ಪ್ರಥಮ ಚುಂಬನಂ ದಂತ ಭಗ್ನಂ ; 3 ವರ್ಷವಾದರೂ ಕೂಡ ಬಿಡುಗಡೆಯಾಗಲೇ ಇಲ್ಲ ಸಾಯಿ ಪಲ್ಲವಿಯ ಮೊದಲ ಹಿಂದಿ ಸಿನಿಮಾ
ಸಿನಿಮಾ ಕೇವಲ ಸಿನಿಮಾ ಅಲ್ಲ. ಹಲವರ ಪಾಲಿಗೆ ಅದೊಂದು ತಪಸ್ಸು. ಅಸಂಖ್ಯಾತ ಕನಸುಗಳ ಕಲಾಕೃತಿ. ಚಿತ್ರರಂಗದಲ್ಲಿಯೇ ಹಲವರು ಹೇಳುವಂತೆ ಸಿನಿಮಾ ಮಾಡುವುದು ಕಷ್ಟದ ಕೆಲಸ ಅಲ್ಲ. ಆದರೆ, ಆ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸುವುದು ಬದಲಾದ ಈ ಕಾಲದಲ್ಲಿ ತುಂಬಾನೇ ಕಷ್ಟದ ಕೆಲಸ. ಸರಿಯಾದ ಸಮಯಕ್ಕೆ ಆ ಚಿತ್ರಕ್ಕೆ ಬೇಕಾದ ಪ್ರಚಾರವನ್ನು ಸರಿಯಾಗಿ ಮಾಡಿ ಇಲ್ಲಿ ಬಿಡುಗಡೆ ಮಾಡಬೇಕು.
ಆದರೆ ..ಈ ದಾರಿಯಲ್ಲಿ ಕೆಲವರು ಎಡವುತ್ತಾರೆ. ಇನ್ನೂ ಕೆಲವರನ್ನು ಕೆಲವು ಕಿರಾತಕರು ದಿಕ್ಕು ತಪ್ಪಿಸುತ್ತಾರೆ. ಹೀಗಾಗಿ ಬಣ್ಣ .. ಬಣ್ಣದ .. ಮಾತುಗಳನ್ನು ನಂಬಿ ಚಿತ್ರ ನಿರ್ಮಾಣಕ್ಕಿಳಿಯುವ ಹಲವರು ಆ ನಂತರ ತಲೆ ಮೇಲೆ ಕೈಹೊತ್ತುಕೊಂಡು ಕುಳಿತುಕೊಳ್ಳುತ್ತಾರೆ. ಚಿತ್ರದ ಪ್ರಚಾರವನ್ನು ಕೂಡ ಮಾಡದೇ ಹೇಗೋ ಬಿಡುಗಡೆಯಾದರೆ ಸಾಕು ಎಂಬ ಮನೋಭಾವದಲ್ಲಿ ಆತುರಾತುರವಾಗಿ ತಮ್ಮ ಚಿತ್ರವನ್ನು ಬಿಡುಗಡೆ ಮಾಡುತ್ತಾರೆ.

ಹಾಗಂಥ ಎಲ್ಲರೂ ಈ ಸಾಲಿಗೆ ಸೇರುವುದಿಲ್ಲ. ಅಲ್ಲೊಬ್ಬರು.. ಇಲ್ಲೊಬ್ಬರು.. ಎಷ್ಟೇ ಕಷ್ಟ ಆದರೂ ಕೂಡ ಬಿಡುಗಡೆಯ ವಿಚಾರದಲ್ಲಿ ರಾಜಿಯಾಗುವುದಿಲ್ಲ. ಚಿತ್ರಕ್ಕೆ ಬೇಕಾದ ಪ್ರಚಾರವನ್ನು ಮಾಡಿ ಹಿಂದೆ ಮುಂದೆ ಯಾರಿದ್ದಾರೆ ಎಂದು ನೋಡಿಕೊಂಡು ಅಖಾಡಕ್ಕೆ ಧುಮುಕುತ್ತಾರೆ. ಆ ನಂತರ ಆ ಚಿತ್ರದ ಭವಿಷ್ಯ ಆ ಚಿತ್ರದ ಕಥೆ ಮೇಲೆ ಅವಲಂಬಿತವಾಗಿರುತ್ತೆಯಾದರೂ ಕೂಡ ಸದ್ಯ ಇದೇ ತರಹದ ಬಿಡುಗಡೆಯ ರಣತಂತ್ರ ಸಾಯಿ ಪಲ್ಲವಿಯನ್ನು ಹೈರಾಣಾಗಿಸಿದೆ. ಶುರುವಾಗಿ ಮೂರು ವರ್ಷವಾದರೂ ಕೂಡ ಇವರ ಚಿತ್ರ ಬಿಡುಗಡೆಯಾಗದೇ ಡಬ್ಬಾದಲ್ಲಿಯೇ ಕುಳಿತುಕೊಂಡಿದೆ.
ಹೌದು, ತಮ್ಮ ಸಹಜ ಅಭಿನಯ ಮತ್ತು ಸಹಜ ಸೌಂದರ್ಯದಿಂದ ಕೇವಲ ದಕ್ಷಿಣದಲ್ಲಿ ಅಷ್ಟೇ ಅಲ್ಲ, ಉತ್ತರದಲ್ಲಿ ಕೂಡ ಅನೇಕರ ಹೃದಯಕ್ಕೆ ಕನ್ನ ಹಾಕಿರುವವರು ಸಾಯಿ ಪಲ್ಲವಿ. ಹಿಂದೊಮ್ಮೆ ಎರಡು ಕೋಟಿ ರೂಪಾಯಿ ಸಂಭಾವನೆಯ ಸೌಂದರ್ಯವರ್ಧಕ ಜಾಹೀರಾತನ್ನು ಸಾರಸಗಟಾಗಿ ತಿರಸ್ಕರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಸಾಯಿ ಪಲ್ಲವಿ ಕೂಡ ರಶ್ಮಿಕಾ ಮಂದಣ್ಣ.. ಪ್ರಿಯಾಮಣಿ.. ಸೇರಿ ಬಾಲಿವುಡ್‌ನಲ್ಲಿ ಸದ್ಯ ಹೆಸರು ಮಾಡಿರುವ, ನೆಲೆಯೂರಿರುವವರ ಹೆಜ್ಜೆ ಜಾಡನ್ನು ಹಿಡಿದು ಬಾಲಿವುಡ್‌ನತ್ತ ಮುಖ ಮಾಡಿದ್ದರು. ಚಿತ್ರವನ್ನು ಕೂಡ ಒಪ್ಪಿಕೊಂಡಿದ್ದರು. ಆ ಚಿತ್ರದ ಹೆಸರು ''ಮೇರೆ ರಹೋ''.
ವಿಶೇಷ ಅಂದರೆ 2023ರಲ್ಲಿ ಶುರುವಾದ ಈ ಚಿತ್ರದ ನಾಯಕ ಬೇರೆ ಯಾರು ಅಲ್ಲ ಬದಲಿಗೆ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಅವರ ಮಗ ಜುನೈದ್ ಖಾನ್. ಈ ಹಿನ್ನೆಲೆ ಚಿತ್ರದ ಮೇಲೆ ನಿರೀಕ್ಷೆಗಳಿದ್ದವು. ತಮ್ಮ ಮೊದಲ ಪ್ರಯತ್ನವನ್ನು ಹಿಂದಿಯಲ್ಲಿ ಸಾಯಿ ಪಲ್ಲವಿ ಸೂಕ್ತ ವ್ಯಕ್ತಿಯ ಜೊತೆಯಲ್ಲಿಯೇ ಮಾಡುತ್ತಿದ್ದಾರೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಆದರೆ..ಶುರುವಾಗಿ ಮೂರು ವರ್ಷ ಆದರೂ ಈ ಚಿತ್ರಕ್ಕೆ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ. ಬಿಡುಗಡೆಗೆ ಅಡ್ಡಗಾಲು ಹಾಕುತ್ತಿರುವುದು ಬೇರೆ ಯಾರು ಅಲ್ಲ ಬದಲಿಗೆ ಖುದ್ದು ಆಮಿರ್ ಖಾನ್ ಎನ್ನುವುದು ಈ ಕ್ಷಣದ ವಿಶೇಷ.
ಹೌದು, ಅಸಲಿಗೆ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ''ಮೇರೆ ರಹೋ'' ಕಳೆದ ವರ್ಷದಂದು (2025) ಕ್ರಿಸ್ಮಸ್ ಹಬ್ಬದ ಪ್ರಯುಕ್ತ ತೆರೆಗೆ ಬರಬೇಕಿತ್ತು. ಆದರೆ ವ್ಯಾಪಾರ ಚತುರರಾಗಿರುವ ಆಮಿರ್ ಖಾನ್ ಅವರಿಗೆ ''ಧುರಂಧರ್'' ನೀಡಬಹುದಾದ ಹೊಡೆತದ ಅರಿವು ಮೊದಲೇ ಇತ್ತು. ಬಿಡುಗಡೆಯಾದ ನಂತರ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ ಈಗ ಬಿಡುಗಡೆ ಮಾಡಿದರೆ ಇರುಳು ಕಂಡ ಬಾವೀಲಿ ಹಗಲು ಬಿದ್ದಂತಾಗುತ್ತೆ ಎಂದು ಆಮಿರ್ ಖಾನ್‌ಗೆ ಮನದಟ್ಟಾಗಿತ್ತು.

ಹೀಗಾಗಿ ತಮ್ಮ ಮಗನ ಚಿತ್ರವನ್ನು ಆಮಿರ್ ಖಾನ್ ಏಪ್ರಿಲ್‌ಗೆ ಮುಂದೂಡಿದರು. ಆದರೆ, ಬದಲಾದ ಲೆಕ್ಕಾಚಾರದಲ್ಲಿ ಈದ್ ಹಬ್ಬಕ್ಕೆ ಮಾರ್ಚ್‌ನಲ್ಲಿ ಬರಬೇಕಿದ್ದ ಸಲ್ಮಾನ್ ಖಾನ್ ತಮ್ಮ ಚಿತ್ರ ''ಬ್ಯಾಟಲ್ ಆಫ್ ಗಲ್ವಾನ್'' ಏಪ್ರಿಲ್‌ನಲ್ಲಿ ಬಿಡುಗಡೆಯಾಗುತ್ತಿರುವುದಾಗಿ ಘೋಷಿಸಿದರು. ಹೀಗಾಗಿ ಆಮಿರ್ ಖಾನ್ ಇನ್ನೊಮ್ಮೆ ಈಗ ಜುನೈದ್ ಮತ್ತು ಸಾಯಿ ಪಲ್ಲವಿ ಅಭಿನಯದ ''ಮೇರೆ ರಹೋ'' ಚಿತ್ರವನ್ನು ಮುಂದೂಡಿದ್ದಾರೆ. ಮಳೆಗಾಲದ ಆಚೀಚೆ ಜನ ಪ್ರೇಮ ಕಥೆಯನ್ನು ಇಷ್ಟ ಪಡುತ್ತಾರೆ ಎಂದುಕೊಂಡು ಚಿತ್ರವನ್ನು ಜುಲೈನಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ ಎನ್ನುವ ಸುದ್ದಿ ಸದ್ಯ ಮುಂಬೈನಲ್ಲಿ ಗುಲ್ಲಾಗಿದೆ.
ಅಂದ್ಹಾಗೇ ಯಶ್ ನಿರ್ಮಾಣದ ರಣಬೀರ್ ಕಪೂರ್ ಅಭಿನಯದ ''ರಾಮಾಯಣ'' ಚಿತ್ರಕ್ಕೂ ಕೂಡ ಸಾಯಿ ಪಲ್ಲವಿ ಬಣ್ಣ ಹಚ್ಚಿದ್ದಾರೆ. ಸೀತಾ ದೇವಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಲೆಕ್ಕದ ಪ್ರಕಾರ ಸಾಯಿ ಪಲ್ಲವಿಗೆ ಬಾಲಿವುಡ್‌ನಲ್ಲಿ ಎರಡನೇ ಸಿನಿಮಾ. ಹೀಗಾಗಿ ಜುಲೈನಲ್ಲಾದರೂ ''ಮೇರೆ ರಹೋ'' ಬಿಡುಗಡೆಯಾಗುತ್ತಾ..? ಅಥವಾ ''ರಾಮಾಯಣ'' ಚಿತ್ರವೇ ಮೊದಲು ಬಿಡುಗಡೆಯಾಗುತ್ತಾ..? ಎನ್ನುವ ಚಿಂತೆ ಈಗ ಈ ಸಿಂಪಲ್ ಸುಂದರಿಯ ಅಭಿಮಾನಿಗಳನ್ನು ಕಾಡುತ್ತಿದೆ. ದೀಪಾವಳಿ ಹಬ್ಬದ ಪ್ರಯುಕ್ತ ''ರಾಮಾಯಣ'' ಚಿತ್ರದ ಮೊದಲ ಭಾಗ ನವೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications











