ಮೊದಲ ಪತ್ನಿ ವಿರುದ್ಧ ಕಾನೂನು ಸಮರ ಸಾರಿದ ಮೆಲೋಡಿ ಕಿಂಗ್, 50 ಕೋಟಿ ಪರಿಹಾರ ಕೇಳಿದ ಕುಮಾರ್ ಸಾನು
ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಹಿಂದೊಮ್ಮೆ ಪವಿತ್ರ ಬಂಧ ಎಂದು ಪರಿಗಣಿಸಲಾಗುತ್ತಿದ್ದ ಮದುವೆಯ ಸಂಬಂಧ ಅರ್ಥ ಕಳೆದುಕೊಂಡಿದೆ. ಇನ್ನೂ ಹಿಂದೆ ಡಿವೋರ್ಸ್ ಸಮಾಜದ ದೃಷ್ಟಿಯಲ್ಲಿ ಸಾಮಾಜಿಕ ಕಳಂಕವಾಗಿತ್ತು. ಆದರೆ ಈಗ ಚಿಕ್ಕ ಚಿಕ್ಕ ವಿಚಾರಕ್ಕೆ ದಾಂಪತ್ಯ ಜೀವನ ಮುಕ್ತಾಯವಾಗುತ್ತಿದೆ. ನೆಮ್ಮದಿ ಮತ್ತು ಸ್ವಾತಂತ್ರ್ಯ ಅರಸಿಕೊಂಡು ಹಲವರು ದೂರವೇನೋ ಆಗುತ್ತಿದ್ದಾರೆ. ಆದರೆ.. ಡಿವೋರ್ಸ್ ಪೇಪರ್ ಮೇಲೆ ಸಹಿ...
ಹಾಕಿದ ಮಾತ್ರಕ್ಕೆ ಸಂಬಂಧದಲ್ಲಿನ ಸಂಘರ್ಷ ಈಗ ಮುಕ್ತಾಯವಾಗುತ್ತಿಲ್ಲ. ಬದಲಿಗೆ ಸಂಬಂಧ ಮುರಿದು ಬಿದ್ದ ನಂತರ ಮಾಜಿಯಾದ ಸತಿ ಪತಿಯ ನಡುವೆ ಸಂಘರ್ಷ ಇನ್ನೂ ಹೆಚ್ಚಾಗುತ್ತಿದೆ. ಮನದಲ್ಲಿದ್ದ ಕಹಿ ಸತ್ಯವನ್ನೆಲ್ಲ ಹೊರ ಹಾಕುವ ಮೂಲಕ ಹಲವರು ನಾಲ್ಕು ಗೋಡೆಗಳ ನಡುವೆ ಇದ್ದ ವಿಚಾರವನ್ನು ಜಗಜ್ಜಾಹೀರು ಮಾಡುತ್ತಿದ್ದಾರೆ.

ಕಾನೂನಾತ್ಮಕವಾಗಿ ದೂರವಾದ ನಂತರವೂ ಕೂಡ ಇವರ ಮನದ ಗಾಯಗಳು ಮರೆಯಾಗುತ್ತಿಲ್ಲ. ಪರಸ್ಪರ ಆರೋಪ-ಪ್ರತ್ಯಾರೋಪ- ಚಾರಿತ್ರ್ಯ ಹರಣ ಈಗ ಸರ್ವೇ ಸಾಮಾನ್ಯವಾಗುತ್ತಿದೆ. ಒಂದು ಕಾಲದಲ್ಲಿ ಪ್ರೀತಿಸಿದ್ದ ವ್ಯಕ್ತಿಯ ವಿರುದ್ಧವೇ ಸೇಡು ತೀರಿಸಿಕೊಳ್ಳಲು ಹಲವರು ಮುಂದಾಗುತ್ತಿದ್ದಾರೆ. ಉದಾಹರಣೆಗೆ ಕುಮಾರ್ ಸಾನು ಮತ್ತು ಅವರ ಮಾಜಿ ಪತ್ನಿ ರೀಟಾ ಭಟ್ಟಾಚಾರ್ಯ ಅವರನ್ನೇ ತೆಗೆದುಕೊಳ್ಳಿ.
ಹೌದು. ಕುಮಾರ್ ಸಾನು.. ಅಂದಕಾಲತ್ತಿಲ್‌ನ ಜಗದ್ವಿಖ್ಯಾತ ಗಾಯಕ. 90ರ ದಶಕದಲ್ಲಿ ಇವರ ಕಂಠ ಕುಣಿಯುತ್ತಿದ್ದರೆ ಹಲವರ ಮನದಲ್ಲಿ ಪ್ರೀತಿ ಚಿಗುರೊಡೆಯುತ್ತಿತ್ತು. ಪ್ರೀತಿಯಲ್ಲಿ ಬೀಳಲು ಹಲವರ ಮನ ಹಾತೊರೆಯುತ್ತಿತ್ತು. ''ಮೆಲೋಡಿ ಕಿಂಗ್'' ಎಂಬ ಬಿರುದು ಇವರಿಗೆ ಹಾಗೇ ಬಂದಿದ್ದಲ್ಲ.
ಇಂಥಾ ಕುಮಾರ್ ಸಾನು ತಮ್ಮ ಮೊದಲ ಪತ್ನಿ ರೀಟಾ ಭಟ್ಟಾಚಾರ್ಯ ಅವರ ವಿರುದ್ಧ ಕಾನೂನು ಸಮರ ಸಾರಿದ್ದಾರೆ. ಮಾನನಷ್ಟ ಮೊಕದ್ದಮೆ ಹೂಡಿ 50 ಕೋಟಿ ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಹೌದು, ನಿಮಗೆ ಗೊತ್ತಿರಲಿ.. ಕುಮಾರ್ ಸಾನು ಮತ್ತು ರೀಟಾ ಭಟ್ಟಾಚಾರ್ಯ ಅವರದ್ದು ಅರೆಂಜ್ ಮ್ಯಾರೇಜ್ ಅಲ್ಲ ಬದಲಿಗೆ ಲವ್ ಮ್ಯಾರೇಜ್. ಕೋಲ್ಕತ್ತಾದಲ್ಲಿ ಪರಿಚಯವಾದ ಇಬ್ಬರು ಆ ನಂತರ ಪ್ರೀತಿಯಲ್ಲಿ ಬಿದ್ದರು. 1986ರಲ್ಲಿ ಮನೆಯವರ ವಿರೋಧದ ನಡುವೆ ಮದುವೆ ಕೂಡ ಆದರು. 1990ರಲ್ಲಿ ಕುಮಾರ್ ಸಾನು ಅದೃಷ್ಟ ಖುಲಾಯಿಸಿತು. ಇಲ್ಲಿಂದ ಸಂಬಂಧದಲ್ಲಿ ಬಿರುಕು ಮೂಡಲು ಶುರುವಾಯ್ತು. ಹೀಗಾಗಿ 1994ರಲ್ಲಿ ಕುಮಾರ್ ಸಾನು ಅವರಿಂದ ರೀಟಾ ವಿಚ್ಛೇದನ ಪಡೆದರು. ಇವರಿಬ್ಬರ ಪ್ರೀತಿಯ ಸಂಕೇತವಾಗಿ ಇವರಿಬ್ಬರಿಗೆ ''ಜೀಕೋ''.. ''ಜೆಸ್ಸಿ'' ಮತ್ತು ''ಜಾನ್'' ಎಂಬ ಮೂವರು ಮಕ್ಕಳಿದ್ದಾರೆ.

ಹೀಗೆ ದೂರವಾದ ಇಬ್ಬರು ಆ ನಂತರ ಬೇರೆ ಬೇರೆ ದಿಕ್ಕಿನಲ್ಲಿ ಹೆಜ್ಜೆ ಹಾಕಿದರು. ಆದರೆ, ಅದೇನಾಯ್ತು ಗೊತ್ತಿಲ್ಲ. ಇತ್ತೀಚೆಗೆ ರೀಟಾ ಭಟ್ಟಾಚಾರ್ಯ ಏಕಾಏಕಿ ಮಾಧ್ಯಮದವರ ಮುಂದೆ ಪ್ರತ್ಯಕ್ಷರಾದರು. ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನಗಳನ್ನು ನೀಡಿದರು. ಹೀಗೆ ನೀಡಿದ ಸಂದರ್ಶನಗಳಲ್ಲಿ ತಮ್ಮ ಮಾಜಿ ಪತಿ ಕುಮಾರ್ ಸಾನು ಅವರ ವಿರುದ್ಧ ರೀಟಾ ಭಟ್ಟಾಚಾರ್ಯ ಹಲವಾರು ಗಂಭೀರವಾದ ಆರೋಪಗಳನ್ನು ಮಾಡಿದರು.
ರೀಟಾ ಭಟ್ಟಾಚಾರ್ಯ ಮಾಡಿದ್ದ ಆರೋಪಗಳಿಂದ ಕೆರಳಿರುವ ಕುಮಾರ್ ಸಾನು ಸದ್ಯ ತಮ್ಮ ಮಾಜಿ ರೀಟಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. 50 ಕೋಟಿ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಇನ್ನು ಇವರು ಇಬ್ಬರು ದೂರವಾದಾಗ ಇಬ್ಬರಲ್ಲಿ ಯಾರೊಬ್ಬರು ಕೂಡ ಆರೋಪ -ಪ್ರತ್ಯಾರೋಪ ಮಾಡಬಾರದು ಎಂಬ ಒಪ್ಪಂದಕ್ಕೆ ಇಬ್ಬರು ಸಹಿ ಹಾಕಿದ್ದರು. ಆದರೆ ಈಗ ರೀಟಾ ಈ ನಿಯಮವನ್ನು ಮುರಿದಿದ್ದಾರೆ. ತಾವು ಹೂಡಿರುವ ದಾವೆಯಲ್ಲಿ ಕುಮಾರ್ ಸಾನು ಈ ವಿಚಾರವನ್ನು ಕೂಡ ಉಲ್ಲೇಖಿಸಿದ್ದಾರೆ.
ಇನ್ನೂ ಕುಮಾರ್ ಸಾನು ಕೋರ್ಟ್ ಮೆಟ್ಟಿಲೇರುತ್ತಿದ್ದಂತೆಯೇ ರೀಟಾ ಭಟ್ಟಾಚಾರ್ಯ ಕಣ್ಣೀರು ಹಾಕಿದ್ದಾರೆ. ''ಬಾಂಬೆ ಟೈಮ್ಸ್''ಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ರೀಟಾ ಅವರ ಈ ನಡೆಯಿಂದ ನನಗೆ ಆಘಾತವಾಗಿದೆ ಎಂದು ಹೇಳಿದ್ಧಾರೆ. ತಮ್ಮ ಮೂವರು ಮಕ್ಕಳನ್ನು ಸಾಕಿ ಸಲುಹಿ ಬೆಳೆಸಿದ ತಾಯಿಯ ವಿರುದ್ಧವೇ ಅವರು ಮೊಕದ್ದಮೆ ಹೂಡಿದ್ದಾರೆ. 50 ಕೋಟಿ ಪರಿಹಾರ ಕೇಳಿದ್ದಾರೆ. ಅಷ್ಟೊಂದು ಹಣ ನಾನು ಎಲ್ಲಿಂದ ತರಲಿ ಎಂದು ಭಾವುಕರಾಗಿದ್ದಾರೆ.
ಮಕ್ಕಳ ಹಿತದೃಷ್ಟಿಯಿಂದ ಇನ್ನೊಮ್ಮೆ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಮನವಿ ಮಾಡಿರುವ ರೀಟಾ ನ್ಯಾಯಾಲಯದಲ್ಲಿ ನಾನು ಕುಮಾರ್ ಸಾನು ಅವರನ್ನು ಭೇಟಿಯಾಗುತ್ತೇನೆ, ಅಂಗಲಾಚಿ ಬೇಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಇನ್ನಾದರೂ ಒಳ್ಳೆಯ ಮನುಷ್ಯರಾಗುವಂತೆ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ, ಮೂವರು ಮಕ್ಕಳ ತಂದೆಯಾಗಿರಿ ಎಂದು ಕೇಳಿಕೊಳ್ಳುತ್ತೇನೆ ಎಂದು ಹೇಳಿರುವ ರೀಟಾ ಭಟ್ಟಾಚಾರ್ಯ ನಮ್ಮನ್ನು ಪ್ರೀತಿಸಲು ಸಾಧ್ಯವಾಗದಿದ್ದರೆ ನಮಗೆ ತೊಂದರೆ ಕೊಡಬೇಡಿ, ಕಾಡಬೇಡಿ, ಈ ರೀತಿ ಮಾನಸಿಕ ಹಿಂಸೆ ಕೊಡಬೇಡಿ ಎಂದು ಕೇಳಿಕೊಳ್ಳುತ್ತೇನೆ ಎಂದು ಕೂಡ ಹೇಳಿದ್ದಾರೆ.


Click it and Unblock the Notifications











