ನಟನೆಗೆ ಸಿನಿಮಾ ತಾರೆ ಶಿಲ್ಪಾ ಶೆಟ್ಟಿ ಗುಡ್ ಬೈ
ಬಾಲಿವುಡ್ ಬೆಡಗಿ, ಮಂಗಳೂರು ಮೊಲ್ಲೆ ಶಿಲ್ಪಾಶೆಟ್ಟಿ ಶೀಘ್ರದಲ್ಲೆ ಚಿತ್ರರಂಗಕ್ಕೆ ಗುಡ್ ಬೈ ಹೇಳಲಿದ್ದಾರೆ. ಶಿಲ್ಪಾ ಅಭಿನಯಿಸುತ್ತಿರುವ 'ದಿ ಡಿಸೈರ್' ಚಿತ್ರವೇ ಆಕೆಯ ಕೊನೆಯ ಚಿತ್ರವಾಗಲಿದೆ. ಸುದೀರ್ಘ ಸಮಯದಿಂದ ಈ ಚಿತ್ರದ ಚಿತ್ರೀಕರಣ ಕುಂಟುತ್ತಾ ಎಡವುತ್ತಾ ಸಾಗಿತ್ತು.
ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ಮೇಲೆ ತಮ್ಮ ಸಂಸಾರಿಕ ಜೀವನ ಹಾಗೂ ಬ್ಯುಸಿನೆಸ್ ನೋಡಿಕೊಳ್ಳುವುದಾಗಿ ಹೇಳಿದ್ದಾರೆ ಶಿಲ್ಪಾ. 'ದಿ ಡಿಸೈರ್' ಚಿತ್ರವೇ ತಮ್ಮ ಕೊನೆಯ ಚಿತ್ರ. ಅದಾದ ಬಳಿಕ ತಾನು ಪ್ರವಾಸ, ಬ್ಯುಸಿನೆನ್‌ನಲ್ಲಿ ಕಳೆಯುತ್ತೇನೆ. ಚಿತ್ರರಂಗ ಇನ್ನು ಸಾಕು ಅನ್ನಿಸಿದೆ ಎಂದು ತಮ್ಮ ಮನದಾಳದ ಮಾತುಗಳನ್ನು ಹೊರ ಚೆಲ್ಲಿದ್ದಾರೆ.
'ದಿ ಡಿಸೈರ್' ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಆ ಚಿತ್ರವನ್ನು ನೋಡಿ ಎಂದು ಅಭಿಮಾನಿಗಳನ್ನು ಕೋರಿದ್ದಾರೆ. ಇನ್ನು ಮುಂದೆ ತಾನು ಯಾವುದೇ ಚಿತ್ರಗಳಲ್ಲಿ ಅಭಿನಯಿಸುವುದಿಲ್ಲ. ನನ್ನ ಕುಟುಂಬವನ್ನು ಸಂಭಾಳಿಸುವುದೇ ನನ್ನ ಫುಲ್ ಟೈಮ್ ಜಾಬ್. ಜಾಹೀರಾತು ಹಾಗೂ ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತೇನೆ.
ಅಭಿನಯಕ್ಕೆ ಗುಡ್ ಬೈ ಹೇಳುತ್ತಿದ್ದರೂ ಚಿತ್ರರಂಗದಿಂದ ಶಿಲ್ಪಾ ದೂರ ಸರಿಯುತ್ತಿಲ್ಲ. ಅವರು ಮುಂದೆ ತಮ್ಮ ಪತಿಯೊಂದಿಗೆ ಹೆಗಲು ಜೋಡಿಸಿ ಚಿತ್ರ ನಿರ್ಮಾಣಕ್ಕೆ ಕೈಹಾಕಲಿದ್ದಾರೆ. 'ದಿ ಡಿಸೈರ್' ಚಿತ್ರದಲ್ಲಿ ಒಡ್ಡಿಸ್ಸಿ ನೃತ್ಯಗಾರ್ತಿಯಾಗಿ ಚೀನಾ ಕಲಾವಿನೊಂದಿಗಿನ ಪ್ರಣಯ ಸನ್ನಿವೇಶಗಳಲ್ಲಿ ಕಾಣಿಸಲಿದ್ದಾರೆ. (ಏಜೆನ್ಸೀಸ್)


Click it and Unblock the Notifications











