30,000 ಕೋಟಿ ಸಮರ ; ಮಾಜಿ ಪತಿಯ 3ನೇ ಪತ್ನಿ ವಿರುದ್ಧ ಕರಿಷ್ಮಾ ಕಪೂರ್‌ಗೆ ಮುನ್ನೆಡೆ - ಪ್ರಿಯಾಗೆ ಶಾಕ್ ನೀಡಿದ ಹೈಕೋರ್ಟ್
ಹಣ ಎಂದರೆ ಹೆಣ ಕೂಡ ಬಾಯಿ ಬೀಡುವ ಕಾಲ ಇದು. ಈ ಕಾಲದಲ್ಲಿ ಹಣದ ಮುಂದೆ ಸಂಬಂಧಕ್ಕೆ ಬೆಲೆ ಇಲ್ಲ. ಪ್ರೀತಿ .. ನಂಬಿಕೆ.. ವಿಶ್ವಾಸ .. ಗೌರವ.. ಕೌಟುಂಬಿಕ ಮೌಲ್ಯಗಳಿಗಿಂತ ಈಗ ಬ್ಯಾಂಕ್ ಬ್ಯಾಲೆನ್ಸ್ ಮುಖ್ಯ. ರಕ್ತ ಸಂಬಂಧಕ್ಕಿಂತ ಆಸ್ತಿ-ಪಾಸ್ತಿ ಮುಖ್ಯ. ಆಸ್ತಿಗೋಸ್ಕರ.. ಒಂದು ಅರ್ಧ ಸೈಟ್ ಗೋಸ್ಕರ.. ಮನೆಯಲ್ಲಿಯೇ ಬಿರುಕು ಮೂಡುತ್ತೆ. ವೈರತ್ವ ಬೆಳೆಯುತ್ತೆ.
ತಂದೆ -ಮಗ ಇರಬಹುದು.. ಅತ್ತೆ-ಸೊಸೆ ಇರಬಹುದು.. ಗಂಡ-ಹೆಂಡತಿ ಇರಬಹುದು.. ಅಕ್ಕ-ತಮ್ಮ ಅಥವಾ ಅಣ್ಣ ತಂಗಿಯೇ ಆಗಿರಬಹುದು. ಹಣದ ಮುಂದೆ ಸಂಬಂಧಗಳು ಕಳಚಿ ಬೀಳುತ್ತವೆ. ಹಣ ಮತ್ತು ಆಸ್ತಿಯ ಮೇಲಿನ ವ್ಯಾಮೋಹದಿಂದ ಸಂಬಂಧಗಳು ಮಣ್ಣು ಪಾಲಾಗುತ್ತವೆ. ಇಷ್ಟೇ ಅಲ್ಲ ಕುಟುಂಬದ ಘನತೆ ಕೂಡ ಈ ಹಣದ ಹಪಾಹಪಿಯಿಂದ ಮೂರು ಕಾಸಿಗೆ ಹರಾಜು ಆಗುತ್ತೆ. ಹೀಗಿರುವಾಗ ಕರಿಷ್ಮಾ ಕಪೂರ್ ಅವರ ಮಾಜಿ ಪತಿ ಸಂಜಯ್ ಕಪೂರ್ ಕಟ್ಟಿದ್ದ 30,000 ಕೋಟಿಯ ಸಾಮ್ರಾಜ್ಯದಲ್ಲಿ ಕಂಪನವಾಗದಿರಲು ಹೇಗೆ ಸಾಧ್ಯ..?

ಹೌದು, ವೃತ್ತಿ ಬದುಕಿನಲ್ಲಿ ಖ್ಯಾತಿಯ ಶಿಖರಕ್ಕೇರಿದ ಕರಿಷ್ಮಾ ಕಪೂರ್ 2003ರಲ್ಲಿ ಉದ್ಯಮಿ ಸಂಜಯ್ ಕಪೂರ್ ಅವರನ್ನು ಮದುವೆಯಾಗಿದ್ದರು. ಆದರೆ ಆ ನಂತರ ಅನುದಿನ - ಅನುಕ್ಷಣ .. 07 ವರ್ಷ ಕಣ್ಣೀರಿನಲ್ಲಿಯೇ ಕೈ ತೊಳೆದರು. 2010ರಲ್ಲಿ ಇನ್ನು ಜೊತೆಯಲ್ಲಿ ಬದುಕಲು ಸಾಧ್ಯ ಇಲ್ಲ ಎಂದುಕೊಂಡು ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಮುಂಬೈಗೆ ಮರಳಿ ಬಂದರು. ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದರು. 2016ರಲ್ಲಿ ವಿಚ್ಛೇದನವನ್ನು ಕೂಡ ಪಡೆದರು.
ಆದರೆ ಈಗ ಸಂಜಯ್ ಕಪೂರ್ ಇಲ್ಲ. ಕಳೆದ ಜೂನ್‌ನಲ್ಲಿ ಸಂಜಯ್ ಕಪೂರ್ ಹಠಾತ್ ನಿಧನರಾದರು. ಉದ್ಯಮಿಯಾಗಿ ಗುರುತಿಸಿಕೊಂಡಿದ್ದ, ಹೆಸರು ಮಾಡಿದ್ದ ಸಂಜಯ್ ಕಪೂರ್ ''ಸೋನಾ ಕಾಮ್ಸ್ಟಾರ್'' ಕಂಪನಿಗೆ ಅಧ್ಯಕ್ಷರಾಗಿದ್ದರು. ₹30,000 ಕೋಟಿಯ ಸಾಮ್ರಾಜ್ಯವನ್ನು ಕೂಡ ಸ್ಥಾಪಿಸಿದ್ದರು.
ಇನ್ನೂ ಆಗಲೇ ಹೇಳಿದಂತೆ ಸಂಬಂಧಗಳು ಹಣದ ಎದುರು ಕೊಚ್ಚಿಕೊಂಡು ಹೋಗುವಂತಹ ಕಾಲ ಇದು. ದುರಾಸೆಯಿಂದ ಅನೇಕರು ಸಂಬಂಧಗಳನ್ನು ಕಡಿದುಕೊಳ್ಳುತ್ತಿದ್ದಾರೆ.ಇದಕ್ಕೆ ಕೈಗನ್ನಡಿ ಎಂಬಂತೆ ₹30,000 ಕೋಟಿ ಆಸ್ತಿಗಾಗಿ ಸಂಜಯ್ ಕಪೂರ್ ಮನೆಯಲ್ಲಿ ಸಮರವೇ ಶುರುವಾಗಿದೆ. ಮನೆಯವರ ನಡುವೆಯೇ ಕಾನೂನು ಯುದ್ಧ ಆರಂಭವಾಗಿದೆ.
ಹೌದು, ನಿಮಗೆ ಗೊತ್ತಿರಲಿ ಈಗಾಗಲೇ ತಮ್ಮ ಮನೆಯ ಮೂರನೇ ಸೊಸೆ ಪ್ರಿಯಾ ಸಚ್‌ದೇವ್ ವಿರುದ್ಧ ಸಂಜಯ್ ಕಪೂರ್ ಅವರ ತಾಯಿ ರಾಣಿ ಕಪೂರ್ ತಿರುಗಿ ಬಿದ್ದಿದ್ಧಾರೆ. ಇಷ್ಟೇ ಅಲ್ಲ ಸಂಜಯ್ ಕಪೂರ್ ಅವರ ಸಹೋದರಿ ಮಂದಿರಾ ಕೂಡ ತಮ್ಮ ತಾಯಿಯ ಪರ ನಿಂತಿದ್ದು ನಮಗೆ ಸೇರಬೇಕಾದ ಆಸ್ತಿಯನ್ನು ಹೊರಗಿನವರು ಬಂದು ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಮತ್ತೊಂದು ಕಡೆ ಕರಿಷ್ಮಾ ಕಪೂರ್ ಕೂಡ ಈ ಕಾನೂನು ಸಮರದಲ್ಲಿ ಧುಮುಕಿದ್ದಾರೆ. ತನ್ನ ಮಾಜಿ ಪತಿಯ 30,000 ಕೋಟಿ ಆಸ್ತಿ ಕೊಳ್ಳೆ ಹೊಡೆಯಲು ಪ್ರಿಯಾ ನಕಲಿ ವಿಲ್ ಸೃಷ್ಟಿ ಮಾಡಿದ್ಧಾರೆ ಎಂದು ಆರೋಪ ಮಾಡಿದ್ದಾರೆ. ಉಯಿಲಿನ ಸತ್ಯಾಸತ್ಯತೆ ಪರಿಶೀಲನೆ ಮಾಡಬೇಕು ಮತ್ತು ತನ್ನ ಮಕ್ಕಳಿಗೆ ಸಿಗಬೇಕಾದ ಸ್ಥಾನ ಮಾನ ಮತ್ತು ಆಸ್ತಿಯಲ್ಲಿನ ಪಾಲು ಸಿಗಬೇಕೆಂದು ವಾದ ಮಾಡಿದ್ಧಾರೆ.
ಇಷ್ಟೇ ಅಲ್ಲ ಕೋರ್ಟ್‌ಗೆ ಸಲ್ಲಿಸಿರುವ ಆಸ್ತಿ ಪಟ್ಟಿಯಲ್ಲಿ ಪ್ರಿಯಾ ಹಲವು ಬೆಲೆಬಾಳುವ ವಸ್ತುಗಳನ್ನು ಕೈಬಿಟ್ಟಿದ್ದಾರೆ ಎಂದು ತಮ್ಮ ಮಕ್ಕಳ ಮೂಲಕ ವಾದ ಮಂಡಿಸಿರುವ ಕರಿಷ್ಮಾ ಕಪೂರ್ ಪೋಲೋ ಆಟಕ್ಕೆ ಬಳಸುವ ದುಬಾರಿ ಕುದುರೆಗಳು, ಆಡಿಮರ್ಸ್ ಪಿಗೆಟ್ ಮತ್ತು ರೋಲೆಕ್ಸ್ ನಂತಹ ಐಷಾರಾಮಿ
ಕೈಗಡಿಯಾರಗಳು, ಬೆಲೆಬಾಳುವ ಪೇಂಟಿಂಗ್‌ಗಳು ಮತ್ತು ಸ್ಥಿರ ಆಸ್ತಿಗಳ ವಿವರಗಳನ್ನು ಮುಚ್ಚಿಡಲಾಗಿದೆ ಎಂದು ದೂರಿದ್ದಾರೆ.
ಸದ್ಯ ಕರಿಷ್ಮಾ ಕಪೂರ್ ಅವರಿಗೆ ಈ ಹೋರಾಟದಲ್ಲಿ ಮೊದಲ ಹಂತದ ಗೆಲುವು ಸಿಕ್ಕಂತಾಗಿದ್ದು, ದೆಹಲಿ ಹೈಕೋರ್ಟ್ ಕರಿಷ್ಮಾ ಕಪೂರ್ ಅವರ ಅರ್ಜಿಯನ್ನು ಪುರಸ್ಕರಿಸಿದೆ.
ಕರಿಷ್ಮಾ ಕಪೂರ್ ಮತ್ತು ಸಂಜಯ್ ಕಪೂರ್ ಮಕ್ಕಳಾದ ಸಮೈರಾ ಮತ್ತು ಕಿಯಾನ್ ರಾಜ್ ಕಪೂರ್ ಅವರ ಹಕ್ಕನ್ನು ರಕ್ಷಿಸಲು ನ್ಯಾಯಾಲಯ ಕ್ರಮ ಕೈಗೊಂಡಿದ್ದು, ಪ್ರಿಯಾ ಸಚ್‌ದೇವ್ ಅವರ ಮೇಲೆ ನಿಯಂತ್ರಣ ಹೇರಿದೆ. ಆಸ್ತಿಯನ್ನು ಬೇರೆಯವರಿಗೆ ಮಾರುವುದಾಗಲಿ, ಬೇರೆಯವರ ಹೆಸರಿಗೆ ವರ್ಗಾಯಿಸುವುದಾಗಲಿ, ಅಥವಾ ಆಸ್ತಿಯ ಮೇಲೆ ಮೂರನೇ ವ್ಯಕ್ತಿಯ ಹಕ್ಕನ್ನು ಸೃಷ್ಟಿಸುವುದೇ ಆಗಲಿ, ಯಾವುದನ್ನು ಕೂಡ ಮಾಡುವಂತೆ ಇಲ್ಲ ಎಂದು ಪ್ರಿಯಾ ಸಚ್‌ದೇವ್‌ಗೆ ಹೇಳಿರುವ ನ್ಯಾಯ ಮೂರ್ತಿ ಜ್ಯೋತಿ ಸಿಂಗ್
ಒಂದು ವೇಳೆ ಈಗಾಗಲೇ ಆಸ್ತಿಯಲ್ಲಿ ಹಂಚಿಕೆಯಾಗಿದ್ದರೆ ಮುಂದೆ ಮಕ್ಕಳು ಕಾನೂನು ಸಮರ ಗೆದ್ದ ನಂತರ ಬೇರೆಯವರಿಗೆ ಇದರಿಂದ ಅನ್ಯಾಯವಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ಧಾರೆ.
ಸಂಜಯ್ ಕಪೂರ್ ಅವರ ಆಸ್ತಿಗಳನ್ನು ಕರಗಿಸಬಾರದು, ಬದಲಿಗೆ ಸಂರಕ್ಷಿಸಬೇಕು ಎಂದು ಪ್ರಿಯಾ ಸಚ್‌ದೇವ್‌ಗೆ ತಾಕೀತು ಮಾಡಿರುವ ನ್ಯಾಯಾಲಯ ಸಂಜಯ್ ಕಪೂರ್ ಅವರ ಕಂಪನಿಗಳಲ್ಲಿನ ಷೇರುಗಳನ್ನು ಪರಭಾರೆ ಮಾಡುವುದು, ವರ್ಗಾಯಿಸುವುದು, ಅಥವಾ ಅಡವಿಡುವುದು, ಷೇರುದಾರರ ರಚನೆಯನ್ನು ಬದಲಾಯಿಸುವುದನ್ನು ಕೂಡ ನಿರ್ಬಂಧಿಸಿದೆ.
ಇಷ್ಟೇ ಅಲ್ಲ ಸಂಜಯ್ ಕಪೂರ್ ಅವರ ಉಯಿಲಿಗೆ ಸಂಬಂಧಿಸಿದ ಅನುಮಾನಗಳನ್ನು ದೂರ ಮಾಡುವ ಸಂಪೂರ್ಣ ಹೊಣೆ ಪ್ರಿಯಾ ಕಪೂರ್ ಮೇಲಿದೆ ಎಂದು ಹೇಳಿರುವ ನ್ಯಾಯಾಲಯ ಎಲ್ಲ ವಿಷಯ ಸಂಪೂರ್ಣ ಇತ್ಯರ್ಥವಾಗುವವರೆಗೂ, ಉಯಿಲಿನ ಸತ್ಯಾಸತ್ಯತೆ ಹೊರ ಬರುವವರೆಗೂ ಆಸ್ತಿಗಳನ್ನು ವಿಲೇವಾರಿ ಮಾಡುವಂತಿಲ್ಲ ಎಂದು ಕೂಡ ಹೇಳಿದೆ. ಸದ್ಯ ನ್ಯಾಯಾಲಯದ ಈ ತೀರ್ಪು ನೀಡಿದ ಬೆನ್ನಲ್ಲೇ ಕರಿಷ್ಮಾ ಕಪೂರ್ ನ್ಯಾಯ ಯಾವಾಗಲೂ ಗೆಲ್ಲುತ್ತೆ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.


Click it and Unblock the Notifications