ಆಸ್ಕರ್ ಅಂಗಳಕ್ಕೆ ನೆಗೆದ ಅಮೀರ್ ಖಾನ್ ಪೀಪ್ಲಿ ಲೈವ್!
ಈ ಬಾರಿಯ ಆಸ್ಕರ್ ಅಂಗಳಕ್ಕೆ ಅಮೀರ್ ಖಾನ್ ನಿರ್ಮಾಣದ ಪೀಪ್ಲಿ ಲೈವ್ ಚಿತ್ರ ನೆಗೆದಿದೆ. ಈ ಚಿತ್ರ ಅತ್ಯುತ್ತಮ ವಿದೇಶಿ ಚಿತ್ರ ವಿಭಾಗದಲ್ಲಿ ಸ್ಪರ್ಧಿಸಲು ಅಧಿಕೃತವಾಗಿ ಪ್ರವೇಶ ಪಡೆದಿದೆ. ಆಯ್ಕೆ ಸಮಿತಿ ಅಧ್ಯಕ್ಷ ಕೆ ಎಸ್ ಸೇತುಮಾಧವನ್ ಅವರು ಈ ವಿಷಯನ್ನು ತಿಳಿಸಿದ್ದಾರೆ.
"ಪೀಪ್ಲಿ ಲೈವ್ ಚಿತ್ರ ಭಾರತದ ಸಂಸ್ಕೃತಿ ಮತ್ತು ಸಮಾಜವನ್ನು ಪ್ರತಿಬಿಂಬಿಸುತ್ತದೆ. ರೈತರ ಆತ್ಮಹತ್ಯೆಯಂತಹ ಗಂಭೀರ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುತ್ತದೆ" ಎಂದು ಆಯ್ಕೆ ಸಮಿತಿ ಅಭಿಪ್ರಾಯಪಟ್ಟಿದೆ. 'ಪೀಪ್ಲಿ ಲೈವ್' ಮತ್ತು ತಮಿಳಿನ 'ಅಂಗಡಿ ಥೇರು ಚಿತ್ರಗಳ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಹಲವಾರು ಆಯಾಮಗಳನ್ನು ಪರಿಗಣಿಸಿ ಕಡೆಗೆ ಪೀಪ್ಲಿ ಲೈವ್ ಚಿತ್ರವನ್ನು ಆಯ್ಕೆ ಮಾಡಲಾಯಿತು ಎಂದು ಫಿಲಂ ಫೆಡರೇಷನ್ ಆಫ್ ಇಂಡಿಯ ಅಧ್ಯಕ್ಷ ಎಲ್ ಸುರೇಶ್ ತಿಳಿಸಿದ್ದಾರೆ.
ಅನುಶಾ ರಿಜ್ವಿ ನಿರ್ದೇಶನದ 'ಪೀಪ್ಲಿ ಲೈವ್' ಚಿತ್ರ ರೈತರ ಆತ್ಮಹತ್ಯೆ ಹಾಗೂ ಈ ರೀತಿಯ ಗಂಭೀರ ಸಮಸ್ಯೆಯನ್ನು ಮಾಧ್ಯಮಗಳು ಮತ್ತು ರಾಜಕಾರಣಿಗಳು ಹೇಗೆ ನಿಭಾಯಿಸುತ್ತಾರೆ ಎಂಬ ಬಗ್ಗೆ ಹಾಸ್ಯಭರಿತವಾಗಿ ತೆರೆಗೆ ತಂದಿದ್ದಾರೆ. ಸ್ಪರ್ಧೆಯಲ್ಲಿ ಪಾ, ರಾಜ್ ನೀತಿ, ಮೈ ನೇಮ್ ಈಸ್ ಖಾನ್, ತ್ರೀ ಈಡಿಯಟ್ಸ್ ಮತ್ತು ಫಝಾಸಿ ರಾಜಾ ಚಿತ್ರಗಳು ಸೆಣೆಸಿದ್ದವು.
ಈ ಹಿಂದೆ ಅಮೀರ್ ಅಭಿನಯದ ಲಗಾನ್ ಚಿತ್ರವು ಆಸ್ಕರ್ ಸ್ಪರ್ಧೆಗೆ ಆಯ್ಕೆಯಾಗಿತ್ತು. ಕೊನೆ ಗಳಿಗೆಯಲ್ಲಿ ಪ್ರಶಸ್ತಿ ಒಲಿಯಲಿಲ್ಲ. ಈ ಬಾರಿ ಪೀಪ್ಲಿ ಲೈವ್ ಚಿತ್ರ ಆಸ್ಕರ್ ಕನಸನ್ನು ನನಸು ಮಾಡಲಿದೆಯೇ ಎಂಬುದನ್ನು ಕಾದುನೋಡಬೇಕು.


Click it and Unblock the Notifications











