ಮಗನ ಮೂರನೇ ಹೆಜ್ಜೆ ; ಎಲ್ಲರೆದುರು ಬಿಕ್ಕಿ ಬಿಕ್ಕಿ ಅತ್ತ ಆಮಿರ್ ಖಾನ್-ಸಮಾಧಾನ ಮಾಡಿದ ಸಾಯಿ ಪಲ್ಲವಿ
ಉಳ್ಳವರು, ಬಡವರು, ವಿದ್ಯಾವಂತರು, ಅವಿದ್ಯಾವಂತರು, ಯಾರೇ ಆಗಲಿ ತಮ್ಮ ಮಕ್ಕಳು ಒಳ್ಳೆ ರೀತಿಯಲ್ಲಿ ಬೆಳೆಯಬೇಕು ಎಂದುಕೊಳ್ಳುತ್ತಾರೆ. ತಾವು ಅನುಭವಿಸಿದ ಕಷ್ಟ ಅವರು ಅನುಭವಿಸಬಾರದು ಎಂದು ಬಯಸುತ್ತಾರೆ. ತಮ್ಮ ಮಕ್ಕಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುತ್ತಾರೆ. ಹಗಲಿರುಳೂ ಅವರ ಭವಿಷ್ಯವನ್ನೇ ಗಮನದಲ್ಲಿಟ್ಕೊಂಡು ಬೆವರು ಸುರಿಸುತ್ತಾರೆ.
ತಮಗಿಂತ ತಮ್ಮ ಮಕ್ಕಳು ಎತ್ತರೆತ್ತರಕ್ಕೆ ಬೆಳೆಯಬೇಕು ಎಂದು ಆಸೆ ಪಡುತ್ತಾರೆ. ಹೊರ ಜಗತ್ತಿಗೆ ಎಷ್ಟೇ ಗಟ್ಟಿಯಾಗಿ ಕಂಡರೂ ಕೂಡ ಒಳಗೊಳಗೆ ಮಕ್ಕಳ ಏಳಿಗೆಗಾಗಿ ಹೆತ್ತವರು ಮಿಡಿಯುತ್ತಿರುತ್ತಾರೆ. ಮಕ್ಕಳು ಮೊದಲ ಹೆಜ್ಜೆ ಇಟ್ಟಾಗ ಸಂಭ್ರಮ ಪಡುವ ಪೋಷಕರು ಬದುಕಿನ ಪ್ರಯಾಣದಲ್ಲಿ ಮಕ್ಕಳು ಸ್ವಂತ ಕಾಲ ಮೇಲೆ ನಿಂತು ಸಾಧನೆಯ ಶಿಖರದ ಒಂದೊಂದೇ ಮೆಟ್ಟಿಲೇರುವುದನ್ನು ಕಂಡಾಗ ಕಣ್ಣೀರಾಗುತ್ತಾರೆ. ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ವಿಚಾರದಲ್ಲಿ ಕೂಡ ಆಗಿದ್ದು ಇದೇ.

ಹೌದು, ತಮ್ಮ ಚಿತ್ರ ಮತ್ತು ಪಾತ್ರಗಳ ಮೂಲಕವೇ ಹೆಸರುವಾಸಿಯಾದವರು ಆಮಿರ್ ಖಾನ್. ತಮ್ಮ ಪ್ರತಿ ಚಿತ್ರಕ್ಕೂ ಅದಕ್ಕೇ ಬೇಕಾದ ತಯಾರಿಯನ್ನೆಲ್ಲ ಮಾಡಿಕೊಂಡೇ ಅಖಾಡಕ್ಕೆ ಇಳಿಯುವ ಆಮಿರ್ ಖಾನ್ ಕೇವಲ ಮಿಸ್ಟರ್ ಪರ್ಫೆಕ್ಷನಿಸ್ಟ್ ಮಾತ್ರ ಅಲ್ಲ ಬಾಲಿವುಡ್‌ನ ಗೇಮ್ ಚೇಂಜರ್ ಕೂಡ ಹೌದು.
ಇಂಥಾ ಆಮಿರ್ ಖಾನ್ ಅವರ ಮಗ ಜುನೈದ್ ಖಾನ್ ಸದ್ಯ ಚಿತ್ರರಂಗದಲ್ಲಿ ಅಂಬೆಗಾಲಿಡುತ್ತಿದ್ಧಾರೆ. ಒಂದೊಂದೆ ಮೆಟ್ಟಿಲನ್ನೇರುತ್ತಿದ್ದಾರೆ. ಸದ್ಯ ಜುನೈದ್ ಅಭಿನಯದ ಮೂರನೇ ಚಿತ್ರ ''ಏಕ್ ದಿನ್'' ಬಿಡುಗಡೆಗೆ ಸಿದ್ಧವಾಗಿದೆ. ಇದೇ ಮೇ 1 ರಂದು ವಿಶ್ವದೆಲ್ಲೆಡೆ ತೆರೆಗೆ ಅಪ್ಪಳಿಸಲಿದೆ.
ಸರಳ ಸುಂದರಿ ಸಾಯಿ ಪಲ್ಲವಿ ಈ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಮೂಲಕ ಹಿಂದಿ ಚಿತ್ರರಂಗಕ್ಕೆ ಪರಿಚಯ ಆಗುತ್ತಿದ್ದಾರೆ. ಬಾಲಿವುಡ್‌ನ ಪ್ರವೇಶಿಸುತ್ತಿದ್ದಾರೆ. ಸಹಜವಾಗಿ ಮಗನ ಈ ಚಿತ್ರಕ್ಕೆ ಆಮಿರ್ ಖಾನ್ ಕೂಡ ಬಂಡವಾಳ ಹೂಡಿದ್ದಾರೆ.
ಹೀಗಾಗಿ ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನೆಲೆ ತಮ್ಮ ಮಗ ಜುನೈದ್ ಮತ್ತು ಸಾಯಿ ಪಲ್ಲವಿ ಜೊತೆ ಸೇರಿ ಆಮಿರ್ ಖಾನ್ ಪ್ರಚಾರವನ್ನು ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ಕಾರ್ಯಕ್ರಮವೊಂದರಲ್ಲಿ ಎಲ್ಲರೆದುರು ಆಮಿರ್ ಖಾನ್ ಕಣ್ಣೀರು ಹಾಕಿದ್ದಾರೆ.

ಹೌದು, ''ಏಕ್ ದಿನ್'' ಬಿಡುಗಡೆಯ ಹಿನ್ನೆಲೆ ಮುಂಬೈನಲ್ಲಿ''ಏಕ್ ದಿನ್ ಕಿ ಮೆಹಫಿಲ್'' ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ''ಏಕ್ ದಿನ್'' ಚಿತ್ರದ ಸಂಗೀತ ಸಂಜೆ ಇದು. ಈ ಕಾರ್ಯಕ್ರಮದಲ್ಲಿ ಚಿತ್ರದಲ್ಲಿನ ಹಾಡುಗಳನ್ನು ವೇದಿಕೆಯ ಮೇಲೆ ಹಾಡಲಾಯ್ತು.
ಇನ್ನೂ ಆಗಲೇ ಹೇಳಿದಂತೆ ಆಮಿರ್ ಖಾನ್ ಈ ಚಿತ್ರದ ನಿರ್ಮಾಪಕ. ಎಲ್ಲಕ್ಕಿಂತ ಮುಖ್ಯವಾಗಿ ಜುನೈದ್ ತಂದೆ. ಈ ಹಿನ್ನೆಲೆ ತಮ್ಮ ಮಗನ ಚಿತ್ರ ಹೇಗೆ ಬಂದಿದೆ ಎಂದು ಆಮಿರ್ ಖಾನ್ ಇಡೀ ಚಿತ್ರವನ್ನು ನೋಡಿಯೇ ನೋಡಿರುತ್ತಾರೆ.
ಬಹುಶಃ ಹೀಗಾಗಿಯೇ ಏನೋ ಅತ್ತ ವೇದಿಕೆಯ ಮೇಲೆ ಹಾಡು ಹೊರ ಹೊಮ್ಮುತ್ತಿದ್ದರೆ, ಆಮಿರ್ ಖಾನ್‌ಗೆ ಇತ್ತ ಮಗನ ಅಭಿನಯ ಕಣ್ಮುಂದೆ ಬಂದಂತಾಗಿರಬೇಕು. ಈ ಕಾರಣಕ್ಕೆ ಅಳೆದು ತೂಗಿ ಚಿತ್ರಗಳನ್ನು ಮಾಡುವ, ಭಾವನೆಗಳನ್ನು ಹದ್ದುಬಸ್ತಿನಲ್ಲಿಡುವ ಆಮಿರ್ ಖಾನ್ ಭಾವನೆ ತಡೆಯಲಾಗದೇ ಬಿಕ್ಕಿ ಬಿಕ್ಕಿ ಎಲ್ಲರೆದುರು ಅತ್ತಿದ್ದಾರೆ. ತಮ್ಮ ಶರ್ಟ್‌ನಿಂದ ಕಣ್ಣೀರು ಒರೆಸಿಕೊಂಡಿದ್ದಾರೆ. ಆಗ ಆಮಿರ್ ಖಾನ್ ಪಕ್ಕದಲ್ಲಿ ಕುಂತಿದ್ದ ಸಾಯಿ ಪಲ್ಲವಿ ಮತ್ತು ಜುನೈದ್ ಖಾನ್ ಆಮಿರ್ ಖಾನ್ ಅವರನ್ನು ಸಮಾಧಾನ ಮಾಡಿದ್ದಾರೆ.
ಸದ್ಯ ಆಮಿರ್ ಖಾನ್ ಕಣ್ಣೀರು ಹಾಕುತ್ತಿರುವ ದೃಶ್ಯಾವಳಿಗಳು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ. ಹಲವರು ಆಮಿರ್ ಖಾನ್ ನಟ-ನಿರ್ಮಾಪಕನಾಗಿ ಅಲ್ಲ ಬದಲಿಗೆ ತಂದೆಯಾಗಿ ಮಗನ ಬೆಳವಣಿಗೆಯನ್ನು ಕಂಡು ಕಣ್ಣೀರು ಹಾಕಿದ್ದಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications