ಅರಳುವ ಮುನ್ನವೇ ಮುದುಡಿದ ಬದುಕು, ದುರಂತ ಅಂತ್ಯ ಕಂಡ 25 ವರ್ಷದ ಪ್ರತಿಭಾವಂತ ಯುವ ನಟ
ಸಮಸ್ಯೆಗಳಿಗೆ ಆತ್ಮ*ಹತ್ಯೆ ಒಂದೇ ಪರಿಹಾರ ಅಲ್ಲ. ಸಮಸ್ಯೆಗಳನ್ನು ಎದುರಿಸಿ ಬದುಕುವ ಶಕ್ತಿ ಹೊಂದಬೇಕು. ಸಮಸ್ಯೆ ಬಂದಾಗ ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಆದರೆ ವಿಶ್ವದೆಲ್ಲೆಡೆ ಆತ್ಮ*ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಹಿಂದೊಮ್ಮೆ ಆತ್ಮ*ಹತ್ಯೆ ಪ್ರಕರಣ ಹೆಚ್ಚುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ಇದು ಸಾಮಾಜಿಕ ಸಮಸ್ಯೆ ಎಂದು ಕೂಡ ಹೇಳಿದೆ. ಪ್ರತಿ 100 ಜನರಲ್ಲಿ 70 ಜನ..
ಪುರುಷರೇ ಆತ್ಮ*ಹತ್ಯೆ ಮಾಡಿಕೊಳ್ಳುತ್ತಾರೆ..ಎಂದು ಎನ್‌ಸಿಆರ್‌ಬಿ { ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ } ಕೂಡ ವರದಿ ನೀಡಿದೆ. ಇಷ್ಟೇ ಅಲ್ಲದೇ ಶೇಕಡಾ 36 % ಮಹಿಳೆಯರು ಆತ್ಮ*ಹತ್ಯೆಗೆ ಪ್ರಯತ್ನ ಮಾಡುತ್ತಾರೆ ಎಂದು ಹೇಳಿದೆ. ಆತ್ಮ*ಹತ್ಯೆ ಮಾಡಿಕೊಳ್ಳುವುದರಲ್ಲಿ ಪುರುಷರು ಮತ್ತು ಆತ್ಮ*ಹತ್ಯೆಗೆ ಪ್ರಯತ್ನಿಸುವರಲ್ಲಿ ಮಹಿಳೆಯರು ಮುಂದಿರುತ್ತಾರೆ ಎಂದು ಅಧ್ಯಯನಗಳು ತಿಳಿಸಿವೆ. ಜೀವನದಲ್ಲಿ ನಾನಾ ಸಮಸ್ಯೆಗಳಿಂದ ಬೇಸತ್ತು, ತಾಳ್ಮೆಯ ಕೊರತೆಯಿಂದ ಆತ್ಮ*ಹತ್ಯೆ ಮಾಡಿಕೊಳ್ಳುವರ ಸಂಖ್ಯೆ ಈಗೀಗ ಹೆಚ್ಚಾಗುತ್ತಿದೆ. ಇದಕ್ಕೆ ಸಚಿನ್ ಚಂದ್ವಾಡೆ ದುರಂತ ಅಂತ್ಯ ಮತ್ತೊಂದು ಉದಾಹರಣೆ.

ಹೌದು, ಸಚಿನ್ ಚಂದ್ವಾಡೆ.. ಮರಾಠಿ ಚಿತ್ರರಂಗದ ಪ್ರತಿಭಾವಂತ ನಟ. ನೆಟ್‌ಫ್ಲಿಕ್ಸ್‌ನ ಜನಪ್ರಿಯ ವೆಬ್ ಸರಣಿ ''ಜಮ್ತಾರಾ''ದ ಎರಡನೇ ಸೀಸನ್‌ನಲ್ಲಿ ಅಭಿನಯಿಸಿದ್ದ ಸಚಿನ್ ಚಂದ್ವಾಡೆ ಅವರಿಗೆ ಈ ಸರಣಿ ಅಪಾರವಾದ ಕೀರ್ತಿಯನ್ನು ತಂದು ಕೊಟ್ಟಿತ್ತು.2022ರಲ್ಲಿ ಪ್ರಸಾರವಾದ ಈ ಸರಣಿಯನ್ನು ನೋಡಿದ ಹಲವರು ಸಚಿನ್ ಚಂದ್ವಾಡೆ ಅವರ ಅಭಿನಯದ ಕುರಿತು ಮಾತನಾಡಿದ್ದರು. ಮೆಚ್ಚುಗೆಯನ್ನು ಸೂಚಿಸಿದ್ದರು.
ಆದರೆ ಅದ್ಯಾವ ಒತ್ತಡ ಸಚಿನ್ ಅವರ ಮೇಲಿತ್ತೋ.. ಮಾನಸಿಕವಾಗಿ ಅದ್ಯಾವ ಕಾರಣಕ್ಕೆ ಸಚಿನ್ ನೊಂದು ಬೆಂದಿದ್ದರು.. ಗೊತ್ತಿಲ್ಲ. ಆದರೆ ಪುಣೆಯ ಐಟಿ ಪಾರ್ಕ್‌ನಲ್ಲಿ ಕೆಲಸ ಮಾಡುತ್ತಲೇ ಚಿತ್ರರಂಗದಲ್ಲಿ ಒಂದೊಂದೇ ಹೆಜ್ಜೆ ಇಡುತ್ತಾ ಬದುಕು ರೂಪಿಸಿಕೊಳ್ಳುತ್ತಿದ್ದ, ಉತ್ಸಾಹದ ಚಿಲುಮೆಯಂತೆ ಇದ್ದ ಸಚಿನ್ ಚಂದ್ವಾಡೆ ಅಕ್ಟೋಬರ್ 23ರಂದು ನೇಣಿಗೆ ಕೊರಳೊಡ್ಡಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
''ಫ್ರೀ ಪ್ರೆಸ್ ಜರ್ನಲ್'' ವರದಿಯ ಪ್ರಕಾರ ಜಲಗಾಂವ್ ಜಿಲ್ಲೆಯ ಪರೋಲಾ ತಾಲೂಕಿನ ಉಂಡಿರ್ಖೇಡೆ ಗ್ರಾಮದಲ್ಲಿನ ತಮ್ಮ ನಿವಾಸದಲ್ಲಿ ಸಚಿನ್ ಆತ್ಮ*ಹತ್ಯೆಗೆ ಪ್ರಯತ್ನ ಮಾಡಿದ್ದರು. ಮಧ್ಯಾಹ್ನ 1-30ರ ಸುಮಾರು ನೇಣಿಗೆ ಕೊರಳೊಡ್ಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ ಸಚಿನ್ ಚಂದ್ವಾಡೆ.
ಅಂದ್ಹಾಗೇ ಸಚಿನ್ ಚಂದ್ವಾಡೆ ವಾರದ ಹಿಂದೆಯಷ್ಟೇ ತಮ್ಮ ಅಭಿಮಾನಿಗಳಿಗೆ, ತಮ್ಮನ್ನು ಇಷ್ಟು ಪಟ್ಟು ಪ್ರೋತ್ಸಾಹಿಸುತ್ತಿರುವವರಿಗೆ ಸಿಹಿ ಸುದ್ದಿಯನ್ನು ನೀಡಿದ್ದರು. ತಮ್ಮ ಮುಂಬರುವ ಮರಾಠಿ ಚಿತ್ರ ''ಅಸುರ್ವನ್'' ಚಿತ್ರದ ಮೋಷನ್ ಪೋಸ್ಟರ್ ಹಂಚಿಕೊಂಡಿದ್ದರು. ''ಸೋಮಾ'' ಎಂಬ ಪಾತ್ರವನ್ನು ನಿರ್ವಹಿಸುತ್ತಿರುವುದಾಗಿ ಖುಷಿ ಖುಷಿಯಿಂದ ಹೇಳಿಕೊಂಡಿದ್ದರು. ಆದರೆ ಈಗ ವಾರದ ನಂತರ ಸಚಿನ್ ಚಂದ್ವಾಡೆ ಇಲ್ಲ.

ಸಚಿನ್ ಚಂದ್ವಾಡೆ ಅವರ ಈ ಆತುರದ ನಿರ್ಧಾರದಿಂದ ದುಃಖಕ್ಕೀಡಾಗಿರುವ ಮರಾಠಿ ಚಿತ್ರರಂಗ ಸಚಿನ್ ಚಂದ್ವಾಡೆ ಅವರ ನಿಧನಕ್ಕೆ ಸಂತಾಪವನ್ನು ಸೂಚಿಸಿದೆ. ಪ್ರತಿಭಾವಂತನನ್ನು ನೆನೆದು ಕಂಬನಿ ಮಿಡಿದಿದೆ. ರಾಮಚಂದ್ರ ಆಂಬಟ್ ನಿರ್ದೇಶನದ ಸ್ವಪ್ನಾ ಸರೂಪ್ ನಿರ್ಮಾಣದ ''ಅಸುರ್ವನ್'' ಚಿತ್ರದಲ್ಲಿ ಸಚಿನ್ ಜೊತೆ ತೆರೆ ಹಂಚಿಕೊಂಡ ಪೂಜಾ ಮೋಯಿಲಿ ತಮ್ಮ ನೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹೊರ ಹಾಕಿದ್ದಾರೆ.
ಸದ್ಯ ಸಚಿನ್ ಚಂದ್ವಾಡೆ ಅವರ ನಿಧನಕ್ಕೆ, ಅವರು ತೆಗೆದುಕೊಂಡ ಈ ಆತುರದ ನಿರ್ಧಾರಕ್ಕೆ ಕಾರಣವೇನು ಎನ್ನುವುದು ಬಹಿರಂಗವಾಗಿಲ್ಲ. ಪರೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಎದೆಯೆತ್ತರಕ್ಕೆ ಬೆಳೆದ ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.


Click it and Unblock the Notifications











