38 ವರ್ಷಗಳ ಹಿಂದೆ ನಿಂತಿದ್ದ ರಜನಿಕಾಂತ್, ಹೇಮಾ ಮಾಲಿನಿ ನಟನೆಯ ಚಿತ್ರ ಬಿಡುಗಡೆಗೆ ಸಜ್ಜು
ಚಿತ್ರರಂಗದಲ್ಲಿ ಏನು ಬೇಕಾದರೂ ನಡೆಯುತ್ತದೆ. ದೊಡ್ಡ ದೊಡ್ಡ ಸಿನಿಮಾಗಳು ಶುರುವಾಗಿ ನಿಂತು ಬಿಡುತ್ತದೆ. ಅದೇ ರೀತಿ ನಿಂತುಹೋಗಿದ್ದ ಸಿನಿಮಾಗಳು ಅಚ್ಚರಿ ಎನ್ನುವಂತೆ ಪ್ರೇಕ್ಷಕರ ಮುಂದೆ ಬರುತ್ತದೆ. ಸದ್ಯ 38 ವರ್ಷಗಳ ಹಿಂದೆ ನಿಂತು ಹೋಗಿದ್ದ 'ಹಮ್ ಮೇ ಶಹೇನ್ ಶಾ ಕೌನ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ.
1989ರಲ್ಲಿ ರಜನಿಕಾಂತ್, ಶತ್ರುಘ್ನ ಸಿನ್ಹಾ, ಹೇಮಾ ಮಾಲಿನಿ ನಟನೆಯ 'ಹಮ್ ಮೇ ಶಹೇನ್ ಶಾ ಕೌನ್' ಸಿನಿಮಾ ನಿರ್ಮಾಣವಾಗಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ನಿಂತು ಹೋಗಿತ್ತು. ಈಗ ಬರುತ್ತೆ ಆಗ ಬರುತ್ತೆ ಎಂದು ಪ್ರೇಕ್ಷಕರು ಕಾದಿದ್ದರು. ಆದರೆ ಸಾಧ್ಯವಾಗಿರಲಿಲ್ಲ. ಹೆಚ್ಚು ಕಮ್ಮಿ 4 ದಶಕಗಳ ಬಳಿಕ ಆ ಸಿನಿಮಾ ಪೂರ್ಣಗೊಳಿಸಿ ಬಿಡುಗಡೆ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ. ಎಐ ತಂತ್ರಜ್ಞಾನ ಬಳಸಿ ಚಿತ್ರದ ಫೈನಲ್ ಕಾಪಿ ರೆಡಿ ಮಾಡುತ್ತಿದ್ದಾರೆ.

'ಹಮ್ ಮೇ ಶಹೇನ್ ಶಾ ಕೌನ್' ಚಿತ್ರಕ್ಕಾಗಿ ಕೆಲಸ ಮಾಡಿದವರಲ್ಲಿ ಕೆಲವರು ಈಗ ಜೀವಂತವಾಗಿ ಇಲ್ಲ. ಜನ ಮರೆತುಹೋಗಿದ್ದ ಚಿತ್ರಕ್ಕೆ ಜೀವ ಬರ್ತಿದೆ. ಹರ್ಮೇಶ್ ಮಲ್ಹೋತ್ರಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಅವರು 2005ರಲ್ಲಿ ನಿಧನರಾಗಿದ್ದರು. ಅನಿತಾ ರಾಜ್, ಪ್ರೇಮ್ ಚೋಪ್ರಾ, ಶರತ್ ಸಕ್ಸೇನಾ, ಶರದ್ ಸಕ್ಸೇನಾ, ದಿವಂಗತ ಅಮರೀಶ್ ಪುರಿ ಕೂಡ ಚಿತ್ರದಲ್ಲಿ ನಟಿಸಿದ್ದರು.
ಬಹುತೇಕ ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದ್ದ ಸಂದರ್ಭದಲ್ಲಿ ನಿರ್ಮಾಪಕ ರಾಜಾ ರಾಯ್ ಬ್ಯುಸಿನೆಸ್ ಸಂಬಂಧ ಲಂಡನ್‌ಗೆ ತೆರಳಿದ್ದರು. ಹಾಗಾಗಿ ಸಿನಿಮಾ ಪೂರ್ಣಗೊಳಿಸಿ ಬಿಡುಗಡೆ ಮಾಡುವುದು ತಡವಾಗಿತ್ತು. ಅದೇ ಸಮಯದಲ್ಲಿ ನಿರ್ಮಾಪಕರು ಅಲ್ಲಿ ತಮ್ಮ ಮಗನನ್ನು ಕಳೆದುಕೊಂಡರು. ಅದೇ ನೋವಿನಲ್ಲಿ ಸಿನಿಮಾ ಮುಂದುವರೆಸುವುದು ಮತ್ತಷ್ಟು ತಡವಾಗಿ ನಿಂತೇಹೋಗಿತ್ತು. ಇದೀಗ ಎಐ ಸಹಾಯದಿಂದ ಚಿತ್ರಕ್ಕೆ ಅಂತಿಮ ರೂಪ ಕೊಡಲಾಗುತ್ತಿದೆ. 4Kಯಲ್ಲಿ 5.1 ಸರೌಂಡ್ ಸೌಂಡ್ ಮಾಸ್ಟರಿಂಗ್ ಜೊತೆಗೆ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ.

'ಹಮ್ ಮೇ ಶಹೇನ್ ಶಾ ಕೌನ್' ಸಿನಿಮಾ ಬಗ್ಗೆ ನಾವು ಯಾವತ್ತು ಭರವಸೆ ಕಳೆದುಕೊಂಡಿಲ್ಲ. ಕಾರಣಾಂತರಗಳಿಂದ ಸಿನಿಮಾ ನಿಂತುಹೋಯಿತು ಎಂದು ನಿರ್ಮಾಪಕ ರಾಜಾ ರಾಯ್ ಹೇಳಿದ್ದಾರೆ. ಸದ್ಯ 'ಹಮ್ ಮೇ ಶಹೇನ್‌ಶಾ ಕೌನ್' ಚಿತ್ರವನ್ನು ರಾಜಾ ರಾಯ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ರೆಕ್ಸ್ ಮ್ಯೂಸಿಕ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ತೆರೆಗೆ ತರುತ್ತಿದೆ. ಹಳೇ ಸಿನಿಮಾಗಳನ್ನು ರೀ-ರಿಲೀಸ್ ಮಾಡುವ ಟ್ರೆಂಡ್ ನಡೀತಿದೆ. ಹೀಗೆ 4 ದಶಕಗಳ ಹಿಂದೆ ನಿಂತಿದ್ದ ಸಿನಿಮಾವನ್ನು ತೆರೆಗೆ ತರುವ ಸಾಹಸ ಮಾಡುತ್ತಿರುವುದು ವಿಶೇಷ.
ಲಾರೆನ್ಸ್ ಡಿಸೋಜಾ ಛಾಯಾಗ್ರಹಣ, ಲಕ್ಷ್ಮಿಕಾಂತ್ ಪ್ಯಾರೆಲಲ್ ಸಂಗೀತ, ಆನಂದ್ ಭಕ್ಷಿ ಸಾಹಿತ್ಯ, ಸರೋಜ್ ಖಾನ್ ಕೊರಿಯೋಗ್ರಫಿ, ಮನ್ಸೂರ್ ಸಾಹಸ ಸಂಯೋಜನೆ, ಸಲೀಂ-ಫೈಜ್ ಸಂಭಾಷಣೆ 'ಹಮ್ ಮೇ ಶಹೇನ್‌ಶಾ ಕೌನ್' ಚಿತ್ರಕ್ಕಿದೆ. ದಶಕಗಳ ಹಿಂದೆ ಬಾಲಿವುಡ್ ಅಂಗಳದಲ್ಲಿ ರಜನಿಕಾಂತ್ ಕ್ರೇಜ್ ಇತ್ತು. ಆಗ ಒಂದಷ್ಟು ಹಿಂದಿ ಸಿನಿಮಾಗಳಲ್ಲಿ ಸೂಪರ್ ಸ್ಟಾರ್ ನಟಿಸಿದ್ದರು. ಅದೇ ಸಮಯದಲ್ಲಿ ಈ ಚಿತ್ರಕ್ಕೂ ಬಣ್ಣ ಹಚ್ಚಿದ್ದರು.
ಸಹ ನಿರ್ಮಾಪಕರಾದ ಶಬಾನಾ ಮತ್ತು ಅಸ್ಲಂ ಮಿರ್ಜಾ ಈ ಚಿತ್ರವನ್ನು ತೆರೆಗೆ ತರಲು ಬಹಳ ಶ್ರಮಿಸಿದ್ದಾರೆ. 5 ವರ್ಷಗಳಿಂದ ಈ ಚಿತ್ರಕ್ಕಾಗಿ ತಂತ್ರಜ್ಞರ ತಂಡ ಕೆಲಸ ಮಾಡಿದೆ. ಕಥೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಹಳೆಯ ಆತ್ಮಕ್ಕೆ ಹೊಸ ತಂತ್ರಜ್ಞಾನದಿಂದ ಹೊಸ ರೂಪ ಕೊಡುವ ಪ್ರಯತ್ನ ನಡೆದಿದೆ. ಶೀಘ್ರದಲ್ಲೇ 'ಹಮ್ ಮೇ ಶಹೇನ್‌ಶಾ ಕೌನ್' ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











