12 ನಟಿಯರನ್ನು ಜೈಲಿಗೆ ಕರೆಸಿಕೊಂಡಿದ್ದ ಮಹಾ ವಂಚಕ!
ವಂಚಕ ಸುಖೇಶ್ ಪ್ರಕರಣ ಕೆದಕಿದಷ್ಟು ರಹಸ್ಯಗಳು ಹೊರ ಬೀಳುತ್ತಿವೆ. ಸುಖೇಶ್ ಜೊತೆಗೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಚಿತ್ರಗಳು ಹೊರಬಿದ್ದಿದ್ದು, ಕೇವಲ ಜಾಕ್ವೆಲಿನ್ ಮಾತ್ರವೇ ಅಲ್ಲ, ಬಾಲಿವುಡ್‌ನ ಹಲವು ನಟಿಯರೊಟ್ಟಿಗೆ ಸುಖೇಶ್‌ಗೆ ಸಂಪರ್ಕವಿತ್ತು ಎಂಬ ಅಂಶ ಬಹಿರಂಗವಾಗಿದೆ.
200 ಕೋಟಿ ಹಣ ವಸೂಲಿ ಮತ್ತು ಅಕ್ರಮ ವರ್ಗಾವಣೆ ಕುರಿತು ಇಡಿ ಹಾಗೂ ಸಿಬಿಐ ತನಿಖೆ ನಡೆಸುತ್ತಿದ್ದು, ತನಿಖೆ ವೇಳೆ ಸುಖೇಶ್ ಜೊತೆ ಜಾಕ್ವೆಲಿನ್ ಫರ್ನಾಂಡೀಸ್ ಹಾಗೂ ನಟಿ ನೋರಾ ಫತೇಹಿ ಸಂಪರ್ಕದಲ್ಲಿದ್ದ ವಿಷಯ ಬಹಿರಂಗವಾಗಿತ್ತು.
ಇದೀಗ ಬಹಿರಂಗವಾಗಿರುವ ಹೊಸ ಸುದ್ದಿಯ ಪ್ರಕಾರ, ಸುಖೇಶ್‌ಗೆ ಹಲವು ಬಾಲಿವುಡ್ ನಟಿಯರೊಟ್ಟಿಗೆ ಸಂಪರ್ಕವಿದ್ದು ಸುಮಾರು 12 ನಟಿಯರು ಸುಖೇಶ್ ಅನ್ನು ಕಾಣಲು ಆತನಿದ್ದ ದೆಹಲಿಯ ತಿಹಾರ್ ಜೈಲಿಗೆ ಬಂದಿದ್ದರಂತೆ!

ಸುಖೇಶ್ ಚಂದ್ರಶೇಖರ್ ಕಳೆದ ನಾಲ್ಕು ವರ್ಷಗಳಿಂದ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾನೆ. ಅಲ್ಲಿಂದಲೇ ಫೋನ್ ಕರೆಗಳ ಮೂಲಕ ಉದ್ಯಮಿಗಳು, ಕಾರ್ಪೊರೇಟ್ ಸಂಸ್ಥೆಗಳಿಗೆ ಕರೆ ಮಾಡಿ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ. ಹೊರಗೆ ಇದ್ದ ಸುಖೇಶ್‌ನ ಗೆಳತಿ ಲೀನಾ ಹಾಗೂ ಇನ್ನಿಬ್ಬರು ಸುಖೇಶ್ ಪರವಾಗಿ ಹಣ ಪಡೆಯುವುದು ಇನ್ನಿತರೆ ಚಟುವಟಿಕೆಗಳನ್ನು ಮಾಡುತ್ತಿದ್ದರು.
ಜಾಕ್ವೆಲಿನ್, ನೋರಾ ಫತೇಹಿ ಸೇರಿದಂತೆ ಹಲವು ಬಾಲಿವುಡ್ ನಟಿಯರಿಗೆ ಕೋಟ್ಯಂತರ ಬೆಲೆ ಬಾಳುವ ಉಡುಗೊರೆಗಳನ್ನು ನೀಡಿದ್ದ ಸುಖೇಶ್ ಅವರೊಟ್ಟಿಗೆ ಬಹಳ ಆಪ್ತ ಸಂಬಂಧ ಬೆಳೆಸಿಕೊಂಡಿದ್ದು. ಕಳೆದ ಕೆಲವು ತಿಂಗಳುಗಳಲ್ಲಿ ಸುಖೇಶ್ ಅನ್ನು ಕಾಣಲು ದೆಹಲಿಯ ಜೈಲಿಗೆ ಸುಮಾರು 12 ಮಂದಿ ನಟಿಯರು ಬಂದಿದ್ದರು ಎಂಬುದು ಇಡಿ ತನಿಖೆಯಿಂದ ಗೊತ್ತಾಗಿದೆ.
ಪ್ರಕರಣ ಬಯಲಿಗೆ ಬಂದಿದ್ದು ಹೇಗೆ?
ಮಾಜಿ ಫೋರ್ಟಿಸ್ ಹೆಲ್ತ್‌ಕೇರ್, ರೆಲಿಗೇರ್, ರ್‍ಯಾನ್ ಬ್ಯಾಕ್ಸಿ ಲ್ಯಾಬೊರೇಟರೀಸ್ ಪಾಲುದಾರ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್‌ಗೆ ಕರೆ ಮಾಡಿದ್ದ ಸುಖೇಶ್ ಚಂದ್ರ, ಕಾನೂನು ಸಚಿವಾಲಯದ ಹಿರಿಯ ಅಧಿಕಾರಿಯ ಸಂಪರ್ಕ ತನಗಿದೆಯೆಂದು, ಬಂಧನದಲ್ಲಿರುವ ಶಿವಿಂದರ್ ಮೋಹನ್ ಸಿಂಗ್ ಅನ್ನು ಬಿಡುಗಡೆಗೊಳಿಸುವುದಾಗಿ ಹೇಳಿ ಅದಕ್ಕಾಗಿ 200 ಕೋಟಿ ಬೇಡಿಕೆ ಇಟ್ಟಿದ್ದ ಮತ್ತು ಹಣವನ್ನು ವಸೂಲಿ ಸಹ ಮಾಡಿದ್ದ. ಆದರೆ ಶಿವಿಂದರ್ ಮೋಹನ್ ಸಿಂಗ್ ಬಿಡುಗಡೆ ಆಗಿರಲಿಲ್ಲ. ಹಾಗಾಗಿ ಆದಿತಿ ಸಿಂಗ್ ಪೊಲೀಸರಿಗೆ ದೂರು ನೀಡಿದ್ದರು. ಆ ಪ್ರಕರಣ ಸಿಬಿಐ ಹಾಗೂ ಇಡಿಗೆ ವರ್ಗಾವಣೆಯಾದಾಗ ಸುಖೇಶ್‌ನ ನಿಜ ಬಣ್ಣ ಬಯಲಾಯಿತು. ಸುಖೇಶ್‌ನ ಚೆನ್ನೈ ಮನೆ ಮೇಲೆ ದಾಳಿ ಮಾಡಿದ ಇಡಿ, ಸುಮಾರು 12 ಐಶಾರಾಮಿ ಕಾರುಗಳನ್ನು ವಶಪಡಿಸಿಕೊಂಡಿತು. ಹಲವು ಕೆಜಿ ಚಿನ್ನ, ಇನ್ನೂ ಹಲವು ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿತ್ತು.
ಜಾಕ್ವೆಲಿನ್ ಫರ್ನಾಂಡೀಸ್ ಹಲವು ತಿಂಗಳಿಂದ ಸುಖೇಶ್ ಜೊತೆಗೆ ನಿರಂತರ ಸಂಪರ್ಕದಲ್ಲಿರುವುದು ತನಿಖೆಯಿಂದ ಗೊತ್ತಾಗಿದ್ದು, ಹಣದ ಅಕ್ರಮ ವರ್ಗಾವಣೆಗೆ ಸುಖೇಶ್‌ಗೆ ಜಾಕ್ವೆಲಿನ್ ನೆರವಾಗಿದ್ದಾರೆ ಎಂಬ ಅನುಮಾನದಿಂದ ಜಾಕ್ವೆಲಿನ್‌ರ ವಿಚಾರಣೆಯನ್ನು ಇಡಿ ಮಾಡುತ್ತಿದೆ.


Click it and Unblock the Notifications











