ಅಕ್ಷಯ್ ಕುಮಾರ್ ಆಂಡ್ ಗ್ಯಾಂಗ್‌ಗೆ ಸೆನ್ಸಾರ್ ಶಾಕ್ ; 18 ಕಡೆ ಕತ್ತರಿ ಪ್ರಯೋಗ, 'ವೆಲ್ಕಮ್ ಟು ದಿ ಜಂಗಲ್' ಅವಧಿ ಎಷ್ಟು ?
ಚಿತ್ರರಂಗದವರಿಗೆ ''ಸೆನ್ಸಾರ್'' ಮಂಡಳಿ ಯಾವತ್ತು ಮಗ್ಗಲದ ಮುಳ್ಳು. ಯಾಕೆಂದರೆ.. ಒಂದು ಚಿತ್ರವನ್ನು ತಮ್ಮ ಕಲ್ಪನೆಗೆ ಅನುಗುಣವಾಗಿ ನಿರ್ದೇಶಕರು ರೆಡಿ ಮಾಡಿರುತ್ತಾರೆ. ಆದರೆ.. ಈ ಸೆನ್ಸಾರ್ ಅಂಗಳಕ್ಕೆ ಬಂದಾಗ ಅಲ್ಲಿ ಬರೆ ಹಾಕಲಾಗುತ್ತೆ. ಕೆಲ ಒಮ್ಮೆ ಬೇಕು ಬೇಕಂತಲೇ ಕತ್ತರಿಯನ್ನು ಹಾಕಲಾಗುತ್ತೆ. ಮತ್ತೂ ಕೆಲ ಒಮ್ಮೆ ಕತ್ತರಿ ಹಾಕಬೇಕಾದ ಜಾಗದ ಮೇಲೆ ಇವರ ಕಣ್ಣೇ ಬೀಳುವುದಿಲ್ಲ.
ಸೆನ್ಸಾರ್‌ನ ಈ ನಡೆಯಿಂದ ಚೆಂದದ ಚಿತ್ರಗಳು ಅಂದ ಕಳೆದುಕೊಳ್ಳುತ್ತಾವೆ. ಇದರಿಂದ ಆ ತಂಡದ ಅಸಮಾಧಾನಕ್ಕೆ .. ಆಕ್ರೋಶಕ್ಕೆ.. ಸೆನ್ಸಾರ್ ಗುರಿಯಾಗುತ್ತೆ. ಇನ್ನೂ ಕೆಲ ಸಲ ಚಿತ್ರದ ಯಾವುದಾದರೂ ಒಂದು ಸನ್ನಿವೇಶ ಟ್ರೇಲರ್ ಅಥವಾ ಹಾಡುಗಳಲ್ಲಿ ಗಮನ ಸೆಳೆದಿರುತ್ತೆ. ಆ ಸನ್ನಿವೇಶವನ್ನು ಕಂಡು ಜನ ಹುಚ್ಚೆದ್ದಿರುತ್ತಾರೆ. ಬೆಳ್ಳಿಪರದೆಯಲ್ಲಿ ತಮಗೆ ಇಷ್ಟವಾದ ಸಿಕ್ವೆನ್ಸ್‌ನ ನೋಡಲು ಕಾತುರದಿಂದ ಕಾದು ಕುಳಿತಿರುತ್ತಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಕೂಡ ಈ ಸೀನ್‌ಗಳು ಸದ್ದು ಮಾಡಿರುತ್ತಾವೆ.

ಆದರೆ ಹೀಗೆ ವೈರಲ್ ಆದ ಸೀನಿಗೆ ಸೆನ್ಸಾರ್‌ನಲ್ಲಿ ಕತ್ತರಿ ಬೀಳುತ್ತೆ. ''ವೆಲ್ಕಮ್ ಟು ದಿ ಜಂಗಲ್'' ಚಿತ್ರದ ವಿಚಾರದಲ್ಲಿ ಸದ್ಯಕ್ಕೆ ಇದೇ ಆಗಿದೆ. ಹೌದು. ''ವೆಲ್ಕಮ್ ಟು ದಿ ಜಂಗಲ್'' ಇದೇ ಶುಕ್ರವಾರ ತೆರೆಗೆ ಬರುತ್ತಿರುವ ಮಲ್ಟಿ ಸ್ಟಾರರ್ ಸಿನಿಮಾ.
ಒಬ್ಬರಾ.. ಇಬ್ಬರಾ.. ಒಂದು ಡಜನ್ ಮೇಲೆ ಸ್ಟಾರ್ ಗಳಿರುವ ಚಿತ್ರ ಇದು. ಇತ್ತೀಚೆನ ದಿನಗಳಲ್ಲಿ ತೆರೆಗೆ ಬಂದ ಅತ್ಯಂತ ಅದ್ಧೂರಿ ಮತ್ತು ಬಹುದೊಡ್ಡ ತಾರಾಬಳಗ ಹೊಂದಿರುವ ಚಿತ್ರ ಎನ್ನುವ ಹೆಗ್ಗಳಿಕೆ ಈ ''ವೆಲ್ಕಮ್ ಟು ಜಂಗಲ್'' ಚಿತ್ರದ್ದು.
ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ, ಪರೇಶ್ ರಾವಲ್ ಅವರಲ್ಲದೇ ಅರ್ಷದ್ ವಾರ್ಸಿ, ತುಷಾರ್ ಕಪೂರ್, ಅಪ್ತಾಭ್ ಶಿವದಾಸನಿ, ಶ್ರೇಯಸ್ ತಲ್ಪಡೆ, ಕೃಷ್ಣ ಅಭಿಷೇಕ್, ಕಿಕು ಶಾರ್ದಾ, ಈ ಚಿತ್ರದಲ್ಲಿದ್ದಾರೆ. ಇವರಲ್ಲದೇ ಹಿರಿಯ ನಟರಾದ ಜಾಕಿ ಶ್ರಾಫ್, ಜಾನಿ ಲಿವರ್, ರಾಜ್‌ಪಾಲ್ ಯಾದವ್, ಫರಿದಾ ಜಲಾಲ್, ಮುಖೇಶ್ ತಿವಾರಿ, ಯಶ್‌ಪಾಲ್ ಶರ್ಮಾ, ಗಾಯಕ ದಿಲೇರ್ ಮೆಹಂದಿ ಕೂಡ ಚಿತ್ರದಲ್ಲಿದ್ದು ಗಾಯಕರಾದ ದಿಲೇರ್ ಮೆಹಂದಿ ಮತ್ತು ಮಿಖಾ ಸಿಂಗ್ ಕೂಡ ಚಿತ್ರದಲ್ಲಿದ್ದಾರೆ.
ಇನ್ನು ಗ್ಲಾಮರ್ ರಂಗೇರಿಸಲು ರವೀನಾ ಟಂಡನ್, ಲಾರಾ ದತ್ತಾ, ದಿಶಾ ಪಟಾನಿ, ಜಾಕ್ವೆಲಿನ್ ಫರ್ನಾಂಡಿಸ್ ಕೂಡ ಚಿತ್ರದಲ್ಲಿದ್ದಾರೆ. ಹೀಗೆ ತಾರಾಬಗಳದಿಂದಲೇ ಸದ್ದು ಮಾಡುತ್ತಾ ಸುದ್ದಿಯಾಗುತ್ತಾ ಬಂದ ಈ ಚಿತ್ರಕ್ಕೆ ಸದ್ಯ ಬಿಡುಗಡೆಗೆ ಮುನ್ನ ಸೆನ್ಸಾರ್ ಶಾಕ್ ನೀಡಿದ್ದು 18 ಕಡೆ ಕತ್ತರಿ ಪ್ರಯೋಗ ಮಾಡಿದೆ. ಯು/ಎ ಪ್ರಮಾಣ ಪತ್ರವನ್ನು ನೀಡಿದೆ.

ಎಲ್ಲೆಲ್ಲಿ ಕತ್ತರಿ ..?
ಮಾಧ್ಯಮಗಳಲ್ಲಿ ವರದಿಯಾದಂತೆ ಜನಾಂಗೀಯ ನಿಂದನೆಯ ''ಕಾಲಾ ಪೈದಾ ಹುವಾ'' ಎಂದ ಸಂಭಾಷಣೆಯನ್ನು ''ಸಾದಾ ಪೈದಾ ಹುವಾ'' ಎಂದು ಬದಲಿಸಲಾಗಿದೆ. ಕಾಶ್ಮೀರದ ಕುರಿತು ಇದ್ದ ಸಾಲನ್ನು ಕೂಡ ಬದಲಿಸುವಂತೆ ಸೆನ್ಸಾರ್ ಹೇಳಿದ್ದು ''ಗೂರ್ಖಾ ರೆಜಿಮೆಂಟ್'' ಬದಲಿಗೆ ಚಿತ್ರತಂಡ ''ತುಮ್ ಆರ್ಮಿ ಸೇ ಹೋ'' ಎಂದು ಸಂಭಾಷಣೆ ಬದಲಿಸಿದೆ. ''ಜನರಲ್'' ಎಂಬ ಪದವನ್ನು ''ಆಫೀಸರ್'' ಎಂದು ಬದಲಿಸಲಾಗಿದ್ದು ''ಅಜರುದ್ದೀನ್'' ಎಂಬ ಹೆಸರನ್ನು ''ಅಲ್ಲಾವುದ್ದೀನ್'' ಎಂದು ಬದಲಿಸಲಾಗಿದೆ.
ಇದರ ಜೊತೆ ಹತ್ತು ಸೆಕೆಂಡ್‌ನ ದೃಶ್ಯಕ್ಕೆ ಕೂಡ ಕತ್ತರಿ ಹಾಕಲಾಗಿದ್ದು, ಪ್ರೇಕ್ಷಕರ ಭಾವನೆಗಳಿಗೆ ಧಕ್ಕೆ ತರಬಹುದಾಂತಹ ಸನ್ನಿವೇಶಗಳನ್ನು ತೆಗೆದು ಹಾಕಲಾಗಿದೆ.
ಅತಿರೇಕದ ಕೆಲ ಕೈ ಸನ್ನೆಗಳ ದೃಶ್ಯಗಳನ್ನು ಕೂಡ ಕತ್ತರಿ ಹಾಕಲಾಗಿದ್ದು, ಆ ಜಾಗದಲ್ಲಿ ಹಿರಿಯ ನಟ ವಿಂದು ದಾರಾ ಸಿಂಗ್ ಅವರ ಕ್ಲೋಸ್-ಅಪ್ ಶಾಟ್ ಇಡಲಾಗಿದೆ. ಇಂಗ್ಲಿಷ್ ಸಬ್‌ಟೈಟಲ್ಸ್‌ನಲ್ಲಿದ್ದ ಕೆಲವು ಪದಗಳನ್ನು ಕೂಡ ಬದಲಾಯಿಸಲಾಗಿದೆ.
ಕೇವಲ ಇಷ್ಟೇ ಅಲ್ಲ ದಿಶಾ ಪಟಾನಿ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಅವರ ಹಾಡೊಂದರಲ್ಲಿದ್ದ ಬಿಕಿನಿ ದೃಶ್ಯಗಳು ಮತ್ತು ಪ್ರಚೋದನಾಕಾರಿ ದೃಶ್ಯಗಳನ್ನು ತೆಗೆಯುವಂತೆ ತಂಡಕ್ಕೆ ಸೆನ್ಸಾರ್ ಮಂಡಳಿ ಕಟ್ಟು ನಿಟ್ಟಾಗಿ ಆದೇಶಿಸಿದೆ.
ಈ ದೃಶ್ಯಗಳು ಸೂಕ್ತವಲ್ಲ ಎಂದು ಸೆನ್ಸಾರ್ ಮಂಡಳಿ ಭಾವಿಸಿದ್ದರಿಂದ ಚಿತ್ರದ ಗ್ಲಾಮರ್ ಗೆ ಪೆಟ್ಟು ಬಿದ್ದಂತಾಗಿದೆ. ಈ ಎಲ್ಲಾ ಬದಲಾವಣೆಗಳ ನಂತರ ಚಿತ್ರದ ಅವಧಿ ಸುಮಾರು 164 ನಿಮಿಷ ಮತ್ತು 50 ಸೆಕೆಂಡುಗಳಾಗಿದೆ. ಅದರರ್ಥ 2 ಗಂಟೆ 44 ನಿಮಿಷಗಳು ಆಗಿದೆ.
ಒಟ್ನಲ್ಲಿ ಇದೇ ವಾರ ''ವೆಲ್ಕಮ್ ಟು ದಿ ಜಂಗಲ್'' ಇದೇ ವಾರ ತೆರೆಗೆ ಬರಲಿದ್ದು, ಹಳೆಯ ಸರಣಿಗಳಂತೆ ಪ್ರೇಕ್ಷಕರನ್ನು ನಗಿಸುವಲ್ಲಿ ಈ ಸಿನಿಮಾ ಕೂಡ ಯಶಸ್ವಿಯಾಗುತ್ತಾ..? ಅಥವಾ ಸೆನ್ಸಾರ್ ನೀಡಿದ ಈ 18 ಪೆಟ್ಟುಗಳಿಂದ ಚಿತ್ರದ ಅಸಲಿ ಮಜಾ ಕಳೆದು ಹೋಗುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ. ಪ್ರೇಕ್ಷಕರಿಗೆ ನಗು ಬಾರದಿದ್ದರೆ ಸೋಲಿಂದ ಈ ಚಿತ್ರವನ್ನು ಚಿತ್ರದಲ್ಲಿನ ಯಾವ ಸ್ಟಾರ್ ಕೂಡ ಕಾಪಾಡಲಾರ.


Click it and Unblock the Notifications