ನಕಲಿ ಆಸ್ತಿ ಪತ್ರ, ತಾಯಿಗೆ ಬರೀ 12 ಲಕ್ಷ ; ಕರಿಷ್ಮಾ ಕಪೂರ್ ಮಾಜಿ ಪತಿಯ ₹30,000 ಕೋಟಿ ಸಾಮ್ರಾಜ್ಯದ ಮೇಲೆ ಬೇರೆಯವರ ಕಬ್ಜಾ
ಹಣ ಎಂದರೆ ಹೆಣ ಕೂಡ ಬಾಯಿ ಬೀಡುವ ಕಾಲ ಇದು. ಈ ಕಾಲದಲ್ಲಿ ಹಣದ ಮುಂದೆ ಸಂಬಂಧಕ್ಕೆ ಬೆಲೆ ಇಲ್ಲ. ಪ್ರೀತಿ .. ನಂಬಿಕೆ.. ವಿಶ್ವಾಸ .. ಗೌರವ.. ಕೌಟುಂಬಿಕ ಮೌಲ್ಯಗಳಿಗಿಂತ ಈಗ ಬ್ಯಾಂಕ್ ಬ್ಯಾಲೆನ್ಸ್ ಮುಖ್ಯ. ರಕ್ತ ಸಂಬಂಧಕ್ಕಿಂತ ಆಸ್ತಿ-ಪಾಸ್ತಿ ಮುಖ್ಯ. ಆಸ್ತಿಗೋಸ್ಕರ.. ಒಂದು ಅರ್ಧ ಸೈಟ್ ಗೋಸ್ಕರ.. ಮನೆಯಲ್ಲಿಯೇ ಬಿರುಕು ಮೂಡುತ್ತೆ. ವೈರತ್ವ ಬೆಳೆಯುತ್ತೆ.
ತಂದೆ -ಮಗ ಇರಬಹುದು.. ಅತ್ತೆ-ಸೊಸೆ ಇರಬಹುದು.. ಗಂಡ-ಹೆಂಡತಿ ಇರಬಹುದು.. ಅಕ್ಕ-ತಮ್ಮ ಅಥವಾ ಅಣ್ಣ ತಂಗಿಯೇ ಆಗಿರಬಹುದು. ಹಣದ ಮುಂದೆ ಸಂಬಂಧಗಳು ಕಳಚಿ ಬೀಳುತ್ತವೆ. ಹಣ ಮತ್ತು ಆಸ್ತಿಯ ಮೇಲಿನ ವ್ಯಾಮೋಹದಿಂದ ಸಂಬಂಧಗಳು ಮಣ್ಣು ಪಾಲಾಗುತ್ತವೆ. ಇಷ್ಟೇ ಅಲ್ಲ ಕುಟುಂಬದ ಘನತೆ ಕೂಡ ಈ ಹಣದ ಹಪಾಹಪಿಯಿಂದ ಮೂರು ಕಾಸಿಗೆ ಹರಾಜು ಆಗುತ್ತೆ. ಹೀಗಿರುವಾಗ ಕರಿಷ್ಮಾ ಕಪೂರ್ ಅವರ ಮಾಜಿ ಪತಿ ಸಂಜಯ್ ಕಪೂರ್ ಕಟ್ಟಿದ್ದ 30,000 ಕೋಟಿಯ ಸಾಮ್ರಾಜ್ಯದಲ್ಲಿ ಕಂಪನವಾಗದಿರಲು ಹೇಗೆ ಸಾಧ್ಯ..?

ಹೌದು, ವೃತ್ತಿ ಬದುಕಿನಲ್ಲಿ ಖ್ಯಾತಿಯ ಶಿಖರಕ್ಕೇರಿದ ಕರಿಷ್ಮಾ ಕಪೂರ್ 2003ರಲ್ಲಿ ಉದ್ಯಮಿ ಸಂಜಯ್ ಕಪೂರ್ ಅವರನ್ನು ಮದುವೆಯಾಗಿದ್ದರು. ಆದರೆ ಆ ನಂತರ ಅನುದಿನ - ಅನುಕ್ಷಣ .. 07 ವರ್ಷ ಕಣ್ಣೀರಿನಲ್ಲಿಯೇ ಕೈ ತೊಳೆದರು. 2010ರಲ್ಲಿ ಇನ್ನು ಜೊತೆಯಲ್ಲಿ ಬದುಕಲು ಸಾಧ್ಯ ಇಲ್ಲ ಎಂದುಕೊಂಡು ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಮುಂಬೈಗೆ ಮರಳಿ ಬಂದರು. ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದರು. 2016ರಲ್ಲಿ ವಿಚ್ಛೇದನವನ್ನು ಕೂಡ ಪಡೆದರು.
ಆದರೆ ಈಗ ಸಂಜಯ್ ಕಪೂರ್ ಇಲ್ಲ. ಕಳೆದ ಜೂನ್‌ನಲ್ಲಿ ಸಂಜಯ್ ಕಪೂರ್ ಹಠಾತ್ ನಿಧನರಾದರು. ಉದ್ಯಮಿಯಾಗಿ ಗುರುತಿಸಿಕೊಂಡಿದ್ದ, ಹೆಸರು ಮಾಡಿದ್ದ ಸಂಜಯ್ ಕಪೂರ್ ''ಸೋನಾ ಕಾಮ್ಸ್ಟಾರ್'' ಕಂಪನಿಗೆ ಅಧ್ಯಕ್ಷರಾಗಿದ್ದರು. ₹30,000 ಕೋಟಿಯ ಸಾಮ್ರಾಜ್ಯವನ್ನು ಕೂಡ ಸ್ಥಾಪಿಸಿದ್ದರು.
ಇನ್ನೂ ಆಗಲೇ ಹೇಳಿದಂತೆ ಸಂಬಂಧಗಳು ಹಣದ ಎದುರು ಕೊಚ್ಚಿಕೊಂಡು ಹೋಗುವಂತಹ ಕಾಲ ಇದು. ದುರಾಸೆಯಿಂದ ಅನೇಕರು ಸಂಬಂಧಗಳನ್ನು ಕಡಿದುಕೊಳ್ಳುತ್ತಿದ್ದಾರೆ.ಇದಕ್ಕೆ ಕೈಗನ್ನಡಿ ಎಂಬಂತೆ ₹30,000 ಕೋಟಿ ಆಸ್ತಿಗಾಗಿ ಸಂಜಯ್ ಕಪೂರ್ ಮನೆಯಲ್ಲಿ ಸಮರವೇ ಶುರುವಾಗಿದೆ. ಮನೆಯವರ ನಡುವೆಯೇ ಕಾನೂನು ಯುದ್ಧ ಆರಂಭವಾಗಿದೆ.
ಹೌದು, ನಿಮಗೆ ಗೊತ್ತಿರಲಿ.. ಸಂಜಯ್ ಕಪೂರ್ ಅಗಲಿದ ನಂತರ ಸಂಜಯ್ ಕಪೂರ್ ಅವರ ತಾಯಿ ರಾಣಿ ಕಪೂರ್ ತಮ್ಮಿಂದ ಬಲವಂತವಾಗಿ ದಾಖಲೆಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಆಸ್ತಿ ಕಬಳಿಸಲು ಹಲವರು ಷಡ್ಯಂತ್ರ .. ಪಿತೂರಿ ಮಾಡುತ್ತಿದ್ಧಾರೆ ಎಂದು ಹೇಳಿದ್ದರು. ಆ ವ್ಯಕ್ತಿ ಬೇರೆ ಯಾರು ಅಲ್ಲ ಬದಲಿಗೆ ಸಂಜಯ್ ಕಪೂರ್ ಮೂರನೇ ಪತ್ನಿ ಮತ್ತು ತಮ್ಮ ಮನೆಯ ಸೊಸೆ ಪ್ರಿಯಾ ಸಚ್‌ದೇವ್ ಎನ್ನುವುದು ಇವರ ಆರೋಪದ ಮೂಲ ಸಾರವಾಗಿತ್ತು.

ಇದೀಗ ಇದೇ ಮಾತುಗಳನ್ನು ಸಂಜಯ್ ಕಪೂರ್ ಅವರ ಸಹೋದರಿ ಮಂದಿರಾ ಕೂಡ ಪುನರುಚ್ಚಿಸಿದ್ದಾರೆ. ನಮಗೆ ಸೇರಬೇಕಾದ ಆಸ್ತಿಯನ್ನು ಹೊರಗಿನವರು ಬಂದು ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಕುರಿತು ''InControversial Podcast'' ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮಂದಿರಾ ಕಪೂರ್, ₹30,000 ಕೋಟಿ ಒಡೆಯನ ತಾಯಿಯಾದರೂ ಕೂಡ ತಮ್ಮ ತಾಯಿಗೆ ತಿಂಗಳಿಗೆ ಎಷ್ಟು ಹಣ ಸಿಗುತ್ತಿದೆ ಎನ್ನುವುದನ್ನು ಹೇಳಿದ್ದಾರೆ. ತಮ್ಮ ಅತ್ತಿಗೆ ಅಂದರೆ ಸಂಜಯ್ ಕಪೂರ್ ಅವರ ಮೂರನೇ ಪತ್ನಿ ಪ್ರಿಯಾ ಸಚ್‌ದೇವ್ ವಿರುದ್ಧ ಕೆಂಡ ಕಾರಿದ್ದಾರೆ.
ಹೌದು, ಅಸಲಿಗೆ ದೆಹಲಿಯ ಹೈಕೋರ್ಟ್‌ನಲ್ಲಿ ಪ್ರಿಯಾ ಸಚ್‌ದೇವ್ ಮತ್ತು ಕರಿಷ್ಮಾ ಕಪೂರ್ ನಡುವೆ ಕಾನೂನು ಸಮರ ಶುರುವಾಗಿದೆ. ಹೀಗಾಗಿ ವಿಚಾರಣೆ ಸಮಯದಲ್ಲಿ ಪ್ರಿಯಾ ಸಚ್‌ದೇವ್ ತಮ್ಮ ಪತಿ ಸಂಜಯ್ ಕಪೂರ್ ಮರಣದ ನಂತರವೂ ಕೂಡ ಅವರ ಮಾಜಿ ಪತ್ನಿ ಕರಿಷ್ಮಾ ಕಪೂರ್ ಅವರ ಮಕ್ಕಳ ವಿದ್ಯಾಭ್ಯಾಸ ತಾವು ನೋಡಿಕೊಳ್ಳುತ್ತಿರುವುದಾಗಿ ಹೇಳಿದ್ದರು. ಪ್ರತಿ ಸೆಮಿಸ್ಟರ್‌ಗೆ 95ಲಕ್ಷ ಹಣವನ್ನು ಕಾಲೇಜ್‌ಗೆ ಪಾವತಿ ಮಾಡಿರುವ ಶುಲ್ಕದ ರಸೀದಿ ಕೂಡ ನೀಡಿದ್ದರು.
ಇದೇ ಸಮಯದಲ್ಲಿ ಸಂಜಯ್ ಕಪೂರ್ ಅವರ ತಾಯಿಗೆ ಪ್ರತಿ ತಿಂಗಳು ಅವರ ಖರ್ಚಿಗೆ 21 ಲಕ್ಷ ನೀಡಲಾಗುತ್ತಿದೆ ಎಂದಿದ್ದರು. ಪ್ರಿಯಾ ಸಚ್‌ದೇವ್ ಆಡಿದ ಈ ಮಾತುಗಳಿಗೆ ಸಂಜಯ್ ಕಪೂರ್ ಸಹೋದರಿ ಈಗ ಪ್ರತ್ಯುತ್ತರ ನೀಡಿದ್ದು ನನ್ನ ತಂದೆ ಮತ್ತು ನನ್ನ ಸಹೋದರ ಜೀವಂತ ಇದ್ದಾಗ ನನ್ನ ತಾಯಿ ತುಂಬಾ ಚೆನ್ನಾಗಿದ್ದರು. ಅವರಿಗೆ ಆಗ ತಿಂಗಳಿಗೆ 21 ಲಕ್ಷ ಹಣ ಸಿಗುತ್ತಿತ್ತು ಎಂದು ಹೇಳಿದ್ದಾರೆ. ನನ್ನ ಸಹೋದರ ತೀರಿಕೊಂಡ ನಂತರ ಈಗ 12 ಲಕ್ಷ ಹಣವನ್ನು ಮಾತ್ರ ನೀಡಲಾಗುತ್ತಿದೆ ಎಂದು ಹೇಳಿರುವ ಮಂದಿರಾ ರಕ್ತ ಸಂಬಂಧಿಕರು ಮತ್ತು ಹೊರಗಿನವರ ನಡುವೆ ತುಂಬಾನೇ ವ್ಯತ್ಯಾಸ ಇದೆ ಎಂದು ಹೇಳಿದ್ದಾರೆ.

ನಮ್ಮ ಕಂಪನಿಯ ಸಂಸ್ಥಾಪಕಿ ನಮ್ಮ ತಾಯಿ ಎಂದು ಹೇಳಿರುವ ಮಂದಿರಾ ನಮ್ಮ ತಾಯಿಗೆ ಕೇವಲ 12 ಲಕ್ಷ ಹಣ ನೀಡುತ್ತಿರುವ ಹೊರಗಡೆಯಿಂದ ಬಂದ ವ್ಯಕ್ತಿ (ಪ್ರಿಯಾ ಸಚ್‌ದೇವ್) ತಿಂಗಳಿಗೆ 5 ಕೋಟಿ ಹಣವನ್ನು ಪಡೆಯುತ್ತಿದ್ದಾಳೆ ಎಂದು ಹೇಳಿದ್ದಾರೆ.
ನಮ್ಮ ಆಸ್ತಿಯ ಮೇಲೆ, ನಮ್ಮ ಕಂಪನಿಯ ಮೇಲೆ ಅವಳು (ಪ್ರಿಯಾ ಸಚ್‌ದೇವ್) ನಿಯಂತ್ರಣ ಸಾಧಿಸಿದ್ದಾಳೆ ಎಂದು ಹೇಳಿರುವ ಮಂದಿರಾ ಕಪೂರ್ ಯಾರ ಮೇಲೂ ಅವಳು ಉಪಕಾರ ಮಾಡುತ್ತಿಲ್ಲ. ಯಾಕೆಂದರೆ ಆ ಹಣ ಬರುತ್ತಿರುವುದು ನಮ್ಮ ಕಂಪನಿಯಿಂದ ಎಂದು ಹೇಳಿದ್ದಾರೆ. ಅವಳು ನಮ್ಮ ತಾಯಿಯನ್ನು ನೋಡಿಕೊಳ್ಳುತ್ತಿದ್ದಾಳೆ, ನೋಡಿಕೊಳ್ಳುತ್ತಾಳೆ, ಎಂದು ನಿಮಗೆ ಅನ್ಸುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.
ಇಷ್ಟೇ ಅಲ್ಲ ಅವಳು ನಮ್ಮ ಕಂಪನಿಯ ಬ್ರ್ಯಾಂಡ್ ಅಲ್ಲ. ನ್ಯಾಯಯುತವಾಗಿ ಹೇಳಬೇಕೆಂದರೆ ಅವಳು ನಮ್ಮ ಕಂಪನಿಯ ಸುತ್ತ ಮುತ್ತ ಕೂಡ ಸುಳಿಯಬಾರದು ಎಂದು ಕಿಡಿ ಕಾರಿದ್ದಾರೆ.
ಸದ್ಯ ಈ 30,000 ಕೋಟಿಯ ಸಮರ ಕಾನೂನಿನ ಅಂಗಳದಲ್ಲಿದೆ. ಕರಿಷ್ಮಾ ಕಪೂರ್ ತಮ್ಮ ಮಕ್ಕಳ ಜೊತೆ ಈ ಸಮರದಲ್ಲಿ ಧುಮುಕಿದ್ದು ಸಂಜಯ್ ಕಪೂರ್ ಬರೆದಿದ್ದಾರೆ ಎನ್ನಲಾದ ವಿಲ್ ನಕಲಿ ಎಂಬ ವಾದವನ್ನು ಮಾಡಿದ್ದಾರೆ. ತಮ್ಮ ಸಹಿಯನ್ನು ಫೋರ್ಜರಿ ಮಾಡಲಾಗಿದೆ ಎಂಬ ಆರೋಪವನ್ನು ಕೂಡ ಕರಿಷ್ಮಾ ಕಪೂರ್ ಮತ್ತು ಅವರ ಮಕ್ಕಳು ಮಾಡಿದ್ದಾರೆ.
ಇಷ್ಟೇ ಅಲ್ಲ ಸಂಜಯ್ ಕಪೂರ್ ಅವರ ಉಯಿಲಿನ ಸತ್ಯಾಸತ್ಯತೆ ತಿಳಿಯಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಆ ಆಸ್ತಿ ಪತ್ರ ಕಳುಹಿಸಬೇಕೆಂದು ದೆಹಲಿ ಹೈಕೋರ್ಟ್‌ನಲ್ಲಿ ಕರಿಷ್ಮಾ ಮನವಿ ಮಾಡಿದ್ದಾರೆ. ಸಂಜಯ್ ಕಪೂರ್ ಅವರ ತಾಯಿ ರಾಣಿ ಕಪೂರ್ ಕೂಡ ವಿಲ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಸಂಜಯ್ ಕಪೂರ್ ಮೂರನೇ ಪತ್ನಿ ಪ್ರಿಯಾ ಸಚ್‌ದೇವ್ ಆಸ್ತಿ ಪತ್ರ ವಿಧಿ ವಿಜ್ಞಾನಕ್ಕೆ ಕಳುಹಿಸಬೇಕೆಂಬ ಕರಿಷ್ಮಾ ಕಪೂರ್ ಮನವಿಗೆ ಚಕಾರ ತೆಗೆದಿದ್ದು ಮುಂಬರುವ ದಿನಗಳಲ್ಲಿ ಈ 30,000ಕೋಟಿ ಸಾಮ್ರಾಜ್ಯದ ಕಥೆ ಏನಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ಮುಂಬರುವ ಜನವರಿಯಲ್ಲಿ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೆ ವಿಚಾರಣೆ ಆರಂಭವಾಗಲಿದೆ.


Click it and Unblock the Notifications











