ಬಾಕ್ಸಾಫೀಸ್ ನಲ್ಲಿ ದಬಾಂಗ್ ಬ್ಯಾಂಗ್ ಬ್ಯಾಂಗ್
ಮುಂಬೈ ದಾಳಿ ಕುರಿತಂತೆ ಕಹಿ ಹೇಳಿಕೆ ನೀಡಿದ್ದ ಸಲ್ಮಾನ್ ಖಾನ್ ನ ಫಿಲ್ಟರ್ ಲೆಸ್ ಬಾಯಿಗೆ ಸಿಹಿ ಬಿದ್ದಿದೆ. ಇತ್ತೀಚಿನ ಚಿತ್ರ ದಬಾಂಗ್ ಬಾಕ್ಸಾಫೀಸ್ ನ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡುವತ್ತ ದಾಪುಗಾಲಿರಿಸಿದೆ. ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲೇ ಸುಮಾರು 48 ಕೋಟಿ ರು ಗಳಿಸಿ ಮುನ್ನುಗ್ಗುತ್ತಿದೆ.
ಅಮೀರ್ ಖಾನ್ ರ 3 ಈಡಿಯಟ್ಸ್ ನಿರ್ಮಿಸಿದ್ದ ದಾಖಲೆಯನ್ನು ಈಗಾಗಲೇ ದಬಾಂಗ್ ಮುರಿದಿದೆ. 3 ಈಡಿಯಟ್ಸ್ ಮೊದಲ ವಾರದಲ್ಲಿ 38 ಕೋಟಿ ರು ಗಳಿಸಿ ದಾಖಲೆ ಮೆರೆದಿತ್ತು. ಇತ್ತೀಚೆಗೆ ಬಾಕ್ಸಾಫೀಸ್ ನಲ್ಲಿ ಕೊಂಚ ಸದ್ದು ಮಾಡಿದ ಚಿತ್ರಗಳ ಪೈಕಿ ರಾಜ್ ನೀತಿ(34 ಕೋಟಿ), ಹೌಸ್ ಫುಲ್(31 ಕೋಟಿ), ಕೈಟ್ಸ್ (30ಕೋಟಿ) ಹಾಗೂ ಗಜನಿ(29.5 ಕೋಟಿ ರು) ಗಳಿಸಿದ್ದವು.
ಹಿರಿಯ ನಟ, ರಾಜಕಾರನಿ ಶತ್ರುಘ್ನ ಸಿನ್ಹಾ ಅವರ ಪುತ್ರಿ ಸೋನಾಕ್ಷಿ ಸಿನ್ಹಾ ಚೊಚ್ಚಲ ಚಿತ್ರದಲ್ಲೇ ಗೆದ್ದಿದ್ದಾರೆ. ಸಾಗರೋತ್ತರ ದೇಶಗಳು, ಮಧ್ಯಪ್ರಾಚ್ಯ ದೇಶಗಳಲ್ಲಿ ಸಲ್ಮಾನ್ ಸೋನಾಕ್ಷಿ ಜೋಡಿಗೆ ಪ್ರೇಕ್ಷಕರು ಜೈಕಾರ ಹಾಕಿದ್ದಾರೆ.
ಇವರಿಬ್ಬರ ಜೊತೆಗೆ ನಟ ಸೋನು ಸೂದ್ ಅವರ ಸ್ಟಾರ್ ವ್ಯಾಲ್ಯೂ ಕೂಡಾ ಹೆಚ್ಚಿದೆ. ದಕ್ಷಿಣ ಭಾರತದ ಚಿತ್ರಗಳಲ್ಲಿ ಈಗಾಗಲೇ ಮಿಂಚಿರುವ ಸೋನುಗೆ ಬಾಲಿವುಡ್ ನಲ್ಲಿ ಈ ಚಿತ್ರದ ಮೂಲಕ ಉತ್ತಮ ಬ್ರೇಕ್ ದೊರಕಿದೆ.
ದಬಾಂಗ್ ಚಿತ್ರ ದುಬೈನಲ್ಲಿ ಈಗಾಗಲೇ 1 ಮಿಲಿಯನ್ ದಿರ್ಹಾಮ್ ಗಳಿಸಿದೆ. ಅಸ್ಟ್ರೇಲಿಯಾದಲ್ಲಿ 14 ಪ್ರಿಂಟ್ ಗಳೊಂದಿಗೆ 80,000 ಡಾಲರ್ ಗಳಿಸಿದೆ. ಆದರೂ ಮುಂಬರುವ ವಾರಗಳಲ್ಲಿ ದಬಾಂಗ್ ಗಳಿಕೆ ಇದೇ ರೀತಿ ಮುಂದುವರೆದರೆ ಮಾತ್ರ ಸರ್ವಕಾಲಿಕ ಬಿಗ್ ಹಿಟ್ ಚಿತ್ರವಾಗಿ 3 ಈಡಿಯಟ್ಸ್ ಅನ್ನು ಹಿಂದಿಕ್ಕಲು ಸಾಧ್ಯ ಎನ್ನುತ್ತಿದೆ ವಿತರಕರ ವಲಯ.


Click it and Unblock the Notifications











