ಚಿತ್ರನಿರ್ದೇಶಕನಿಗೆ ಐಶ್ವರ್ಯ ರೈ ಲೀಗಲ್ ನೋಟೀಸ್
ಎಲ್ಲಾ ವಿವಾದ ತಣ್ಣಗಾಯಿತು ಎಂದುಕೊಂಡಿದ್ದಾಗಲೆ ಅಸಲಿ ವಿವಾದಈಗ ಶುರುವಾದಂತಿದೆ. ಬಾಲಿವುಡ್ ತಾರೆ ಐಶ್ವರ್ಯ ರೈ ಚಿತ್ರನಿರ್ದೇಶಕರಿಗೆ ಲೀಗಲ್ ನೋಟೀಸ್ ಕಳುಹಿಸುವ ಮೂಲಕ 'ಹೀರೋಯಿನ್' ಚಿತ್ರದ ವಿವಾದ ಹೊಸ ತಿರುವು ಪಡೆದುಕೊಂಡಿದೆ.
'ಹೀರೋಯಿನ್' ಚಿತ್ರದ ಪ್ರಚಾರಕ್ಕಾಗಿ ತಮ್ಮ ಫೋಟೋಗಳನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ಚಿತ್ರದ ನಿರ್ದೇಶಕ ಮಧುರ್ ಭಂಡಾರಕರ್ ಅವರಿಗೆ ಐಶ್ವರ್ಯ ರೈ ಲೀಗಲ್ ನೋಟೀಸ್ ಜಾರಿ ಮಾಡಿದ್ದಾರೆ. ತಾವು ಗರ್ಭಿಣಿ ಎಂಬ ಸುದ್ದಿ ಗೊತ್ತಾಗುತ್ತಿದ್ದಂತೆ 'ಹೀರೋಯಿನ್' ಚಿತ್ರದಿಂದ ಐಶ್ವರ್ಯ ಹೊರಬಂದಿದ್ದರು.
ಅಷ್ಟರಲ್ಲಾಗಲೆ ಈ ಚಿತ್ರಕ್ಕಾಗಿ ಫೋಟೋ ಶೂಟ್ ಕೂಡ ನಡೆಸಲಾಗಿತ್ತು. ವಿಶೇಷ ಗೆಟಪ್‌ಗಳಲ್ಲಿ ಐಶ್ವರ್ಯ ರೈ ಫೋಟೋ ಶೂಟ್ ನಡೆಸಿದ್ದರು. ಈಗ ಈ ಫೋಟೋಗಳನ್ನು ಚಿತ್ರದ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಐಶ್ವರ್ಯ ಆರೋಪಿಸಿದ್ದಾರೆ. ವಕೀಲರ ಮೂಲಕ ಕಳುಹಿಸಿರುವ ಲೀಗಲ್ ನೋಟೀಸ್ ಲಕೋಟೆ ಚಿತ್ರದ ನಿರ್ದೇಶಕ ಮಧುರ್ ಭಂಡಾರಕರ್ ಕೈ ಸೇರಿದೆ.
ಫೋಟೋ ಶೂಟ್‌ನ ಚಿತ್ರಗಳನ್ನು ಯಾವುದೇ ಮಾಧ್ಯಮಕ್ಕೆ ಬಿಡುಗಡೆ ಮಾಡುವುದಾಗಲಿ ಅಥವಾ ಚಿತ್ರದ ಪ್ರಚಾರಕ್ಕೆ ಬಳಸಿಕೊಂಡರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಲೀಗಲ್ ನೋಟೀಸ್‌ನಲ್ಲಿ ಐಶ್ವರ್ಯ ನೀಡಿದ್ದಾರೆ. ಈ ಬಗ್ಗೆ ಚಿತ್ರ ನಿರ್ಮಾಣ ಸಂಸ್ಥೆ ಯುಟಿವಿ ಮೋಷನ್ ಪಿಕ್ಚರ್ಸ್ ಹಾಗೂ ಮಧುರ್ ಭಂಡಾರಕರ್ ಯಾವುದೇ ಪ್ರತಿಕ್ರಿಯಿಸಿಲ್ಲ. (ಏಜೆನ್ಸೀಸ್)


Click it and Unblock the Notifications











