»   » ಆರ್ಥಿಕ ಬಿಕ್ಕಟ್ಟು; ಬಾಲಿವುಡ್ ನಲ್ಲಿ ಸಿಬ್ಬಂದಿ ಕಡಿತ

ಆರ್ಥಿಕ ಬಿಕ್ಕಟ್ಟು; ಬಾಲಿವುಡ್ ನಲ್ಲಿ ಸಿಬ್ಬಂದಿ ಕಡಿತ

Subscribe to Filmibeat Kannada

ದೇಶದ ಅತಿದೊಡ್ಡಚಿತ್ರೋದ್ಯಮ ಬಾಲಿವುಡ್ ನಲ್ಲಿ ಚಟುವಟಿಕೆಗಳು ಕಳೆಗುಂದಿವೆ. ಭಾರಿ ಬಜೆಟ್ ಚಿತ್ರಗಳು, ಗಾಸಿಪ್ ಗಳು,ಅತ್ಯಧಿಕ ಸಂಭಾವನೆ ...ಹೀಗೇ ರೋಚಕವಾಗಿ ಹೇಳಿಕೊಳ್ಳಲು ಬಾಲಿವುಡ್ ನಲ್ಲಿ ಸಾಕಷ್ಟು ಕತೆಗಳಿವೆ. ಆದರೆ ಬಾಲಿವುಡ್ ನಲ್ಲಿ ಪರಿಸ್ಥಿತಿ ಈಗ ಬುಡಮೇಲಾಗಿದೆ.

ಇಡೀ ಬಾಲಿವುಡ್ ಗೆ ಗ್ರಹಣ ಕವಿದು ಚಿತ್ರೋದ್ಯಮದ ಚಟುವಟಿಕೆಗಳೇ ಸ್ತಬ್ಧವಾಗಿವೆ. ಇದಕ್ಕೆಲ್ಲಾ ಕಾರಣ ವಿಶ್ವದಾದ್ಯಂತ ಉಂಟಾದ ಆರ್ಥಿಕ ಬಿಕ್ಕಟ್ಟು. ಸರಿಸುಮಾರು 30 ಸಿನಿಮಾಗಳು ಪ್ರಕಟವಾದ ನಂತರ ಚಿತ್ರೀಕರಣ ಶುರುವಾಗಿಲ್ಲ.ಪ್ರಮುಖ ಚಿತ್ರ ನಿರ್ಮಾಣ ಸಂಸ್ಥೆಗಳು ಬಜೆಟ್ಟಿನಲ್ಲಿ ಕಡಿತ ಗೊಳಿಸಿವೆ. ಇದಿಷ್ಟೇ ಅಲ್ಲ ಬಾಲಿವುಡ್ ಕಲಾವಿದರು ತಮ್ಮ ಸಂಭಾವನೆಯನ್ನು ಶೇ.50ರಷ್ಟು ಕಡಿಮೆ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ಟಿ-ಸೀರೀಸ್ ಸಂಸ್ಥೆ ಬಾಲಿವುಡ್ ನ ಪ್ರಮುಖ ನಾಯಕ ನಟ ಸಲ್ಮಾನ್ ಖಾನ್ ರೊಂದಿಗೆ ರು.50 ಕೋಟಿ ಒಪ್ಪಂದ ಕುದುರಿಸಿಕೊಂಡಿತ್ತು. ಈಗ ಆ ಒಪ್ಪಂದವನ್ನು ಹಿಂಪಡೆಯುವ ಸಿದ್ಧತೆಯಲ್ಲಿದೆ. ಸಂಭಾವನೆ ಕಡಿಮೆ ಮಾಡಿಕೊಳ್ಳುವಂತೆ ಸಲ್ಮಾನ್ ಖಾನ್ ರೊಂದಿಗೆ ಚೌಕಾಸಿ ಮಾಡಲಾಗುತ್ತಿದೆ. ಆತ ಒಪ್ಪಿಕೊಳ್ಳದಿದ್ದರೆ ಒಪ್ಪ್ಪಂದವನ್ನು ಕೈಬಿಡಬೇಕೆಂದು ಟಿ-ಸೀರೀಸ್ ನಿರ್ಧರಿಸಿದೆ. ಅಕ್ಷಯ್ ಕುಮಾರ್ ರೊಂದಿಗೆ ಯುಟಿವಿ ಮಾಡಿಕೊಂಡಿರುವ ರು.70 ಕೋಟಿ ಒಪ್ಪಂದ ಗೆದ್ದಲು ತಿನ್ನುತ್ತಿದೆ.

ಸಿನಿಮಾಗೂ ಹಬ್ಬಿದ ಸಿಬ್ಬಂದಿ ಕಡಿತ
ಕೆಲವೊಂದು ಸಿನಿಮಾ ನಿರ್ಮಾಣ ಸಂಸ್ಥೆಗಳು ಸಿಬ್ಬಂದಿ ಕಡಿತಕ್ಕೂ ಮುಂದಾಗಿವೆ. ಸಿಬ್ಬಂದಿ ವೇತನ ವಿಚಾರದಲ್ಲೂ ಎಚ್ಚರ ವಹಿಸುತ್ತಿವೆ. ಹಿಮೇಶ್ ರಶ್ಮಿಮಾ ನಾಯಕ ನಟನಾಗಿ 'ಹೇ ಗುಜ್ಜು' ಎಂಬ ಚಿತ್ರವನ್ನು ರು.25 ಕೋಟಿ ಬಜೆಟ್ ನಲ್ಲಿ ನಿರ್ಮಿಸಲು ಯೋಜಿಸಲಾಗಿತ್ತು. ಈಗ ಆ ಚಿತ್ರದ ಚಿತ್ರೀಕರಣ ನೆನೆಗುದಿಗೆ ಬಿದ್ದಿದೆ. ಕಾರಣ ಬಜೆಟ್ ಕೊರತೆ. ಸಲ್ಮಾನ್ ಖಾನ್ ರೊಂದಿಗೆ ಶಿಲ್ಪಾಶೆಟ್ಟಿ ನಿರ್ಮಿಸುತ್ತಿರುವ 'ವೀರ್' ಚಿತ್ರೀಕರಣ ನಿಂತು ಹೋಗಿದೆ. ಹಿಮೇಶ್ ರಶ್ಮಿಯಾ ನಟಿಸುತ್ತಿರುವ ಮತ್ತೊಂದು ಚಿತ್ರ 'ಕಜ್ ರಾರೇ' ವೆಚ್ಚವನ್ನು ಕಡಿಮೆ ಮಾಡಿಕೊಂಡು ಚಿತ್ರೀಕರಣ ಕುಂಟುತ್ತಾ ಎಡವುತ್ತಾ ಸಾಗಿದೆ. ರು.25-35 ಕೋಟಿ ಎಂದುಕೊಂಡ ಬಜೆಟ್ ನ್ನು ಈಗ ಶೇ.35ರಷ್ಟನ್ನು ಕಡಿಮೆ ಮಾಡಿಕೊಳ್ಳಲಾಗಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada