ಶಾರುಖ್ ಖಾನ್‌ಗೆ ವಿಮಾನ ನಿಲ್ದಾಣದಲ್ಲಿ ಭಾರಿ ದಂಡ
ಬಾಲಿವುಡ್ ನಟ ಶಾರುಖ್ ಖಾನ್‌ಗೆ ಯಾಕೋ ಏನೋ ಟೈಮ್ ಸರಿ ಇಲ್ಲ ಎನ್ನಿಸುತ್ತದೆ. ಇಂದು (ಜು.19) ಅವರು ಲಂಡನ್‌ನಿಂದ ಮುಂಬೈ ಹಿಂತಿರುಗಬೇಕಾದರೆ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಹಿ ಘಟನೆಯೊಂದು ಎದುರಾಗಿದೆ. ಕಸ್ಟಮ್ಸ್ ಅಧಿಕಾರಿಗಳು ಅವರನ್ನು ತಡೆದು ವಿಚಾರಣೆ ನಡೆಸಿದ್ದಾರೆ.
ರಜಾ ದಿನಗಳನ್ನು ಕಳೆಯಲು ಹಾಲಂಡ್ ಮತ್ತು ಲಂಡನ್‌ಗೆ ಕುಟುಂಬ ಸಮೇತ ಶಾರುಖ್ ಹೋಗಿದ್ದರು. ಹಿಂತಿರುಗಬೇಕಾದರೆ ಅಲ್ಲಿಂದ 20 ಬ್ಯಾಗ್‌ಗಳನ್ನು ಹೊತ್ತು ಬಂದಿದ್ದಾರೆ. ಶಾರುಖ್‌ರನ್ನು ತಡೆದ ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆಗಾಗಿ ಅವರನ್ನು ಅಲ್ಲೆ ಉಳಿಸಿಕೊಂಡು ಅವರ ಕುಟುಂಬಿಕರನ್ನು ಮನೆಗೆ ಕಳುಹಿಸಿದ್ದಾರೆ.
ಶಾರುಖ್‌ರನ್ನು ವಿಚಾರಣೆ ಮಾಡಿದ ಕಸ್ಟಮ್ಸ್ ಉಪ ಆಯುಕ್ತ ಸಮೀರ್ ವಾಂಖೇಡೆ, ಬಳಿಕ ರು.1.50 ಲಕ್ಷ ದಂಡ ವಿಧಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಸಾಮಾನ್ಯ ಪ್ರಯಾಣಿಕನೊಬ್ಬನನ್ನು ಕಾಣುವಂತೆಯೇ ಶಾರುಖ್‌ರನ್ನು ಅಧಿಕಾರಿಗಳು ಪರಿಗಣಿಸಿದ್ದಾಗಿ ಸುದ್ದಿ.
ಒಂದೇ ಒಂದು ಫೋನ್ ಕಾಲ್ ಮಾಡಲು ಕಸ್ಟಮ್ಸ್ ಅಧಿಕಾರಿಗಳು ಶಾರುಖ್‌ಗೆ ನಿರಾಕರಿಸಿದರು ಎನ್ನಲಾಗಿದೆ. "ಹೌದು ಶಾರುಖ್ ಅವರನ್ನು ವಿಚಾರಣೆ ಮಾಡಿದ್ದೇವೆ. ಯಾರೇ ಆಗಲಿ ವಿದೇಶದಿಂದ ಹೆಚ್ಚಿನ ಸರಕು ತಂದರೆ ಅದಕ್ಕೆ ಸೂಕ್ತ ತೆರಿಗೆ ಪಾವತಿಸಲೇ ಬೇಕು. ಶಾರುಖ್ ಕೂಡ ಇದಕ್ಕೆ ಹೊರತಾಗಿಲ್ಲ " ಎಂದಿದ್ದಾರೆ ಕಸ್ಟಮ್ಸ್ ಆಯುಕ್ತ ಪಿ ಎಂ ಗೋವಂಡೆ. (ಏಜೆನ್ಸೀಸ್)


Click it and Unblock the Notifications











