ಹುಟ್ಟುಹಬ್ಬದ ಮರುದಿನವೇ ಸಂಬಂಧಿಕನಿಂದ ಗುಂಡಿನ ದಾಳಿ, ಸ್ಥಳದಲ್ಲಿಯೇ ಕೊನೆಯುಸಿರೆಳೆದ 17 ವರ್ಷದ ಖ್ಯಾತ ಯೂಟ್ಯೂಬರ್
ಬದಲಾದ ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣ, ಮನುಷ್ಯನನ್ನ ಹೆಚ್ಚು ನಿಯಂತ್ರಣ ಮಾಡುತ್ತಿದೆ. ಇದು ಎಷ್ಟರಮಟ್ಟಿಗೆ ಮನುಷ್ಯನಿಗೆ ದಾರಿ ತೋರಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದಾರಿಯನ್ನೂ ತಪ್ಪಿಸುತ್ತದೆ. ಇಲ್ಲಿ ಒಳ್ಳೇಯವರು ಇದ್ದಾರೆ. ಕೆಟ್ಟವರು ಇದ್ದಾರೆ. ಇನ್ನು ಈ ವೇದಿಕೆಯ ಮೂಲಕವೇ ಸಿನಿ ತಾರೆಯರು ಹೆಚ್ಚು ಪ್ರಚಲಿತಕ್ಕೆ ಬರುತ್ತಿರುವ ಜೊತೆಗೆ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ಸಾಧನವನ್ನಾಗಿಯೂ ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾ..
ಕೇವಲ ಸ್ಟಾರ್‌ಗಳಿಗೆ ಮಾತ್ರ ಸಹಕಾರಿಯಾಗಿಲ್ಲ. ಹಲವಾರು ಪ್ರತಿಭಾವಂತರು ಈ ಮಾಧ್ಯಮದ ಮೂಲಕ ಬೆಳಕಿಗೆ ಬಂದಿದ್ದಾರೆ. ಬದುಕು ರೂಪಿಸಿಕೊಂಡಿದ್ದಾರೆ. ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಭಿನ್ನ ವಿಭಿನ್ನವಾದ ಕಂಟೆಂಟ್‌ಗಳ ಮೂಲಕ ಜನರ ಹೃದಯವನ್ನು ಗೆದ್ದಿದ್ದಾರೆ. ಆ ಪೈಕಿ ಒಬ್ಬರಾಗಿದ್ದವರು ಸನಾ ಯೂಸುಫ್.

ಹೌದು, ಸನಾ ಯೂಸುಫ್.. ಪಾಕಿಸ್ತಾನದ ಖ್ಯಾತ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್. ಮಹಿಳೆಯರ ಹಕ್ಕು.. ಸಂಸ್ಕ್ರತಿ.. ಶಿಕ್ಷಣ.. ಮತ್ತು ಹದಿಹರೆಯದ ಯುವ ಯುವತಿಯರಿಗೆ ಪ್ರೇರಣೆ ನೀಡುವಂತಹ ವಿಷಯಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಳ್ಳುತ್ತಿದ್ದ ಸನಾ ಯುಸೂಫ್ ಅವರನ್ನು ಐದು ಲಕ್ಷಕ್ಕೂ ಅಧಿಕ ಜನ ಹಿಂಬಾಲಿಸುತ್ತಿದ್ದರು.
ಕೇವಲ 17ರ ಪ್ರಾಯದಲ್ಲಿಯೇ ತನ್ನ ಮಾತುಗಾರಿಕೆಯಿಂದ ಪಾಕಿಸ್ತಾನದೆಲ್ಲೆಡೆ ಮನೆಮಾತಾಗಿದ್ದರು. ಇಂಥಾ ಸನಾ ಯೂಸುಫ್ ಅವರನ್ನು ಅವರ ಸಂಬಂಧಿಕನೇ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಪಾಕಿಸ್ತಾನದ ಸಮಾ ಟಿವಿ ವರದಿ ಮಾಡಿರುವಂತೆ ಪಾಕಿಸ್ತಾನದ ಅಪ್ಪರ್ ಚಿತ್ರಾಲ್ ಮೂಲದ ಸನಾ ಅವರ ಮನೆಗೆ ಸಂಬಂಧಿಕ ಮನೆಗೆ ಬಂದಿದ್ದ.
ಸನಾ ಅವರನ್ನು ಭೇಟಿ ಮಾಡಲು ಬಂದ ಈ ಸಂಬಂಧಿಕ ಮನೆಯ ಹೊರಗೆ ಅವರ ಜೊತೆ ಸಂಭಾಷಣೆ ನಡೆಸಿದ್ದ. ಆ ನಂತರ ಮನೆಯೊಳಗೆ ನುಗ್ಗಿದ ಆರೋಪಿ ಹಲವು ಸುತ್ತು ಗುಂಡು ಹಾರಿಸಿದ್ದಾನೆ. ಈ ವೇಳೆ ಸನಾ ಯುಸುಫ್‌ಗೆ ಎರಡು ಗುಂಡುಗಳು ತಗುಲಿದ್ದು ಸನಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸನಾ ಅವರನ್ನು ಹತ್ಯೆ ಮಾಡಿದ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಸದ್ಯ ಸನಾ ಯೂಸುಫ್ ಅವರ ಹತ್ಯೆಯ ಘಟನೆ ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. #JusticeForSanaYousuf ಹ್ಯಾಶ್ ಟ್ಯಾಗ್‌ನಡಿ ನ್ಯಾಯಕ್ಕಾಗಿ ಅನೇಕರು ಆಗ್ರಹಿಸುತ್ತಿದ್ಧಾರೆ.
ಪಾಕಿಸ್ತಾನದಲ್ಲಿ ಇತ್ತೀಚೆಗೆ ಮರ್ಯಾದೆ ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಆ ದಿಸೆಯಲ್ಲಿ ಕೂಡ ಪೊಲೀಸರು ತನಿಖೆಯನ್ನು ಮಾಡುತ್ತಿದ್ದಾರೆ. ವ್ಯೆಯಕ್ತಿಕ ದ್ವೇಷ. ಸಾಮಾಜಿಕ ಉದ್ವಿಗ್ನತೆ, ಸೇರಿ ಬೇರೆ ಆಯಾಮಗಳಲ್ಲಿ ಕೂಡ ತನಿಖೆಯನ್ನು ಮಾಡುತ್ತಿರುವ ಪೊಲೀಸರು ಸನಾ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಪಾಕಿಸ್ತಾನ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (PIMS) ರವಾನಿಸಿದ್ದಾರೆ. ಇನ್ನು ಶಂಕಿತನ ಗುರುತು ಇನ್ನು ಪತ್ತೆಯಾಗಿಲ್ಲ. ಜೂನ್ 2ರ ಸೋಮವಾರ ರಾತ್ರಿ ಇಸ್ಲಾಮಾಬಾದ್‌ನ ಜಿ -13 ಸೆಕ್ಟರ್‌ನಲ್ಲಿ ಈ ಘಟನೆ ನಡೆದಿದೆ.
ಇನ್ನು ದುಃಖದ ವಿಚಾರ ಅಂದರೆ ಸನಾ ಯೂಸುಫ್ ಮೊನ್ನೆಯಷ್ಟೇ ತಮ್ಮ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದರು. ತಮ್ಮ ಸ್ನೇಹಿತರ ಜೊತೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದರು. ಹುಟ್ಟು ಹಬ್ಬ ಆಚರಿಸಿಕೊಂಡ ಮರು ದಿನವೇ ಸಂಬಂಧಿಕನಿಂದನೇ ಸನಾ ಯೂಸುಫ್ ಕೊನೆಯುಸಿರೆಳೆದಿದ್ದಾರೆ. ಸದ್ಯ ಸನಾ ಯೂಸುಫ್ ಅವರ ಹತ್ಯೆಯ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದು ಆರೋಪಿಗಾಗಿ ಬಲೆ ಬೀಸಿದ್ದಾರೆ.


Click it and Unblock the Notifications











