ಜನಪ್ರಿಯ ಟಿಕ್ ಟಾಕ್ ಸ್ಟಾರ್ ಸಿಯಾ ಕಕ್ಕರ್ ಆತ್ಮಹತ್ಯೆ
ಟಿಕ್ ಟಾಕ್ ಮೂಲಕವೇ ಹೆಸರು ಗಳಿಸಿದ ಅನೇಕರು ನಮ್ಮ ನಡುವೆ ಇದ್ದಾರೆ. ಕೆಲವರು ಟಿಕ್ ಟಾಕ್ ಮೂಲಕವೇ ಸ್ಟಾರ್‌ಗಳಾಗಿ ಸಿನಿಮಾಗಳಲ್ಲಿಯೂ ಅವಕಾಶ ಗಿಟ್ಟಿಸಿದ್ದಾರೆ. ಹೀಗೆ ಟಿಕ್ ಟಾಕ್ ಮೂಲಕವೇ ಅಪಾರ ಅಭಿಮಾನಿಗಳನ್ನು ಪಡೆಯುವ ಮೂಲಕ ಸ್ಟಾರ್ ಆಗಿದ್ದ 16 ವರ್ಷ ತರುಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Recommended Video
ಬಾಲಿವುಡ್‌ನ ತಾರೆ ಸುಶಾಂತ್ ಸಿಂಗ್ ರಜಪೂತ್ ಮತ್ತು ಕಿರುತೆರೆ ನಟಿ ಪ್ರೇಕ್ಷಾ ಮೆಹ್ತಾ ಅವರ ಆತ್ಮಹತ್ಯೆಯ ಆಘಾತಕಾರಿ ಸುದ್ದಿಗಳ ಬಳಿಕ ಮತ್ತೊಂದು ದುರಂತ ಸುದ್ದಿ ಬಂದಿದೆ. ಟಿಕ್ ಟಾಕ್ ಜಗತ್ತಿನಲ್ಲಿ ಹೆಸರು ಮಾಡಿದ್ದ ಸಿಯಾ ಕಕ್ಕರ್, ಆ ಮೂಲಕ ಬಾಲಿವುಡ್‌ನ ಅನೇಕ ವಲಯಗಳಲ್ಲಿ ಪರಿಚಿತರಾಗಿದ್ದರು. ಉತ್ತಮ ನೃತ್ಯಪಟುವೂ ಆಗಿದ್ದ ಸಿಯಾ ಕಕ್ಕರ್, ಗುರುವಾರ ನವದೆಹಲಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂದೆ ಓದಿ...

ವೈಯಕ್ತಿಕ ಕಾರಣದ ಶಂಕೆ...
ಸಿಯಾ ಕಕ್ಕರ್ ಅವರ ಆತ್ಮಹತ್ಯೆಯ ಸುದ್ದಿಯನ್ನು ಅವರ ಎಲ್ಲ ಕೆಲಸ ಹಾಗೂ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದ ಮ್ಯಾನೇಜರ್ ಅರ್ಜುನ್ ಸರಿನ್ ಖಚಿತಪಡಿಸಿದ್ದಾರೆ. ಇದು ಬಹುಶಃ ವೈಯಕ್ತಿಕ ಕಾರಣದಿಂದ ಆಗಿರಬೇಕು. ಕೆಲಸದ ವಿಚಾರದಲ್ಲಿ ಅವರು ಚೆನ್ನಾಗಿ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

ಸಹಜವಾಗಿ ಮಾತನಾಡಿದ್ದರು
ನಿನ್ನೆ ರಾತ್ರಿಯಷ್ಟೇ ಹೊಸ ಪ್ರಾಜೆಕ್ಟ್ ವಿಚಾರವಾಗಿ ಅವರೊಂದಿಗೆ ಮಾತನಾಡಿದ್ದೆ. ಅವರು ಎಂದಿನಂತೆಯೇ ಸಹಜವಾಗಿ ಮಾತನಾಡಿದ್ದರು. ನನ್ನ ಮತ್ತು ನನ್ನ ಫೇಮ್ ಎಕ್ಸ್‌ಪರ್ಟ್ಸ್ ಕಂಪೆನಿ ಅನೇಕ ಕಲಾವಿದರನ್ನು ನಿರ್ವಹಿಸುತ್ತಿದೆ. ಅವರಲ್ಲಿ ಸಿಯಾ ಬಹಳ ಪ್ರತಿಭಾವಂತೆಯಾಗಿದ್ದರು ಎಂದಿದ್ದಾರೆ.

ವಿರಾಲ್ ಭಯಾನಿ ಪೋಸ್ಟ್
ಈ ಕುರಿತು ಬಾಲಿವುಡ್‌ನ ಪ್ರಸಿದ್ಧ ಛಾಯಾಗ್ರಾಹಕ ವಿರಾಲ್ ಭಯಾನಿ ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದು, 'ದುಃಖದ ಸುದ್ದಿ, 16 ವರ್ಷದ ಸ್ವೀಟ್ ಟಿಕ್ ಟಾಕರ್ ಸಿಯಾ ಕಕ್ಕರ್ ಆತ್ಮಹತ್ಯೆಯಿಂದ ಮೃತಪಟ್ಟಿದ್ದಾರೆ. ಇದನ್ನು ಬರೆಯುವ ಮುನ್ನ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಮುಖ್ಯಸ್ಥ ಅರ್ಜುನ್ ಸರಿನ್ ಜತೆ ಮಾತನಾಡಿದ್ದೇನೆ. ಯಾವ ಸಮಸ್ಯೆಯಾಯಿತು ಎನ್ನುವುದು ಅವರಿಗೂ ಅರಿವಿಲ್ಲ. ಅವರ ವಿಡಿಯೋಗಳನ್ನು ನೋಡಿದರೆ ಕಂಟೆಂಟ್ ವಿಚಾರದಲ್ಲಿ ಆಕೆ ಒಳ್ಳೆಯ ಆಯ್ಕೆ ಮಾಡುತ್ತಿದ್ದರು. ಅವರು ಈ ಮಾರ್ಗ ಆಯ್ಕೆ ಮಾಡಿದ್ದು ಬಹಳ ಖೇದಕರ ಎಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ
ನವದೆಹಲಿಯ ಪ್ರೀತ್ ವಿಹಾರ್‌ದಲ್ಲಿ ಸಿಯಾ ಕಕ್ಕರ್ ಮನೆಯಿದೆ. ಟಿಕ್ ಟಾಕ್, ಇನ್‌ಸ್ಟಾಗ್ರಾಂ, ಸ್ಯಾಪ್ ಚಾಟ್ ಮತ್ತು ಯೂಟ್ಯೂಬ್‌ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅವರು ಸಕ್ರಿಯರಾಗಿದ್ದರು. ಡ್ಯಾನ್ಸ್ ವಿಡಿಯೋಗಳಿಂದ ಜನಪ್ರಿಯರಾಗಿದ್ದರು. ಇನ್‌ಸ್ಟಾಗ್ರಾಂದಲ್ಲಿ ಅವರಿಗೆ 104 ಸಾವಿರ ಫಾಲೋವರ್‌ಗಳಿದ್ದರೆ, ಟಿಕ್‌ಟಾಕ್‌ನಲ್ಲಿ 1.1 ಮಿಲಿಯನ್ ಫಾಲೋವರ್‌ಗಳಿದ್ದಾರೆ.


Click it and Unblock the Notifications











