ಒಮ್ಮೆಲೆ ಮುಗಿಬಿದ್ದ ಫ್ಯಾನ್ಸ್; ಇಕ್ಕಟ್ಟಿನಲ್ಲಿ ಸಿಲುಕಿ ಕಂಗಾಲಾದ ಅಮಿತಾಬ್ ಬಚ್ಚನ್
ಬಾಲಿವುಡ್ ಶೆಹನ್‌ಷಾ ಅಮಿತಾಬ್ ಬಚ್ಚನ್. ಅವರ ವ್ಯಕ್ತಿತ್ವವೇ ಅಂತಹದ್ದು. ದಶಕಗಳಿಂದ ಬಾಲಿವುಡ್ ಆಳುತ್ತಿರುವ ಬಿಗ್ ಬಿಗೆ ದೊಡ್ಡ ಅಭಿಮಾನಿ ಬಳಗವಿದೆ. ಅವರ ಒಂದು ಮಾತು ಕೇಳಲು ಜನ ಸಾಲುಗಟ್ಟಿ ನಿಲ್ಲುತ್ತಾರೆ. ಅವರ ನಗು ಕಂಡರೆ ಸಾಕು ಎಂದು ಹಂಬಲಿಸುವ ಕೋಟ್ಯಂತರ ಜೀವಗಳಿವೆ.
ಭಾರತೀಯ ಚಿತ್ರರಂಗದಲ್ಲಿ ಅಮಿತಾಬ್ ಬಚ್ಚನ್ ಎಂದರೆ ಕೇವಲ ನಟನಲ್ಲ. ಅವರೊಂದು ದೊಡ್ಡ ಶಕ್ತಿ. ಇವತ್ತಿಗೂ ಯುವ ನಟರಿಗೆ ಅವರೇ ಸ್ಫೂರ್ತಿ. ಎಪ್ಪತ್ತರ ಹರೆಯ ದಾಟಿದರೂ ಅವರ ಎನರ್ಜಿ ಕಡಿಮೆಯಾಗಿಲ್ಲ. ಹೋದ ಕಡೆಯಲ್ಲೆಲ್ಲಾ ಅವರಿಗೆ ರಾಜಮರ್ಯಾದೆ ಸಿಗುತ್ತದೆ. ಜನ ಅವರನ್ನ ದೇವರೆಂದೇ ಪೂಜಿಸುತ್ತಾರೆ.

ಕೆಲವೊಮ್ಮೆ ಪ್ರೀತಿಯೇ ಸಂಕಷ್ಟ ತರುತ್ತದೆ. ಅತಿರೇಕದ ಅಭಿಮಾನ ಆಪತ್ತಿಗೆ ಕಾರಣವಾಗುತ್ತದೆ. ಇತ್ತೀಚೆಗೆ ಇಂತಹದ್ದೇ ಒಂದು ಘಟನೆ ನಡೆದಿದೆ. ಆ ವಿಡಿಯೋ ನೋಡಿದ ಮೇಲೆ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈಗ ಅದೇ ದೊಡ್ಡ ಸುದ್ದಿಯಾಗಿದೆ. ಅಷ್ಟಕ್ಕೂ ನಡೆದಿದ್ದೇನು ಗೊತ್ತಾ? ಇಲ್ಲಿದೆ ಪೂರ್ತಿ ಮಾಹಿತಿ.
ನೂಕುನುಗ್ಗಲು
ಬಿಗ್‌ಬಿ ಅಮಿತಾಬ್ ಬಚ್ಚನ್ ಅವರು ಸೂರತ್‌ಗೆ ಆಗಮಿಸುತ್ತಿದ್ದಾರೆ ಎಂಬ ಸುದ್ದಿ ಇಡೀ ನಗರದಲ್ಲಿ ವಾಯುವೇಗದಲ್ಲಿ ಹರಡಿತ್ತು. ಬಿಗ್ ಬಿ ಬರ್ತಿದ್ದಾರೆ ಅನ್ನೋ ವಿಚಾರ ಕೇಳಿದ್ದೇ ತಡ, ಅಭಿಮಾನಿಗಳು ಫುಲ್ ಅಲರ್ಟ್ ಆಗಿದ್ದರು. ವಿಮಾನ ನಿಲ್ದಾಣದ ಹೊರಗೆ ಜನಸಾಗರವೇ ನೆರೆದಿತ್ತು. ಬಿಗ್ ಬಿ ಹೊರಬರುತ್ತಿದ್ದಂತೆ ಪರಿಸ್ಥಿತಿ ಕೈಮೀರಿತ್ತು. ಅಲ್ಲಿ ಭದ್ರತೆ ಎನ್ನುವುದೇ ಮಾಯವಾಗಿತ್ತು.
ನೆಚ್ಚಿನ ನಟನನ್ನು ಹತ್ತಿರದಿಂದ ನೋಡಬೇಕು ಅನ್ನೋ ಹಪಾಹಪಿ ಜನರದ್ದಾಗಿತ್ತು. ಸೆಕ್ಯೂರಿಟಿ ಗಾರ್ಡ್‌ಗಳ ಮಾತನ್ನು ಯಾರೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಎಲ್ಲರೂ ಕೈಯಲ್ಲಿ ಮೊಬೈಲ್ ಹಿಡಿದು ಫೋಟೋ ತೆಗೆಯಲು ಮುನ್ನುಗ್ಗಿದರು. ಇದರಿಂದ ಅಮಿತಾಬ್ ಬಚ್ಚನ್ ಅವರು ಸಂಕಷ್ಟಕ್ಕೆ ಸಿಲುಕುವಂತಾಯಿತು. ಇಕ್ಕಟ್ಟಾಗಿದ್ದ ಜಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿ ಸಮಸ್ಯೆ ಆಗಿತ್ತು. ಹಿರಿಯ ನಟ ಅಲ್ಲಿಂದ ಹೊರ ಬರುವುದೇ ಕಷ್ಟ ಎನ್ನುವಂತಾಗಿತ್ತು.
ಮುಗಿಬಿದ್ದ ಫ್ಯಾನ್ಸ್
ಜನರ ಗುಂಪು ಅಮಿತಾಬ್ ಅವರನ್ನು ಸಂಪೂರ್ಣವಾಗಿ ಮುತ್ತಿಗೆ ಹಾಕಿತ್ತು. ನಟನಿಗೆ ಉಸಿರಾಡಲು ಕೂಡ ಜಾಗ ಇರಲಿಲ್ಲ. ಅವರ ಆರೋಗ್ಯದ ಬಗ್ಗೆ ಯಾರೂ ಯೋಚಿಸಲಿಲ್ಲ. ಮುನ್ನುಗ್ಗುವ ಭರದಲ್ಲಿ ಜನರು ಬಿಗ್ ಬಿ ಅವರನ್ನು ತಳ್ಳಾಡಿದರು. ಇದರಿಂದ ಅವರು ಸಮತೋಲನ ತಪ್ಪುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಮಿತಾಬ್ ಅವರ ಮುಖದಲ್ಲಿ ಅಸಹಾಯಕತೆ ಎದ್ದು ಕಾಣುತ್ತಿತ್ತು.
ಇಂತಹ ಪರಿಸ್ಥಿತಿಯನ್ನು ಅವರು ನಿರೀಕ್ಷಿಸಿರಲಿಲ್ಲ. ಭದ್ರತಾ ಸಿಬ್ಬಂದಿ ಕೂಡ ಈ ಜನಜಂಗುಳಿಯನ್ನು ನೋಡಿ ಬೆಚ್ಚಿಬಿದ್ದರು. ಅಮಿತಾಬ್ ಬಚ್ಚನ್ ಅವರನ್ನು ಸುರಕ್ಷಿತವಾಗಿ ಕಾರಿನವರೆಗೆ ಕರೆದುಕೊಂಡು ಹೋಗುವುದು ಒಂದು ಸಾಹಸದ ಕೆಲಸವಾಗಿತ್ತು. ಆ ಸಮಯದಲ್ಲಿ ಅಲ್ಲಿ ಸಣ್ಣ ಮಟ್ಟದ ನೂಕುನುಗ್ಗಲು ಏರ್ಪಟ್ಟಿತ್ತು. ಅಮಿತಾಬ್ ಅವರು ಅಲ್ಲಿಂದ ಹೊರಬರುವಷ್ಟರಲ್ಲಿ ಸಾಕು ಸಾಕಾಗಿತ್ತು.
ನೆಟ್ಟಿಗರ ಆಕ್ರೋಶ
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ಗರಂ ಆಗಿದ್ದಾರೆ. "ಅಭಿಮಾನ ಇರಲಿ ಆದರೆ ಅದು ಅತಿರೇಕವಾಗಬಾರದು" ಎಂದು ಬುದ್ಧಿ ಹೇಳುತ್ತಿದ್ದಾರೆ. ಅಮಿತಾಬ್ ಅವರಿಗೆ ಈಗ ವಯಸ್ಸಾಗಿದೆ. ಈ ವಯಸ್ಸಿನಲ್ಲಿ ಅವರ ಮೇಲೆ ಈ ರೀತಿ ಮುಗಿಬೀಳುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ.
ಸೆಲೆಬ್ರಿಟಿಗಳಿಗೂ ಗೌರವ ಕೊಡಬೇಕು. ಅವರಿಗೆ ಹಾನಿಯಾಗುವಂತೆ ವರ್ತಿಸಬಾರದು. ಸೂರತ್ ವಿಮಾನ ನಿಲ್ದಾಣದಲ್ಲಿ ನಡೆದ ಈ ಘಟನೆ ನಿಜಕ್ಕೂ ದುರದೃಷ್ಟಕರ. ಬಾಲಿವುಡ್ ಮಂದಿ ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಹಿರಿಯ ನಟರಿಗೆ ನೀಡಬೇಕಾದ ಕನಿಷ್ಠ ಮರ್ಯಾದೆಯನ್ನಾದರೂ ಜನ ಪಾಲಿಸಲಿ ಎಂಬುದು ಎಲ್ಲರ ಆಶಯ. ಸದ್ಯಕ್ಕೆ ಬಿಗ್ ಬಿ ಅವರು ಈ ಸಂಕಷ್ಟದಿಂದ ಪಾರಾಗಿ ಬಂದಿರುವುದು ಅವರ ಅಭಿಮಾನಿಗಳಿಗೆ ನಿರಾಳ ತಂದಿದೆ.
ತಾರೆಯರಿಗೆ ಸಂಕಷ್ಟ
ಬಿಗ್‌ಬಿ ಮಾತ್ರವಲ್ಲ ಈ ಹಿಂದೆ ಕೂಡ ಸಿನಿಮಾ ತಾರೆಯರಿಗೆ ಇಂತಹ ಕಹಿ ಅನುಭವ ಆಗಿದೆ. ಇತ್ತೀಚೆಗೆ ನಟಿ ನಿಧಿ ಅಗರ್‌ವಾಲ್, ನಟಿ ಸಮಂತಾ ಕೂಡ ಅಭಿಮಾನಿಗಳ ಆರ್ಭಟಕ್ಕೆ ಬೆಚ್ಚಿ ಬಿದ್ದಿದ್ದರು. ಒಮ್ಮೆ ಫೋಟೊ ಮುಗಿಬಿದ್ದ ಜನರ ನಡುವೆ ಕಂಗಾಲಾಗಿದ್ದರು. ಕೆಲವೊಮ್ಮೆ ಕಿಡಿಗೇಡಿಗಳು ಅಹಸ್ಯವಾಗಿ ನಟಿಯರ ಮೈ ಮುಟ್ಟಿದ ಘಟನೆ ಕೂಡ ನಡೆದಿತ್ತು.
ಇತ್ತೀಚೆಗೆ ತಮಿಳು ನಟ ವಿಜಯ್ ಕೂಡ ಅಭಿಮಾನಿಗಳಿಂದ ಸಂಕಷ್ಟ ಎದುರಿಸಿದ್ದರು. ಒಮ್ಮೆಲೆ ಅಭಿಮಾನಿಗಳು ಮುತ್ತಿಕೊಂಡ ಕಾರಣ ಕಾಲು ಜಾರಿ ಬಿದ್ದಿದ್ದರು. ಇನ್ನಾದರೂ ಅಭಿಮಾನಿಗಳು ತಾರೆಯರನ್ನು ನೋಡಿದಾಗ ಒಳ್ಳೆಯ ರೀತಿಯಲ್ಲಿ ವರ್ತಿಸಬೇಕು. ಇಲ್ಲದಿದ್ದರೆ ಇಂತಹ ಅಚಾತುರ್ಯ ನಡೆಯುತ್ತದೆ.


Click it and Unblock the Notifications











