ಒಂದೇ ದಿನದಲ್ಲಿ ರು.15 ಕೋಟಿ ಬಾಚಿದ 'ಡಾನ್ 2'
ಶಾರುಖ್ ಖಾನ್ ಹಾಗೂ ಪ್ರಿಯಾಂಕಾ ಚೋಪ್ರಾ ಮುಖ್ಯಭೂಮಿಕೆಯಲ್ಲಿರುವ 'ಡಾನ್ 2' ಚಿತ್ರ ಬಾಕ್ಸಾಫೀಸಲ್ಲಿ ಡಿಂಗ ಚಕ ಎಂದು ಡ್ಯಾನ್ಸ್ ಮಾಡಿದೆ. ಬಿಡುಗಡೆಯಾದ ಮೊದಲ ದಿನವೇ ಈ ಚಿತ್ರ ರು.15 ಕೋಟಿ ಬಾಚಿದೆ. ಮುಂದಿನ ದಿನಗಳಲ್ಲಿ ಇನ್ನೂ ವಸೂಲಿ ಮಾಡುವ ಎಲ್ಲ ಸೂಚನೆಗಳೂ 'ಡಾನ್' ಚಿತ್ರಕ್ಕಿದೆ ಎಂದು ಟ್ರೇಡ್ ಗುರು ತಿಳಿಸಿದೆ.
'ಬಾಡಿಗಾರ್ಡ್' ಹಾಗೂ 'ರಾ.ಒನ್' ಚಿತ್ರಗಳ ಗಳಿಕೆಗೆ ಹೋಲಿಸಿದರೆ 'ಡಾನ್ 2' ಚಿತ್ರದ ಗಳಿಕೆ ಕಡಿಮೆಯೆಂದೇ ಹೇಳಬೇಕು. ಆದರೆ ಮುಂಬರುವ ದಿನಗಳಲ್ಲಿ 'ಡಾನ್' ಬಾಕ್ಸಾಫೀಸಲ್ಲಿ ಕರಾಮತ್ತು ತೋರಲಿದೆ ಎಂದು ಬಾಲಿವುಡ್ ಮೂಲಗಳು ಅಭಿಪ್ರಾಯಪಟ್ಟಿವೆ.
ವಿದೇಶಗಳಲ್ಲೂ 'ಡಾನ್ 2' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯುಎಇಯಲ್ಲಿ 360,000 ಡಾಲರ್ ಬಾಚಿದೆ. ಇದೇ ಸೆಂಟರ್‌ನಲ್ಲಿ 'ಮೈ ನೇಮ್ ಈಸ್ ಖಾನ್' ಚಿತ್ರ 240,000 ಡಾಲರ್ ಬಾಚಿಕೊಂಡಿತ್ತು. ಈ ವರ್ಷ ಬಾಕ್ಸಾಫೀಸ್ ಕಲೆಕ್ಷನ್ಸ್ ಜೋರಾಗಿಯೇ ಇದೆ. 'ಬಾಡಿಗಾರ್ಡ್' ಚಿತ್ರ ಬಿಡುಗಡೆಯಾದ ಐದು ದಿನಗಳಲ್ಲಿ ರು.89 ಕೋಟಿ ಲೂಟಿ ಮಾಡಿತ್ತು. ಇನ್ನು ರಾ.ಒನ್ ಚಿತ್ರ ಮೊದಲ ಐದು ದಿನಗಳಲ್ಲಿ ರು.80.3 ಕೋಟಿ ಮಾಡಿದೆ. (ಏಜೆನ್ಸೀಸ್)


Click it and Unblock the Notifications











