15 ವರ್ಷದ ದಾಂಪತ್ಯ ಅಂತ್ಯ ; ಗಂಡನಿಂದ ₹50,00,00,000 ಕೋಟಿ ಪರಿಹಾರ ಕೇಳಿದ ಉಪೇಂದ್ರ ರೀಲ್ 'ಶ್ರೀಮತಿ' ..!
ಜನಸಾಮಾನ್ಯರ ದೃಷ್ಟಿಯಲ್ಲಿ ಚಿತ್ರರಂಗ ಅಂದ ಕೂಡಲೇ ಕಣ್ತುಂಬ ಬಣ್ಣ ತುಂಬಿಕೊಳ್ಳುತ್ತವೆ. ಆದರೆ, ವಾಸ್ತವದಲ್ಲಿ.. ಬಣ್ಣದ ಬದುಕಿನಲ್ಲಿ ಬದುಕು ಕಟ್ಟಿಕೊಂಡವರಿಗೆ ಕೂಡ ಕಷ್ಟ ಇರುತ್ತೆ. ಅವರದ್ದೇ ಆದ ದು:ಖ ಸಂಕಟಗಳಿರುತ್ತವೆ. ವ್ಯೆಯಕ್ತಿಕ ಜೀವನದಲ್ಲಿ ಎಷ್ಟೇ ಪ್ರಯತ್ನ ಮಾಡಿದರು ಕೂಡ ಇವರಿಗೆ ನೆಮ್ಮದಿ ಸಿಗುವುದಿಲ್ಲ. ಹಲವು ರೀತಿಯಲ್ಲಿ ಹಲವರು ಇಲ್ಲಿ ಒಳಗೊಳಗೆ ನೋವು ಅನುಭವಿಸುತ್ತಿರುತ್ತಾರೆ. ಮತ್ತೂ ಕೆಲವರು ಖಿನ್ನತೆಗೆ ಒಳಗಾಗುತ್ತಾರೆ.
ಇನ್ನೂ ಪ್ರೀತಿ ಎಂಬ ಪದ ಸುಂದರ ಇರಬಹುದು. ಆದರೆ ಹಣ, ಅಂತಸ್ತು, ಕೀರ್ತಿ, ಎಲ್ಲವೂ ಇರುವ ಕೆಲ ಸೆಲೆಬ್ರೆಟಿಗಳ ಬದುಕಿನಲ್ಲಿ ಒಮ್ಮೊಮ್ಮೆ ಪ್ರೀತಿ ಮರಿಚೀಕೆಯಾಗಿರುತ್ತೆ. ಯಾರನ್ನು ಇವರು ಹೆಚ್ಚು ಪ್ರೀತಿಸುತ್ತಾರೋ? ಅತಿಯಾಗಿ ಮೋಹಿಸುತ್ತಾರೋ? ಇನ್ನಿಲ್ಲದಂತೆ ಇಷ್ಟಪಡುತ್ತಾರೋ ? ಅವರೇ ಕಾಡಿಸಿ ಪೀಡಿಸಿ ನಿರಾಸೆಯನ್ನುಂಟು ಮಾಡುತ್ತಾರೆ.

ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದ ಕೆಲ ವರ್ಷಗಳಲ್ಲಿ ಹಲವಾರು ತಾರೆಯರ ದಾಂಪತ್ಯ ಜೀವನ ಮುರಿದು ಬಿದ್ದಿದೆ. ಪರಸ್ಪರ ಪ್ರೀತಿ ವಿಶ್ವಾಸ.. ಗೌರವ.. ನಂಬಿಕೆ..ಬದ್ಧತೆಯ ಬದಲು ಸಾಂಸಾರಿಕ ಜೀವನದಲ್ಲಿ ಅನೈತಿಕ ಸಂಬಂಧ .. ಕೌಂಟಬಿಕ ಕಲಹ .. ವೈಮನಸ್ಸು .. ಸಂಶಯ .. ಮಾನಸಿಕ-ದೈಹಿಕ ಕಿರುಕುಳ.. ಇತ್ಯಾದಿ ವಿಚಾರಗಳು ಮನೆ ಮಾಡಿ ಮನಸುಗಳು ಒಡೆದು ಹೋಗಿವೆ. ಇದಕ್ಕೆ ಸೆಲಿನಾ ಜೇಟ್ಲಿ ಸದ್ಯದ ಉದಾಹರಣೆ.
ಹೌದು, ಸೆಲಿನಾ ಜೇಟ್ಲಿ.. 2001ರ ಮಿಸ್ ಇಂಡಿಯಾ. ಅದೇ ವರ್ಷ ನಡೆದ ಮಿಸ್ ಯುನಿವರ್ಸ್‌ನ 4ನೇ ರನ್ನರ್ ಅಪ್. 2003ರಲ್ಲಿ ''ಜಾನಶೀನ್'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಚೆಲುವೆ. ಈ ಚಿತ್ರದಲ್ಲಿ ಇವರ ದೇಹಸಿರಿಯನ್ನು ಬಿಕಿನಿಯಲ್ಲಿ ಕಂಡು ಹಲವಾರು ಪಡ್ಡೆಹುಡುಗರು ಆ ಕಾಲದಲ್ಲಿ ಎದೆ ಹಿಡಿದುಕೊಂಡಿದ್ದರು.
''ಸಿಲ್‌ಸಿಲೇ''.. ''ನೋ ಎಂಟ್ರಿ''.. ''ಜವಾನಿ ದಿವಾನಿ''.. ''ಅಪ್ನಾ ಸಪ್ನಾ ಮನಿ ಮನಿ''.. ''ಮನಿ ಹೈ ತೋ ಹನಿ ಹೈ''.. ''ಗೋಲ್‌ಮಾಲ್ ರಿಟರ್ನ್ಸ್''.. ''ಹಲೋ ಡಾರ್ಲಿಂಗ್''.. ಹೀಗೆ ಒಂದಾದ ಮೇಲೊಂದು ಸಿನಿಮಾ ಮಾಡಿದ ಸೆಲಿನಾ 2011ರಲ್ಲಿ ಕನ್ನಡ ಚಿತ್ರರಂಗಕ್ಕೆ ಬಂದಿದ್ದರು. ಉಪೇಂದ್ರ ಮತ್ತು ಪ್ರಿಯಾಂಕ ಉಪೇಂದ್ರ ಅಭಿನಯದ ''ಶ್ರೀಮತಿ'' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಇಂಥಾ ಸೆಲಿನಾ 2011ರಲ್ಲಿ ಆಸ್ಟ್ರಿಯಾ ಮೂಲದ ಉದ್ಯಮಿ ಪೀಟರ್ ಹಾಗ್ ಅವರನ್ನು ಮದುವೆಯಾಗಿದ್ದರು. 2012ರಲ್ಲಿ ಅವಳಿ ಮಕ್ಕಳಿಗೆ ಜನ್ಮವನ್ನು ನೀಡಿದರು. ಆ ನಂತರ 2017ರಲ್ಲಿ ಇನ್ನೊಮ್ಮೆ ಸೆಲಿನಾ ಗರ್ಭಿಣಿಯಾದರು. ಮತ್ತೊಮ್ಮೆ ಅವಳಿ ಮಕ್ಕಳಿಗೆ ಜನ್ಮ ನೀಡಿದರು.

ಆದರೆ.. ಈ ವೇಳೆ ಒಂದು ಮಗು ಹೃದಯದ ಖಾಯಿಲೆಯಿಂದ ಕೆಲ ದಿನಗಳಲ್ಲಿ ಸಾವು ಕಂಡಿತ್ತು. ಇಲ್ಲಿಯವರೆಗೆ ಸುಖವಾಗಿದ್ದ ಇವರ ದಾಂಪತ್ಯ ಕೂಡ ಇದೇ ಸಮಯದಲ್ಲಿ ಹಳಿ ತಪ್ಪಿತ್ತು. ಸದ್ಯ ಸೆಲಿನಾ ಜೆಟ್ಲಿ ತಮ್ಮ ಗಂಡ ಪೀಟರ್ ಹಾಗ್ ಅವರಿಂದ ದೂರವಾಗುವ ಪ್ರಯತ್ನ ಮಾಡುತ್ತಿದ್ದಾರೆ. ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ. ಇಷ್ಟೇ ಅಲ್ಲ ತಮ್ಮ ಪತಿಯ ವಿರುದ್ಧ ಮುಂಬೈನ ಅಂಧೇರಿಯ ನ್ಯಾಯಾಲಯದಲ್ಲಿ ಕೌಟುಂಬಿಕ ಹಿಂಸಾಚಾರ ದೂರು ದಾಖಲಿಸಿದ್ದಾರೆ.
ವ್ಯವಸ್ಥಿತವಾಗಿ ನನ್ನ ಬದುಕನ್ನೇ ನನ್ನ ಪತಿ ಸರ್ವನಾಶ ಮಾಡಿದ್ದಾರೆ ಎಂದು ಆರೋಪ ಮಾಡಿರುವ ಸೆಲಿನಾ ಜೇಟ್ಲಿ, ಮದುವೆಯಾದ ನಂತರ ಚಿತ್ರಗಳಲ್ಲಿ ಅಭಿನಯಿಸದಂತೆ ನನ್ನನ್ನು ತಡೆ ಹಿಡಿದರು ಎಂದು ಹೇಳಿದ್ದಾರೆ. ನನ್ನ ಪತಿ ಕೋಪಿಷ್ಠ ಸ್ವಭಾವದ ವ್ಯಕ್ತಿ ಅಲ್ಲದೇ ಕುಡುಕ ಎಂದು ಹೇಳಿರುವ ಸೆಲಿನಾ ಜೇಟ್ಲಿ ಹೆಂಡತಿ ಮೇಲಾಗಲಿ ಮೂವರು ಮಕ್ಕಳ ಮೇಲಾಗಲಿ ಯಾವ ಪ್ರೀತಿ ಅಥವಾ ಅನುಕಂಪ ನನ್ನ ಗಂಡನಿಗೆ ಇಲ್ಲ ಎಂದು ಹೇಳಿದ್ದಾರೆ.
ಮುಂದುವರೆದು ನನ್ನ ನಾಲ್ಕನೇ ಮಗು ಸಾವನ್ನಪ್ಪಿದ್ದ ನಂತರ ನನ್ನ ಪೋಷಕರನ್ನು ಕೂಡ ಕಳೆದುಕೊಂಡು ನಾನು ಮಾನಸಿಕ ಖಿನ್ನತೆಗೆ ಒಳಗಾಗಿದ್ದೇ ಈ ಸಮಯದಲ್ಲಿ ನನ್ನ ಭಾವನಾತ್ಮಕ ದೌರ್ಬಲ್ಯಗಳನ್ನು ಉಪಯೋಗ ಮಾಡಿಕೊಂಡ ನನ್ನ ಗಂಡ ಮುಂಬೈನಲ್ಲಿನ ನನ್ನ ನಿವಾಸವನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಸೆಲಿನಾ ಆರೋಪ ಮಾಡಿದ್ದಾರೆ.
ಮಾನಸಿಕ- ದೈಹಿಕ ಹಲ್ಲೆ. ಮತ್ತು ಜನಾಂಗೀಯ ನಿಂದನೆಯಿಂದ ಬೇಸತ್ತು ನನ್ನ ಮೂವರು ಮಕ್ಕಳನ್ನು ಅಲ್ಲಿಯೇ ಬಿಟ್ಟು ಆಸ್ಟ್ರಿಯಾದ ಮನೆಯಿಂದ ನಾನು ಭಾರತಕ್ಕೆ ಓಡಿ ಬರಬೇಕಾಯ್ತು ಎಂದು ಹೇಳಿರುವ ಸೆಲಿನಾ ನನ್ನ ಮೂವರು ಮಕ್ಕಳು ಸದ್ಯ ಪೀಟರ್ ವಶದಲ್ಲಿದ್ದಾರೆ. ನನ್ನ ಮೂವರು ಮಕ್ಕಳ ಜೊತೆ ಮಾತನಾಡಲು ನನಗೆ ಅವಕಾಶ ನೀಡುತ್ತಿಲ್ಲ ಎಂದು ಹೇಳಿದ್ದಾರೆ.
ನನಗೆ ಆದ ಆರ್ಥಿಕ ನಷ್ಟ ಮತ್ತು ಮಾನಸಿಕ-ದೈಹಿಕ ಕಿರುಕುಳವನ್ನು ಗಮನದಲ್ಲಿಟ್ಕೊಂಡು ನನಗೆ 50 ಕೋಟಿ ಪರಿಹಾರವನ್ನು ಕೊಡಿಸಬೇಕು ಎಂದು ಕೂಡ ಮನವಿಯನ್ನು ಮಾಡಿರುವ ಸೆಲಿನಾ ಜೇಟ್ಲಿ ನನ್ನ ಜೀವನೋಪಾಯಕ್ಕೆ ಪ್ರತಿ ತಿಂಗಳು 10 ಲಕ್ಷ ರೂಪಾಯಿಯನ್ನು ಕೂಡ ಕೊಡಿಸಬೇಕೆಂದು ನ್ಯಾಯಾಲಯದಲ್ಲಿ ಬೇಡಿಕೆ ಇಟ್ಟಿದ್ದಾರೆ.
ಸದ್ಯ ಸೆಲಿನಾ ಜೇಟ್ಲಿ ದಾಖಲಿಸಿದ ದೂರಿನ ಅನ್ವಯ ಪೀಟರ್ ಹಾಗ್‌ಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದ್ದು ಡಿಸೆಂಬರ್ 12ಕ್ಕೆ ವಿಚಾರಣೆಯನ್ನು ಮುಂದೂಡಿದೆ.


Click it and Unblock the Notifications











