Dhurandhar 2 Trailer ; ಧುರಂಧರ್ 2 ನೋಡಬೇಕಂದ್ರೆ ಚಿತ್ರಮಂದಿರದಲ್ಲಿ ನೀವು 4 ಗಂಟೆ ಕೂರಬೇಕು ; ಮಾರ್ಚ್ 3ಕ್ಕೆ ಟ್ರೇಲರ್
ಕಾಲ ಬದಲಾಗಿದೆ. ಬದಲಾದ ಕಾಲದಲ್ಲಿ ಹಿಂದೆ ಚಿತ್ರಮಂದಿರದಲ್ಲಿ ಗಂಟೆ ಗಟ್ಟಲೆ ಕುಳಿತು ಚಿತ್ರ ನೋಡುತ್ತಿದ್ದ ಪ್ರೇಕ್ಷಕ ಇಂದು 30 ಸೆಕೆಂಡ್ ರೀಲ್ಸ್ ನೋಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾನೆ. ಎರಡು ಗಂಟೆಯ ಮೇಲೆ ಇಂದು ಪ್ರೇಕ್ಷಕ ಚಿತ್ರಮಂದಿರದಲ್ಲಿ ಕೂರಲಾರ. ಚಿತ್ರರಂಗಕ್ಕೂ ಕೂಡ ಈ ವಿಚಾರ ಗೊತ್ತು.
ಹೀಗಾಗಿಯೇ ಹಲವು ನಿರ್ದೇಶಕರು ತಮ್ಮ ಕಥೆಯನ್ನು ಎರಡು ಅಬ್ಬಬ್ಬಾ ಅಂದರೆ ಎರಡೂವರೆ ಗಂಟೆಯೊಳಗೆ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರೇಕ್ಷಕರಿಗೆ ಬೋರ್ ಆಗಬಾರದು, ಕೆಲಸದ ಒತ್ತಡದಿಂದ ಅರ್ಧಕ್ಕೆ ಎದ್ದು ಹೋಗಬಾರದು ಎಂದು ಒಲ್ಲದ ಮನಸ್ಸಿಂದ ಎಡಿಟಿಂಗ್ ಟೇಬಲ್ ಮೇಲೆ ಹಲವು ದೃಶ್ಯಗಳಿಗೆ ಕತ್ತರಿ ಹಾಕಿ ಬಿಸಾಕುತ್ತಿದ್ದಾರೆ.

ಹಾಗಂಥ ಎಲ್ಲರೂ ಈ ಸಾಲಿಗೆ ಸೇರುವುದಿಲ್ಲ. ಈ 'ಶಾರ್ಟ್ ಅಂಡ್ ಸ್ವೀಟ್' ಟ್ರೆಂಡ್ ನಡುವೆ ಅಲ್ಲೊಬ್ಬರು ಇಲ್ಲೊಬ್ಬರು ಇವತ್ತು ಕೂಡ ಸುದೀರ್ಘ ಸಿನಿಮಾ ಥಿಯರಿಯನ್ನೇ ನೆಚ್ಚಿಕೊಂಡಿದ್ದಾರೆ. ಕಥೆಯಲ್ಲಿ ಧಮ್ ಇದ್ದರೆ ಚಿತ್ರದ ಅವಧಿ ಎಷ್ಟೇ ಇದ್ದರೂ ಕೂಡ ಪ್ರೇಕ್ಷಕರು ತಾಳ್ಮೆ ಕಳೆದುಕೊಳ್ಳದೇ ಚಿತ್ರ ನೋಡುತ್ತಾರೆ ಎಂಬ ವಾದವನ್ನು ಇವರು ಮಾಡುತ್ತಾರೆ.
ಉದಾಹರಣೆಗೆ ''ಅನಿಮಲ್'' ಚಿತ್ರದ ಕಥೆ ಹೇಳಲು ಸಂದೀಪ್ ರೆಡ್ಡಿ ವಂಗಾ 3 ಗಂಟೆ 21 ನಿಮಿಷ ತೆಗೆದುಕೊಂಡಿದ್ದರು. ಈ ವರ್ಷದ ಆರಂಭದಲ್ಲಿ ಬಂದ ''ಬಾರ್ಡರ್ 2'' ಚಿತ್ರ 3 ಗಂಟೆ 19 ನಿಮಿಷ ಸುದೀರ್ಘವಾಗಿತ್ತು. ಇನ್ನು ಕಳೆದ ವರ್ಷಾಂತ್ಯಕ್ಕೆ ಬಂದು ಇರೋ ಬರೋ ದಾಖಲೆಗಳನ್ನೆಲ್ಲ ಛಿದ್ರ ಛಿದ್ರ ಮಾಡಿದ್ದ ''ಧುರಂಧರ್'' ಚಿತ್ರದ ರನ್ ಟೈಮ್ ಸುಮಾರು 3 ಗಂಟೆ 34 ನಿಮಿಷ ಇತ್ತು. ಇದೀಗ ತಮ್ಮ ಈ ದಾಖಲೆಯನ್ನು ಆದಿತ್ಯ ಧರ್ ''ಧುರಂಧರ್ 2'' ಮೂಲಕ ಮುರಿಯಲು ಅಣಿಯಾಗಿದ್ದಾರೆ ಎನ್ನುವ ಸುದ್ದಿ ಸದ್ಯ ಮುಂಬೈನಲ್ಲಿ ಕೇಳಿ ಬರುತ್ತಿದೆ.
ಹೌದು, ಈ ಹಿಂದೆ ''ಧುರಂಧರ್-2'' ಚಿತ್ರದ ರನ್ ಟೈಮ್ 3 ಗಂಟೆ 40 ನಿಮಿಷ ಎಂದು ಹೇಳಲಾಗಿತ್ತು. ಅದಕ್ಕೂ ಮೊದಲು ''ಧುರಂಧರ್'' ಚಿತ್ರಕ್ಕಿಂತ ''ಧುರಂಧರ್ 2'' ಚಿತ್ರದ ಅವಧಿ ಕಡಿಮೆ ಇರಲಿದೆ ಂಬ ಮಾತು ಕೇಳಿ ಬಂದಿತ್ತು. ಆದರೆ. ಈಗ ರನ್ ಟೈಮ್ ಕುರಿತು ''ಬಾಲಿವುಡ್ ಹಂಗಾಮ'' ವರದಿ ಮಾಡಿದ್ದು,ಆ ಪ್ರಕಾರ ''ಧುರಂಧರ್ : ದಿ ರಿವೆಂಜ್'' ಸುಮಾರು 235 ನಿಮಿಷ ಇದೆ. ಅಂದರೆ ಹಮ್ಜಾ ಅಲಿ ಮಜಾರಿಯ ಕಥೆ ಕಣ್ತುಂಬಿಕೊಳ್ಳಬೇಕು ಅಂದರೆ ನೀವು ಚಿತ್ರಮಂದಿರದಲ್ಲಿ 3 ಗಂಟೆ 55 ನಿಮಿಷ ಕೂರಬೇಕು.
ಒಂದು ವೇಳೆ ಇದು ನಿಜಾ ಆಗಿದ್ದೇ ಆದಲ್ಲಿ,ದಶಕಗಳ ನಂತರ ಬಾಲಿವುಡ್ ಇತಿಹಾಸದಲ್ಲಿ ''ಧುರಂಧರ್ 2'' ದಾಖಲೆ ಬರೆದಂತಾಗಲಿದೆ. ಅತ್ಯಂತ ದೀರ್ಘಾವಧಿಯ ಚಿತ್ರಗಳ ಸಾಲಿನಲ್ಲಿ ''ಧುರಂಧರ್ 2'' ಸೇರಿಕೊಳ್ಳಲಿದೆ. ಕಳೆದ 25 ವರ್ಷಗಳಲ್ಲಿ ಬಿಡುಗಡೆಯಾದ ಎರಡನೇ ಅತಿ ಉದ್ದದ ಚಿತ್ರ ಎನ್ನುವ ಹೆಗ್ಗಳಿಕೆಗೆ ಕೂಡ ಈ ಚಿತ್ರ ಪಾತ್ರವಾಗಲಿದೆ. ಈ ಹಿಂದೆ 2003ರಲ್ಲಿ ತೆರೆಗೆ ಬಂದಿದ್ದ ಜೆಪಿ ದತ್ತಾ ನಿರ್ದೇಶನದ ''ಎಲ್‌ಒಸಿ ಕಾರ್ಗಿಲ್'' 4 ಗಂಟೆ 7 ನಿಮಿಷ ಇತ್ತು. ಇದಕ್ಕೂ ಹಿಂದೆ 2001ರಲ್ಲಿ ಬಂದ ಆಮಿರ್ ಖಾನ್ ನಿರ್ಮಾಣ ಮಾಡಿ ಅಭಿನಯಿಸಿದ್ದ ''ಲಗಾನ್'' 3 ಗಂಟೆ 44 ನಿಮಿಷ ಇತ್ತು. ಈ ಸಾಲಿಗೆ ''ಧುರಂಧರ್ 2'' ಸೇರಿಕೊಂಡಂತೆ ಆಗಲಿದೆ.

ಅಂದ್ಹಾಗೇ ''ಧುರಂಧರ್ 2'' ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಆದರೆ, ಹಳೆಯ ಟೀಸರ್ ಹೊರತು ಪಡಿಸಿದರೆ ಬೇರೆ ಯಾವುದೇ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿಲ್ಲ. ಟ್ರೇಲರ್ ಯಾವಾಗ ಎನ್ನುವುದಕ್ಕೆ ಕೂಡ ಉತ್ತರ ನೀಡಿಲ್ಲ. ಆದರೆ, ಸದ್ಯ ಹಿಂದಿ ಉದ್ಯಮದಲ್ಲಿ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ ಮಾರ್ಚ್ 3ಂದು ಹೋಳಿ ಹಬ್ಬದ ಸಂಭ್ರಮದ ಪ್ರಯುಕ್ತ '' ಧುರಂಧರ್ 2'' ಟ್ರೇಲರ್ ನ ಬಿಡುಗಡೆ ಮಾಡುವ ಯೋಚನೆ ಆದಿತ್ಯ ಧರ್ ಮಾಡಿದ್ದಾರೆ. ಮಾರ್ಚ್ 19ರಂದು ''ಟಾಕ್ಸಿಕ್'' ಕೂಡ ಬಿಡುಗಡೆಯಾಗುತ್ತಿರುವ ಹಿನ್ನೆಲೆ ಪೈಪೋಟಿ ಹೆಚ್ಚಿದ್ದು ''ಧುರಂಧರ್ 2'' ಟ್ರೇಲರ್ ಗಾಗಿ ಹಲವರು ಜಾತಕ ಪಕ್ಷಿಯಂತೆ ಸದ್ಯ ಕಾಯುತ್ತಿದ್ದಾರೆ.


Click it and Unblock the Notifications











