಿತ್ರವನ್ನು ಹೃತಿಕ್ ರೋಷನ್ ಹಾಕಿಕೊಂಡು ಮಾಡುತ್ತೀನಿ ಎಂದು ಘೋಷಿಸಿದ್ದು ಹಳೆ ಸುದ್ದಿ,
ಈಗ ಅಮರ್, ಅಕ್ಬರ್, ಅಂಥೋನಿ ಚಿತ್ರ ರಿಮೇಕ್ ಆಗುತ್ತಿದೆ
. ಓಹೋ... ಅಭಿಷೇಕ್, ಅಕ್ಷಯ್ ಖನ್ನಾ ಹಾಗೂ ರಣಬೀರ್ ಕಪೂರ್ ತಮ್ಮ ಅಪ್ಪಂದಿರುಗಳು ಮಾಡಿದ ಪಾತ್ರ ಮತ್ತೆ ಮಾಡುತ್ತಾರೆ ಎಂದು ಚಿತ್ರಪ್ರೇಮಿಗಳು ಸುಲಭವಾಗಿ ಊಹಿಸಬಹುದಾದರೂ ಅದು ಸತ್ಯಕ್ಕೆ ದೂರವಾದ ಮಾತು.
1977ರಲ್ಲಿ ಮನಮೋಹನ್ ದೇಸಾಯಿ ನಿರ್ದೇಶಿಸಿದ್ದ ಈ ಚಿತ್ರವನ್ನು ರಮೇಶ್ ತೌರನಿ ನಿರ್ಮಿಸುತ್ತಿದ್ದು, ಡೇವಿಡ್ ಧವನ್ ಈಗ ನಿರ್ದೇಶಿಸುವ ಸಾಧ್ಯತೆಗಳಿವೆ. ಅಂದಹಾಗೆ, ಚಿತ್ರದ ಮುಖ್ಯಭೂಮಿಕೆಯಲ್ಲಿ ಯಾರಿದ್ದಾರೆ ಎಂಬ ಕುತೂಹಲವೇ. ಮತ್ತಾರೂ ಅಲ್ಲ, ಸಲ್ಮಾನ್ ಖಾನ್ ಸೋದರರ ಪೂರ್ತಿ ಖಾನ್ ದಾನ್ ಈ ಚಿತ್ರದಲ್ಲಿ ಕಾಣಿಸಲಿದ್ದಾರೆ.
ಅಂಥೋಣಿಯಾಗಿ ಸಲ್ಮಾನ್ ಖಾನ್, ಅಮರ್ ಆಗಿ ಅರ್ಬಾಜ್ ಖಾನ್ ಹಾಗೂ ಅಕ್ಬರ್ ಆಗಿ ಸೊಹೈಲ್ ಖಾನ್ ಮತ್ತೆ ರಂಜಿಸಲು ತಯಾರಾಗಿದ್ದಾರೆ. ರಿಯಲ್ ಲೈಫಿನ ಸೋದರರು ರೀಲ್ ಲೈಫಿನಲ್ಲೂ ಸೋದರರಾಗಿ ಮಿಂಚುತ್ತಾರೆಯೇ ಕಾದು ನೋಡಬೇಕು. ಸಲ್ಮಾನ್ ಜೋಡಿಯಾಗಿ ಕತ್ರೀನಾ ಕುಣಿಯುವಳೆ ಎಂಬುದು ಅಭಿಮಾನಿಗಳ ಕಾತುರದ ಪ್ರಶ್ನೆ.


Click it and Unblock the Notifications











