ಸಂಭಾವನೆ ಕಮ್ಮಿ ಎಂದು ರಜನಿ ಚಿತ್ರದಿಂದ ರೇಖಾ ಔಟ್!
ಭಾರತೀಯ ಚಿತ್ರರಂಗದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಚಿತ್ರಗಳಲ್ಲಿ ರಜನಿಕಾಂತ್ ಅವರ 'ರಣ' ಚಿತ್ರವೂ ಒಂದು. ಈ ಚಿತ್ರದ ಸದ್ಯದ ಲೇಟೆಸ್ಟ್ ಸುದ್ದಿ ಎಂದರೆ, ಬಾಲಿವುಡ್ ಅಭಿನೇತ್ರಿ ರೇಖಾ ಹಾಗೂ ಮತ್ತೊಬ್ಬ ತಾರೆ ವಿದ್ಯಾ ಬಾಲನ್ ಚಿತ್ರದಿಂದ ಹೊರಬಿದ್ದಿರುವುದು. ರಜನಿ ಚಿತ್ರ ಎಂದರೆ ಬಜೆಟ್ ಗಾತ್ರ, ಪಾತ್ರಧಾರಿಗಳ ಆಯ್ಕೆ ಎಲ್ಲವೂ ಅಚ್ಚರಿ ಹುಟ್ಟಿಸುವಂತಿರುತ್ತದೆ. ಆದರೆ ಈಗ ರೇಖಾ ಹಾಗೂ ವಿದ್ಯಾ ಬಾಲನ್ ಹೊರಬೀಳುವ ಮೂಲಕ ರಜನಿಗೇ ಅಚ್ಚರಿ ಮೂಡಿಸಿದ್ದಾರೆ.
ರೇಖಾ ಅವರಿಗೆ ಸಂಭಾವನೆಯನ್ನು ಕಡಿತ ಮಾಡಿದ್ದೇ ಆಕೆ ಚಿತ್ರದಿಂದ ಹೊರಬೀಳಲು ಕಾರಣ ಎನ್ನಲಾಗಿದೆ. ರೇಖಾ ಅವರು ನಾಲ್ಕು ಕೋಟಿ ಸಂಭಾವನೆ ಕೇಳಿದ್ದರಂತೆ. ಅಷ್ಟು ಕೊಡಲು ಸುತಾರಾಂ ಒಪ್ಪದ ನಿರ್ಮಾಪಕಿ ಸೌಂದರ್ಯ ರಜನಿಕಾಂತ್ ಕೈ ಬಾಯಿ ಕಟ್ಟಿಕೊಂಡಿದ್ದಾರೆ. ಈ ಹಿಂದೆ ಮಾಧುರಿ ದೀಕ್ಷಿತ್ ಕೂಡ ಕಾರಣಾಂತರಗಳಿಂದ 'ರಣ' ಚಿತ್ರದ ಪಾತ್ರವನ್ನು ಒಲ್ಲೆ ಎಂದಿದ್ದರು.
ಇನ್ನು ವಿದ್ಯಾ ಬಾಲನ್ ಯಾಕೆ ಚಿತ್ರದಿಂದ ಹೊರಬಿದ್ದರು ಎಂದರೆ, ಆಕೆ ಚಿತ್ರಕತೆಯನ್ನು ಸಂಪೂರ್ಣ ಓದಬೇಕಾಗಿತ್ತಂತೆ. ಆದರೆ ಇದಕ್ಕೆ ಚಿತ್ರದ ನಿರ್ದೇಶಕ ಕೆ ಎಸ್ ರವಿಕುಮಾರ್ ಅವಕಾಶ ಮಾಡಿಕೊಡಲಿಲ್ಲವಂತೆ. ಇದರಿಂದ ಬೇಸರಗೊಂಡ ವಿದ್ಯಾ ಚಿತ್ರದಿಂದ ಹೊರಬಿದ್ದಿದ್ದಾರಂತೆ. ಈಗ ಚಿತ್ರದ ನಿರ್ಮಾಪಕರು ಕನಸಿನ ಕನ್ಯೆ ಹೇಮಾ ಮಾಲಿನಿ ಕಾಲ್ ಶೀಟ್‌ಗೆ ಪ್ರಯತ್ನಿಸುತ್ತಿದ್ದಾರೆ.
ಅಂದಹಾಗೆ ಈ ಚಿತ್ರದ ನಾಯಕಿ ಗುಳಿ ಕೆನ್ನೆ ಸುಂದರಿ ದೀಪಿಕಾ ಪಡುಕೋಣೆ. ಐತಿಹಾಸಿಕ ಚಿತ್ರವಾದ 'ರಣ'ದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಲಿದ್ದಾರೆ. ರೇಖಾ, ವಿದ್ಯಾ, ಮಾಧುರಿ ದೀಕ್ಷಿತ್ ಇವರೆಲ್ಲರೂ ಒಲ್ಲೆ ಎಂದಿರುವ ಪಾತ್ರವನ್ನು ಹೇಮಾ ಮಾಲಿನಿ ಒಪ್ಪುತ್ತಾರಾ ಎಂಬುದೇ ಮುಂದಿನ ಪ್ರಶ್ನೆ.


Click it and Unblock the Notifications











