ಅಮೀರ್ ಖಾನ್ ಚಿತ್ರಕ್ಕೆ ವಿದರ್ಭ ರೈತರ ವಿರೋಧ
ಅಮೀರ್ ಖಾನ್ ನಿರ್ಮಾಣದ 'ಪೀಪ್ಲಿ ಲೈವ್' ಚಿತ್ರಕ್ಕೆ ಮಹಾರಾಷ್ಟ್ರದ ವಿದರ್ಭದ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ವಿದರ್ಭದ ಸಾವಿರಾರು ರೈತರಿಗೆ ಈ ಚಿತ್ರ ಅಪಚಾರವೆಸಗಿದೆ ಎಂದು ಪ್ರತಿಭಟಿಸಿದ್ದಾರೆ. ರೈತರ ಆತ್ಮಹತ್ಯೆ ಪ್ರಕರಣವನ್ನು ಈ ಚಿತ್ರಹಾಸ್ಯಾಸ್ಪದವಾಗಿಸಿದೆ ಎಂಬುದು ಅವರ ವಿರೋಧಕ್ಕೆ ಕಾರಣವಾಗಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಪತ್ನಿಯರು ಮತ್ತು ರೈತರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಚಿತ್ರದಲ್ಲಿ ರೈತರ ಆತ್ಮಹತ್ಯೆಯನ್ನು ಬಿಂಬಿಸಿರುವ ರೀತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಯಿತು. ಪೀಪ್ಲಿ ಲೈವ್ ಚಿತ್ರದ ಪ್ರದರ್ಶವನ್ನು ನಿಷೇಧಿಸುವಂತೆ ಒತ್ತಾಯಿಸಿದರು. ಬಳಿಕ ಪ್ರತಿಭಟನಾಕಾರರು ಅಮೀರ್ ಖಾನ್ ಪ್ರತಿಕೃತಿಯನ್ನು ಸುಟ್ಟುಹಾಕಿದರು.
ಈ ಚಿತ್ರದ ಪ್ರದರ್ಶನವನ್ನು ನಿಷೇಧಿಸುವ ತನಕ ಪ್ರತಿಭಟನೆ ಮುಂದುವರಿಯಲಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ವಿದರ್ಭ ಜನ ಆಂದೋಲನ ಸಮಿತಿಯ ಅಧ್ಯಕ್ಷ ಕಿಶೋರ್ ತಿವಾರಿ ಹೇಳಿದ್ದಾರೆ.ಜಾಗತೀಕರಣ ಮತ್ತು ಸರಕಾರದ ತಪ್ಪು ನೀತಿಗಳಿಗೆ ಬಲಿಯಾಗುತ್ತಿರುವ ರೈತರಿಗೆ ಈ ಚಿತ್ರ ಅವಮಾನ ಮಾಡಿದೆ. ಚಿತ್ರದ ಕತೆ ವಾಸ್ತವಕ್ಕೆ ದೂರವಾಗಿದೆ ಎಂದಿದ್ದಾರೆ.
ಗ್ರಾಮೀಣ ಭಾರತದ ಪೀಪ್ಲಿ (ಲೈವ್) ಎಂಬ ಹಳ್ಳಿಯಲ್ಲಿ ನಡೆಯುವ ವಿಡಂಬನಾತ್ಮಕ ಚಿತ್ರ ಇದಾಗಿದೆ. ಸಾಲ ತೀರಿಸಲಾಗದೆ ತಮ್ಮ ಜಮೀನನ್ನು ಕಳೆದುಕೊಳ್ಳುವ ಇಬ್ಬರು ರೈತರ ಕತೆಯಿದು. ಈ ಕುರಿತು ಇವರು ಸ್ಥಳೀಯ ರಾಜಕಾರಣಿಯೊಬ್ಬರನ್ನು ಭೇಟಿಯಾದಾಗ, ಆತ್ಮಹತ್ಯೆ ಮಾಡಿಕೊಂಡರೆ ರು.1 ಲಕ್ಷ ಪರಿಹಾರ ಸಿಗುತ್ತದೆ ಎನ್ನುತಾನೆ. ಬಳಿಕ ಈ ವಿಷಯ ಮಾಧ್ಯಮವೊಂದರ ಕಿವಿಗೆ ಬಿದ್ದು ಏನೆಲ್ಲಾ ಅವಾಂತರಗಳಾಗುತ್ತದೆ ಎಂಬುದೆ ಚಿತ್ರದ ತಿರುಳು.


Click it and Unblock the Notifications











