ದಿ ಡರ್ಟಿ ಪಿಕ್ಚರ್ 'ರಿಲೀಸ್'ಗೆ ಮತ್ತೊಂದು ಕಿರಿಕ್
ಬಾಲಿವುಡ್ ನಲ್ಲಿ ಸದ್ಯದ ಸೆನ್ಸೇಶನ್ ಹಾಗೂ ಬಹುನಿರೀಕ್ಷಿತ ಚಿತ್ರ 'ದಿ ಡರ್ಟಿ ಪಿಕ್ಚರ್ಸ್' ಚಿತ್ರ ಇನ್ನೇನು ತೆರೆಕಾಣುವ ಕ್ಷಣ ಸನ್ನಿಹಿತವಾಗಿದೆ. ನಾಳೆ ಶುಕ್ರವಾರ (ಡಿ. 02) ಪ್ರಪಂಚದಾದ್ಯಂತ ಬಿಡುಗಡೆ ಕಾಣಲಿರುವ ಈ ಚಿತ್ರಕ್ಕೆ ಈಗಾಗಲೇ ಸಾಕಷ್ಟು ಕಿರಿಕಿರಿ ಕಾಡಿತ್ತು. ಇದೀಗ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಈ ಚಿತ್ರವನ್ನು ನಿಷೇಧಿಸಲಾಗಿದೆ.
ಮಾದಕ ನಟಿ ಸಿಲ್ಕ್ ಸ್ಮಿತಾ ನಿಜ ಜೀವನ ಆಧಾರಿತ ಈ ಚಿತ್ರ, ಬಾಲಿವುಡ್ ನಲ್ಲಿ ಸಾಕಷ್ಟು ಪ್ರಚಾರ ಮತ್ತು ನಿರೀಕ್ಷೆ ಪಡೆದಿದೆ. ಆದರೆ ಪಾಕಿಸ್ತಾನದ ಸೆನ್ಸಾರ್ ಮಂಡಳಿ "ಇಲ್ಲಿನ ಜೀವನ ಶೈಲಿಗೆ ಅದು ತಕ್ಕದಾಗಿಲ್ಲ. ಚಿತ್ರದಲ್ಲಿರುವ ಹಸಿ-ಬಿಸಿ ದೃಶ್ಯಗಳು ಹಾಗೂ ಕಥೆ. ಇಲ್ಲಿ ಪ್ರದರ್ಶನಕ್ಕೆ ಯೋಗ್ಯವಾಗಿಲ್ಲ" ಎಂದಿದೆ. ಅಲ್ಲಿ ಪ್ರದರ್ಶನವನ್ನು ಬ್ಯಾನ್ ಮಾಡಿರುವುದು ನಿರ್ಮಾಪಕರಿಗೆ ತಲೆನೋವು ತಂದಿದೆ.
ಚಿತ್ರದ ಗಳಿಕೆ ಮೇಲೂ ಬಹಳಷ್ಟು ಪರಿಣಾಮ ಬೀಳಲಿರುವುದರಿಂದ ಈಗ ಚಿತ್ರತಂಡದ ಪ್ರತಿಕ್ರಿಯೆ ಹಾಗೂ ನಡೆ ತೀವ್ರ ಕುತೂಹಲ ಕೆರಳಿಸಿದೆ. ಸಿಲ್ಕ್ ಸ್ಮಿತಾ ಪಾತ್ರವನ್ನು ನಟಿ ವಿದ್ಯಾ ಬಾಲನ್ ನಿರ್ವಹಿಸಿದ್ದು, ಪಾತ್ರದ ಅಗತ್ಯಕ್ಕೆ ತಕ್ಕಂತೆ ಸಾಕಷ್ಟು ಮಾದಕವಾಗಿ, ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ನೋಡಲು ಜನ ತುದಿಗಾಲಲ್ಲಿ ನಿಂತಿದ್ದಾರೆ. (ಏಜೆನ್ಸೀಸ್)


Click it and Unblock the Notifications











