ಬಾಲಿವುಡ್ ತಾರೆ ಕರಿಷ್ಮಾ ಕಪೂರ್ ದಾಂಪತ್ಯದಲ್ಲಿ ಬಿರುಕು
ಬಾಲಿವುಡ್‌ನ ಒಂದು ಕಾಲದ ತಾರೆ ಹಾಗೂ ಕರೀನಾ ಕಪೂರ್ ಅಕ್ಕ ಕರಿಷ್ಮಾ ಕಪೂರ್ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ. 2003ರಲ್ಲಿ ಕರಿಷ್ಮಾ ಕಪೂರ್ ದೆಹಲಿ ಮೂಲಕ ಉದ್ಯಮಿ ಸಂಜಯ್ ಕಪೂರ್ ಅವರನ್ನು ಮದುವೆಯಾಗಿದ್ದರು. ಸುದೀರ್ಘ ಸಮಯದಿಂದ ಇವರ ದಾಂಪತ್ಯ ಜೀವನದಲ್ಲಿ ಮುಸುಕಿನ ಗುದ್ದಾಟ ನಡೆದೇ ಇತ್ತು.
ಈ ದಂಪತಿಗಳಿಗೆ ಆರತಿಗೊಬ್ಬ ಮಗಳು ಕೀರ್ತಿಗೊಬ್ಬ ಮಗ. ಈಗ ಇವರ ದಾಂಪತ್ಯದಲ್ಲಿ ದೊಡ್ಡ ಬಿರುಕು ಮೂಡಿದ್ದು ಬಾಲಿವುಡ್ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಕರಿಷ್ಮಾ ಕಪೂರ್ ಪತಿ ಸಂಜಯ್ ವಿಚ್ಛೇದಿತ ಮಹಿಳೆಯೊಂದಿಗೆ ಸನ್ನಿಹಿತವಾಗಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
ಅನಿವಾಸಿ ಭಾರತೀಯ ಹೋಟೆಲ್ ಉದ್ಯಮಿಯೊಬ್ಬರಮಾಜಿ ಪತ್ನಿಯಾಗಿರುವ ಈಕೆಯೊಂದಿಗೆ ಸಂಜಯ್ ಒಂಚೂರು ಸಲುಗೆಯಿಂದಲೇ ಇದ್ದಾರೆ. ಈಕೆ ರೂಪದರ್ಶಿ ಕೂಡ. ಸಂಜಯ್ ಹಾಗೂ ಈಕೆ ಆಗಾಗ ದೆಹಲಿಯ ಪ್ರತಿಷ್ಠಿತ ಪಾರ್ಟಿಗಳಲ್ಲಿ ಕಾಣಿಸಿಕೊಂಡು ಕರಿಷ್ಮಾ ಕಣ್ಣನ್ನು ಕೆಂಪಾಗಿಸಿದ್ದಾರೆ.
ಇವರಿಬ್ಬರ ನಡುವೆ ಇದ್ದಂತಹ ಸ್ನೇಹ ಸಂಬಂಧದ ಗೆರೆ ಅಳಿಸಿಹೋಗಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ ಎಂಬ ಮಾತುಗಳು ಕೇಳಿಬಂದಿವೆ. ಪ್ರಸ್ತುತ ಕರೀಷ್ಮಾ ಮುಂಬೈನಲ್ಲಿದ್ದರೆ ಸಂಜಯ್ ದೆಹಲಿಯಲ್ಲಿದ್ದಾರೆ. ಇವರಿಬ್ಬರೂ ನಾನೊಂದು ತೀರ ನೀನೊಂದು ತೀರ ಎಂಬಂತಿರುವುದು ದಾಂಪತ್ಯದಲ್ಲಿ ಬಿರುಕು ಮೂಡಲು ಮತ್ತೊಂದು ಬಲವಾದ ಕಾರಣ ಎಂಬ ಮಾತುಗಳು ಕೇಳಿಬಂದಿವೆ.


Click it and Unblock the Notifications











