ಸಂಭಾವನೆ ಜೊತೆಗೆ ಲಾಭದಲ್ಲಿ ಪಾಲು.. ಎ. ಆರ್ ರಹಮಾನ್ ಹೊಸ ದಾಖಲೆ; ಯಶ್ ಕೂಡ ನಟಿಸಿರೋ ಸಿನಿಮಾ
ಭಾರತೀಯ ಸಿನಿಮಾಗಳಲ್ಲಿ ಸಂಗೀತಕ್ಕೆ ಬಹಳ ಮಹತ್ವ ಇದೆ. ಹಾಡುಗಳ ಜೊತೆಗೆ ಹಿನ್ನೆಲೆ ಸಂಗೀತ ಬಹಳ ಮುಖ್ಯವಾಗುತ್ತದೆ. ಹಾಗಾಗಿ ಸಂಗೀತದ ಬಗ್ಗೆ ಫಿಲ್ಮ್ ಮೇಕರ್ಸ್ ಬಹಳ ತಲೆ ಕೆಡಿಸಿಕೊಳ್ಳುತ್ತಾರೆ. ಇತ್ತೀಚೆಗೆ ಕೋಟಿ ಕೋಟಿ ಸಂಭಾವನೆ ಕೊಟ್ಟು ಟ್ಯೂನ್ ಹಾಕಿಸುತ್ತಾರೆ. ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ಶುರುವಾದ ಬಳಿಕ ಕಲಾವಿದರ ಸಂಭಾವನೆ ರೀತಿ ತಂತ್ರಜ್ಞರ ಸಂಭಾವನೆ ಕೂಡ ಹೆಚ್ಚಾಗಿದೆ.
ಆಸ್ಕರ್ ವಿತೇಜ ಎ. ಆರ್ ರಹಮಾನ್ ಸಂಗೀತದ ಬಗ್ಗೆ ಬಿಡಿಸಿ ಹೇಳಬೇಕಿಲ್ಲ. ತಮ್ಮ ಅದ್ಭುತ ಸಂಗೀತದ ಮೂಲಕ ಪ್ರಪಂಚಾದಾದ್ಯಂತ ಗಮನ ಸೆಳೆದವರು ರೆಹಮಾನ್.. ಅಂದಹಾಗೆ ತಮ್ಮ ಸಂಗೀತದ ಪ್ರಯಾಣವನ್ನು ಕನ್ನಡ ಸಿನಿಮಾಗಳ ಮೂಲಕವೇ ಅವರು ಆರಂಭಿಸಿದ್ದರು. ಇದೀಗ ಭಾರತೀಯ ಚಿತ್ರರಂಗದಲ್ಲೇ ಅತಿಹೆಚ್ಚು ಸಂಭಾವನೆ ಪಡೆಯುವ ಸಂಗೀತ ನಿರ್ದೇಶಕ ಎನಿಸಿಕೊಂಡಿದ್ದಾರೆ.

ಮೊದಲಿನ ರೀತಿ ಇತ್ತೀಚೆಗೆ ರಹಮಾನ್ ಸಂಗೀತ ಕಮಾಲ್ ಮಾಡ್ತಿಲ್ಲ. ಆದರೂ ಆಸ್ಕರ್ ವಿಜೇತ ಸಂಗೀತ ನಿರ್ದೇಶನದ ಕ್ರೇಜ್ ಕಮ್ಮಿ ಆಗಿಲ್ಲ. ರಾಮ್‌ಚರಣ್ ನಟನೆಯ 'ಪೆದ್ದಿ' ಚಿತ್ರದ ಹಾಡುಗಳು ಸದ್ದು ಮಾಡ್ತಿದೆ. 'ಮೂನ್ ವಾಕ್' ಎಂಬ ಮತ್ತೊಂದು ಚಿತ್ರಕ್ಕೂ ಟ್ಯೂನ್ ಹಾಕುತ್ತಿದ್ದಾರೆ. ಮಣಿರತ್ನಂ ಹಾಗೂ ರಹಮಾನ್ ಕಾಂಬಿನೇಷನ್ ಸಿನಿಮಾ ಆಲ್ಬಮ್‌ಗಳು ಹಿಟ್ ಲಿಸ್ಟ್ ಸೇರಿವೆ. ಮಣಿರತ್ನಂ ಮುಂದಿನ ಚಿತ್ರಕ್ಕೂ ಒಟ್ಟಿಗೆ ಕೈ ಜೋಡಿಸಿದ್ದಾರೆ.
ಬಹುನಿರೀಕ್ಷಿತ 'ರಾಮಾಯಣ' ಚಿತ್ರಕ್ಕೂ ಎ. ಆರ್ ರಹಮಾನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. 4000 ಕೋಟಿ ರೂ. ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಅದಕ್ಕೆ ತಕ್ಕಂತೆ ಕಲಾವಿದರು, ತಂತ್ರಜ್ಞರು ಭಾರೀ ಸಂಭಾವನೆ ಪಡೆಯುತ್ತಿದ್ದಾರೆ. ಹಾಲಿವುಡ್ ಸಂಗೀತ ನಿರ್ದೇಶಕ ಹ್ಯಾನ್ಸ್ ಜಿಮ್ಮರ್ ಜೊತೆ ಸೇರಿ ರಹಮಾನ್ ಕೆಲಸ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ನಮ್ಮ 'ರಾಮಾಯಣ' ಕಥೆಯನ್ನು ತೆರೆಗೆ ತರಲಾಗ್ತಿದೆ. ಹಾಗಾಗಿ ಹಾಲಿವುಡ್ ಮಟ್ಟದಲ್ಲಿ ಹೆಸರು ಮಾಡಿರುವ ರಹಮಾನ್ ಅವರನ್ನು ಸಂಗೀತ ನಿರ್ದೇಶಕರಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

'ಟಾಕ್ಸಿಕ್' ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲು ಅನಿರುದ್ಧ್ ರವಿಚಂದರ್ 15 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎನ್ನಲಾಗಿತ್ತು. ಇದು ಭಾರತೀಯ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕನಿಗೆ ಸಿಗುವ ಭಾರೀ ಸಂಭಾವನೆ ಎನ್ನಲಾಗಿತ್ತು. ಆದರೆ ಬಳಿಕ ಅದೆಲ್ಲಾ ಸುಳ್ಳಾಗಿತ್ತು. ಆದರೆ 'ರಾಮಾಯಣ' ಚಿತ್ರಕ್ಕಾಗಿ ರಹಮಾನ್ ಬರೋಬ್ಬರಿ 30 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಸಂಭಾವನೆ ಜೊತೆಗೆ ಲಾಭದಲ್ಲಿ ಪಾಲು ಕೂಡ ಸಿಗಲಿದೆಯಂತೆ. ಅದೇ ನಿಜವಾಗಿದ್ದರೆ ಭಾರತೀಯ ಚಿತ್ರರಂಗದಲ್ಲಿ ಇದು ಹೊಸ ದಾಖಲೆಯೇ ಸರಿ.
ರಹಮಾನ್ ಮಾತ್ರವಲ್ಲ 'ರಾಮಾಯಣ' ಚಿತ್ರದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಭಾರೀ ಸಂಭಾವನೆ ಸಿಗುತ್ತಿದೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಶ್ರೀರಾಮನ ಪಾತ್ರದಲ್ಲಿ ನಟಿಸುತ್ತಿರುವ ರಣಬೀರ್ ಕಪೂರ್ ಸರಣಿಯ 2 ಚಿತ್ರಕ್ಕರ 150 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗ್ತಿದೆ. ಎರಡು ಭಾಗಗಳಾಗಿ ಸಿನಿಮಾ ತೆರೆಗೆ ಬರ್ತಿದ್ದು ತಲಾ 75 ಕೋಟಿ ರೂ. ಸಂಭಾವನೆ ಜೇಬಿಗಿಳಿಸುತ್ತಿದ್ದಾರೆ. ಸೀತೆ ಪಾತ್ರಕ್ಕೆ ಎರಡೂ ಚಿತ್ರಗಳಿಗೆ ಸೇರಿ 12 ಕೋಟಿ ರೂ. ಸಾಯಿ ಪಲ್ಲವಿ ಪಡೆಯುತ್ತಿದ್ದಾರೆ.
ರಾವಣನಾಗಿ ನಟಿಸೋಕೆ ಯಶ್ ಸರಣಿ ಚಿತ್ರಕ್ಕೆ ಸೇರಿ 100 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎನ್ನಲಾಗ್ತಿದೆ. ಆದರೆ ತಮ್ಮ ಸಂಭಾವನೆ ಹಣವನ್ನು ಚಿತ್ರದ ನಿರ್ಮಾಣಕ್ಕೆ ತೊಡಗಿಸಿ ಒಟ್ಟು ಆದಾಯದಲ್ಲಿ ಪಾಲು ಪಡೆಯುತ್ತಾರೆ ಎನ್ನಲಾಗ್ತಿದೆ. ಹನುಮಂತನ ಪಾತ್ರಕ್ಕೆ ಸನ್ನಿ ಡಿಯೋಲ್ ಎರಡು ಸಿನಿಮಾ ಸೇರಿ 40 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂದು ಗುಲ್ಲಾಗಿದೆ.


Click it and Unblock the Notifications











