ಬಾಲಿವುಡ್ ನಟಿ ಐಶ್ವರ್ಯ ರೈ ಧೂಮಪಾನಿಯೇ!?
ಬಾಲಿವುಡ್ ನಟಿ ಐಶ್ವರ್ಯ ರೈ ಅವರು ಧೂಮಪಾನ ಮಾಡುತ್ತಾರೆಯೋ ಇಲ್ಲವೋ ಎಂಬುದು ಗೊತ್ತಿಲ್ಲ. ಆದರೆ ಈ ಚಿತ್ರ ನೋಡಿದರೆ ಅವರು ಸಹ ಧಂ ಎಳೆಯುತ್ತಾರೆ ಎಂಬ ಗುಮಾನಿ ಕಾಡದೆ ಬಿಡದು. ಇನ್ನೇನು ಬಿಡುಗಡೆಗೆ ಸಿದ್ಧವಾಗಿರುವ 'ಗುಜಾರಿಶ್' ಚಿತ್ರದಲ್ಲಿ ಐಶು ಬೇಬಿ ಧಮ್ಮಿನ ಮತ್ತೇ ಗಮ್ಮತ್ತು ಅಳತೆ ಮೀರಿದರೆ ಶ್ವಾಸಕ್ಕೆ ಕುತ್ತು ಎಂದು ಕೈಯಲ್ಲಿ ಸಿಗರೇಟ್ ಹಿಡಿದು ಕಾಣಿಸಿದ್ದಾರೆ.
ಸಂಜಯ್ ಲೀಲಾ ಭನ್ಸಾಲಿ ಅವರ ಬಹುನಿರೀಕ್ಷಿತ ಚಿತ್ರ'ಗುಜಾರಿಶ್' ಪ್ರಥಮ ಪ್ರತಿ ಹೊರಬಿದ್ದಿದೆ. ಚಿತ್ರದ ಪ್ರಚಾರ ದೃಶ್ಯಗಳಲ್ಲಿ ನಟಿ ಐಶ್ವರ್ಯ ರೈ ಸಿಗರೇಟು ಸೇದುವ ದೃಶ್ಯ ಚರ್ಚೆಗೆ ಗ್ರಾಸವಾಗಿದೆ. "ಅಷ್ಟಾಗಿ ಸೀರಿಯಸ್ ವಿಷಯವೇನು ಅಲ್ಲ ಬಿಡಿ ಇದು. ಇದೊಂದು ತಿಳಿಹಾಸ್ಯದ ದೃಶ್ಯ" ಎಂದು ಸಮರ್ಥಿಸಿಕೊಂಡಿದ್ದಾರೆ ಚಿತ್ರದ ನಿರ್ದೇಶಕರು.
ಆದರೆ ಈ ಚಿತ್ರದಲ್ಲಿ ಐಶ್ವರ್ಯ ರೈ ಅವರು ಸಿಗರೇಟು ಸೇದಿಲ್ಲ. ಇದೊಂದು ತಾಂತ್ರಿಕ ಕೈಚಳಕವಷ್ಟೆ. ಈ ದೃಶ್ಯ ಯಾರಿಗೂ ಪ್ರೇರಣೆಯೂ ಅಲ್ಲ ಎಂದಿದ್ದಾರೆ ಚಿತ್ರದ ನಿರ್ಮಾಪಕ ಸಿದ್ಧಾರ್ಥರಾಯ್ ಕಪೂರ್. ಸಾಮಾನ್ಯವಾಗಿ ನಾಯಕನಟರು ತೆರೆಯ ಮೇಲೆ ಸಿಗರೇಟ್ ಹೊಗೆ ಉಗುಳಿದರೆ ಶಿಳ್ಳೆ ಹೊಡೆಯುತ್ತಾರೆ. ಈ ಬಗ್ಗೆ ಯಾರೂ ಕ್ಯಾರೇ ಎನ್ನುವುದೂ ಇಲ್ಲ. ಆದರೆ ನಾಯಕಿ ಧಂ ಎಳೆದಿರುವುದರ ಬಗ್ಗೆ, ಇದು ಎಲ್ಲಿ ಸಮಾಜದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೋ ಎಂಬ ಆತಂಕ ವ್ಯಕ್ತವಾಗಿದೆ.


Click it and Unblock the Notifications











