ಕೊನೆಗೂ ತೆರೆಗೆ ಬರಲು ದಿನಾಂಕ ಕಾಯ್ದಿರಿಸಿದ '83' ಸಿನಿಮಾ?
2020ರಲ್ಲಿ ಬರಬೇಕಿದ್ದ ಚಿತ್ರಗಳು 2021ನೇ ವರ್ಷದಲ್ಲಿ ಸಾಲುಗಟ್ಟಿ ನಿಂತಿವೆ. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿಯ ದೊಡ್ಡ ದೊಡ್ಡ ಚಿತ್ರಗಳು ರಿಲೀಸ್ ದಿನಾಂಕ ಪ್ರಕಟಿಸಿಕೊಂಡಿದ್ದು ಥಿಯೇಟರ್ ಲಾಕ್ ಮಾಡಿಕೊಂಡಿವೆ.
ಕೆಲವು ಚಿತ್ರಗಳು ಸೂಕ್ತ ದಿನಾಂಕ ಸಿಗದ ಕಾರಣ ಇನ್ನೂ ಯೋಚಿಸುತ್ತಾ ಕೂತಿವೆ. ಬಾಲಿವುಡ್ ಪಾಲಿಗೆ ಗೇಮ್ ಚೇಂಜರ್ ಆಗಬಹುದು ಎಂದುಕೊಂಡಿರುವ '83' ಸಿನಿಮಾ ಅದ್ಯಾವಾಗ ಬರುತ್ತೋ ಎಂದು ಎದುರು ನೋಡುವಂತಾಗಿದೆ.
ಸಿನಿಮಾ ಚಿತ್ರೀಕರಣ ಮುಗಿಸುತ್ತಿದ್ದಂತೆ 2020ರ ಏಪ್ರಿಲ್‌ಗೆ ಬಿಡುಗಡೆ ಎಂದು ಪ್ರಕಟಿಸಿತ್ತು. ಅನಿರೀಕ್ಷಿತವಾಗಿ ಬಂದ ಕೊರೊನಾ ವೈರಸ್ ಎಲ್ಲ ಯೋಜನೆಗಳನ್ನು ತಲೆಕೆಳಗಾಗಿಸಿತು. ನಂತರ ಅದೇ ವರ್ಷ ಕ್ರಿಸ್‌ಮಸ್ ಮೇಲೆ 83 ಸಿನಿಮಾ ಕಣ್ಣಿಟ್ಟಿತು. ಆ ಯೋಜನೆಯೂ ಕೈಗೂಡಲಿಲ್ಲ.

2021ರ ಆರಂಭದಲ್ಲಿ ಸಿನಿಮಾ ಬರಬಹುದು ಎಂದುಕೊಂಡಿದ್ದರು. ಅದ್ಯಾಕೋ 83 ಸಿನಿಮಾ ರಿಲೀಸ್ ದಿನಾಂಕವನ್ನೇ ಘೋಷಣೆ ಮಾಡಿಲ್ಲ. ಈಗ, ಬಿಟೌನ್ ವೆಬ್‌ಸೈಟ್‌ಗಳು ವರದಿ ಮಾಡಿರುವಂತೆ 83 ಸಿನಿಮಾ 2021ರ ಜೂನ್ ತಿಂಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಜೂನ್ 25 ರಂದು ರಣ್ವೀರ್ ಸಿಂಗ್ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಬೀರ್ ಖಾನ್ ನಿರ್ದೇಶನದ ಈ ಚಿತ್ರದಲ್ಲಿ ರಣ್ವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 1983ರಲ್ಲಿ ಚೊಚ್ಚಲ ವಿಶ್ವಕಪ್ ಗೆದ್ದ ಭಾರತೀಯ ಕ್ರಿಕೆಟ್ ತಂಡದ ನಾಯಕರಾಗಿದ್ದ ಕಪಿಲ್ ದೇವ್ ಅವರ ಪಾತ್ರದಲ್ಲಿ ರಣ್ವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ.
ರಣ್ವೀರ್ ಸಿಂಗ್‌ಗೆ ದೀಪಿಕಾ ಪಡುಕೋಣೆ ನಾಯಕಿಯಾಗಿದ್ದು, ತಮಿಳು ನಟ ಜೀವ ಕೆ ಶ್ರೀಕಾಂತ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಇನ್ನುಳಿದಂತೆ ಸಲ್ಮಾನ್ ಖಾನ್ ನಟನೆಯ 'ರಾಧೇ' ಸಿನಿಮಾ ಈದ್ ಹಬ್ಬಕ್ಕೆ ತೆರೆಗೆ ಬರಲಿದೆ. ಜಾನ್ ಅಬ್ರಾಹಂ ನಟನೆಯ 'ಸತ್ಯಮೇವ ಜಯತೆ-2' ಸಿನಿಮಾ ಮೇ 14ಕ್ಕೆ ರಿಲೀಸ್ ಆಗಲಿದೆ. ಶಾಹೀದ್ ಕಪೂರ್ 'ಜೆರ್ಸಿ' ನವೆಂಬರ್ 4 ರಂದು, ಅಜಯ್ ದೇವಗನ್ 'ಮೈದಾನ್' ಸಿನಿಮಾ ಅಕ್ಟೋಬರ್ 15ಕ್ಕೆ, ಕಂಗನಾ ರಣಾವತ್ ನಟನೆಯ 'ಧಾಕಡ್' ಚಿತ್ರ ಅಕ್ಟೋಬರ್ 1ಕ್ಕೆ ತೆರೆಕಾಣಲಿದೆ.


Click it and Unblock the Notifications











