ತನ್ನ ಇಬ್ಬರು ಮಾಜಿ ಪತ್ನಿಯರ ಜೊತೆ ಈದ್ ಹಬ್ಬ ಆಚರಿಸಿದ ಆಮಿರ್ ಖಾನ್, ಗೌರಿ ಎಲ್ಲಿ ಕಾಣುತ್ತಿಲ್ಲವಲ್ಲ ಎಂದ ಫ್ಯಾನ್ಸ್
ಪ್ರೀತಿ ಅಂದರೆ ಅದು ಪ್ರೀತಿಯಷ್ಟೇ ಅಲ್ಲ .. ಪ್ರೀತಿ ಅಂದರೆ ಬದುಕು, ಭವಿಷ್ಯ, ಭಾಷೆ, ಕನಸು, ನಗು, ಇನ್ನೂ ಏನೆಲ್ಲಾ ! ಇಂಥಾ ಪ್ರೀತಿಯನ್ನು ಬದುಕಿರುವ ತನಕ ಜಿನುಗುವ, ಪ್ರೇಮಸೆಲೆಯಾಗಿ ಬೆಳೆಸುವ -ಉಳಿಸುವ ವೃತವೇ ದಾಂಪತ್ಯ.
ಆದರೆ ಈಗೀಗ ಪ್ರೀತಿ ಮತ್ತು ದಾಂಪತ್ಯದ ಅರ್ಥ ಎರಡು ಬದಲಾಗಿದೆ. ಅದರಲ್ಲಿಯೂ ರಂಗೀನ್ ಲೋಕದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲ. ಇಲ್ಲಿ ದಿನ ಬೆಳಗಾದರೆ ಅನೇಕರು ತಮ್ಮ ಸಂಬಂಧಕ್ಕೆ ಗುಡ್ ಬೈ ಹೇಳುತ್ತಾರೆ. ಮದುವೆಯ ಬಂಧನದಿಂದ ಹೊರ ಬರುತ್ತಾರೆ. ವಿಚ್ಛೇದನ ಪಡೆಯುತ್ತಾರೆ.

ವಿಶೇಷ ಅಂದರೆ ವಿಚ್ಛೇದನ ಪಡೆದ ಮೇಲೆ ಕೂಡ ಇಲ್ಲಿ ಅನೇಕರು ದಿಕ್ಕು ಬದಲಿಸುವುದಿಲ್ಲ. ಬದಲಿಗೆ ನಾವು ಈಗ ಗಂಡ-ಹೆಂಡ್ತಿಯಲ್ಲ ಬದಲಿಗೆ ಸ್ನೇಹಿತರು ಮಾತ್ರ ಎಂದು ಹೇಳುತ್ತಲೇ ಜೊತೆ ಜೊತೆಯಾಗಿ ಓಡಾಡುತ್ತಾರೆ. ಮಾಜಿ ಗಂಡ ಅಥವಾ ಹೆಂಡ್ತಿಯ ಎದುರೇ ಮತ್ತೊಬ್ಬರನ್ನು ಪ್ರೀತಿಸಲು ಶುರು ಮಾಡುತ್ತಾರೆ. ಹಳೆಯ ಸಂಗಾತಿಗೆ ತಮ್ಮ ಹೊಸ ಗೆಳೆಯ ಅಥವಾ ಗೆಳತಿಯ ಪರಿಚಯವನ್ನು ಮಾಡಿಸಿ ನೆಮ್ಮದಿಯಾಗಿ ಬದುಕುತ್ತಾರೆ. ಉದಾಹರಣೆಗೆ ಆಮಿರ್ ಖಾನ್.
ಹೌದು, ಎಲ್ಲರಿಗೆ ಗೊತ್ತಿರುವಂತೆ ಆಮಿರ್ ಖಾನ್ ಸದ್ಯ ಮೂರನೇ ಬಾರಿ ಪ್ರೀತಿಯಲ್ಲಿ ಬಿದ್ದಿದ್ದಾರೆ. ಬೆಂಗಳೂರು ಮೂಲದ ಗೌರಿ ಜೊತೆ ಪ್ರೇಮ ಗೀತೆ ಹಾಡುತ್ತಾ ನೆಮ್ಮದಿಯಾಗಿದ್ದಾರೆ. ಹಾಗಂಥ ಆಮಿರ್ ಖಾನ್ ಹಳೆಯ ಹೆಂಡ್ತಿಯರ ಸಾಂಗತ್ಯವನ್ನು ಬಿಟ್ಟಿಲ್ಲ. ತಮ್ಮ ಇಬ್ಬರು ಪತ್ನಿಯರಾದ ರೀನಾ ದತ್ತ, ಕಿರಣ್ ರಾವ್ ಅವರಿಗೆ ವಿಚ್ಛೇದನ ನೀಡಿದ್ದರೂ ಕೂಡ ಆತ್ಮೀಯತೆ ಹಾಗೇ ಇದೆ. ಇದಕ್ಕೆ ಇನ್ನೊಂದು ಕೈಗನ್ನಡಿ ಎಂಬಂತೆ ತಮ್ಮ ಹೊಸ ಗೆಳತಿ ಮತ್ತು ತಮ್ಮ ಇಬ್ಬರು ಪತ್ನಿಯರ ಜೊತೆ ಆಮಿರ್ ಖಾನ್ ಈದ್ ಹಬ್ಬವನ್ನಾಚರಿಸಿದ್ದಾರೆ.
ಇನ್ನೂ ವಿಶೇಷ ಅಂದರೆ ಹಬ್ಬದಲ್ಲಿ ಇಬ್ಬರು ಮಾಜಿ ಪತ್ನಿಯರ ಜೊತೆ ಅವರ ಇಬ್ಬರು ಮಕ್ಕಳಾದ ಜುನೈದ್ ಖಾನ್ ಮತ್ತು ಆಜಾದ್ ರಾವ್ ಖಾನ್ ಕೂಡ ಭಾಗಿಯಾಗಿದ್ದಾರೆ. ತಮ್ಮ ಮನೆಯ ಬಾಲ್ಕನಿಗೆ ಬಂದು ಶುಭ ಕೋರಲು ಬಂದ ತಮ್ಮ ಅಭಿಮಾನಿಗಳಿಗೆ ಮತ್ತು ಪಾಪರಾಜಿಗಳಿಗೆ ಹಬ್ಬದ ಶುಭಾಶಯವನ್ನು ಹೇಳಿದ್ದಾರೆ. ಆ ನಂತರ ಸಿಹಿಯನ್ನು ಕೂಡ ಹಂಚಿದ್ದಾರೆ. ಸದ್ಯ ಆಮಿರ್ ಖಾನ್ ಅವರ ಈ ರಂಜಾನ್ ಹಬ್ಬದ ಸಂಭ್ರಮಾಚರಣೆಯ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ನಾನಾ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಇನ್ನು ಆಮಿರ್ ಖಾನ್ ಮನೆಯಲ್ಲಿ ಕಿರಣ್ ರಾವ್ ಮತ್ತು ರೀನಾ ದತ್ತ ಕಾಣಿಸಿಕೊಂಡಿದ್ದಾರೆ. ಆದರೆ ಈದ್ ಹಬ್ಬದ ಸಂಭ್ರಮದಲ್ಲಿ ಆಮಿರ್ ಖಾನ್ ಅವರ ಹೊಸ ಸಂಗಾತಿ ಗೌರಿ ಸ್ಟ್ರಾಟ್ ಕಣ್ಣಿಗೆ ಬಿದ್ದಿಲ್ಲ. ಹೀಗಾಗಿ ಅನೇಕರು ಎಲ್ಲಿ ಗೌರಿ ಕಾಣುತ್ತಿಲ್ಲವಲ್ಲ ಎಂದು ಪ್ರಶ್ನೆಯನ್ನು ಮಾಡುತ್ತಿದ್ದಾರೆ. ರಂಜಾನ್ ಹಬ್ಬದ ಸಂಭ್ರಮದಲ್ಲಿ ಗೌರಿ ಭಾಗಿ ಆಗಿರಲಿಕ್ಕಿಲ್ಲ ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಇನ್ನುಳಿದಂತೆ ಅಮೀರ್ ಖಾನ್‌ಗೆ ಈಗ 60ರ ಹರೆಯ. ಈಗಾಗಲೇ ರೀನಾ ದತ್ತ ಜೊತೆ ಹದಿನಾರು ವರ್ಷ ಮತ್ತು ಕಿರಣ್ ರಾವ್ ಅವರ ಜೊತೆ ಕೂಡ ಹದಿನಾರು ವರ್ಷ ಸಂಸಾರದ ಸುಖ ದುಃಖಗಳನ್ನು ಅಮೀರ್ ಖಾನ್ ಅನುಭವಿಸಿದ್ದಾರೆ. ಇನ್ನು ಮೊದಲ ಪತ್ನಿ ರೀನಾ ಅವರಿಂದ ಜುನೈದ್ ಮತ್ತು ಇರಾ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಎದೆಯೆತ್ತರಕ್ಕೆ ಬೆಳೆದಿದ್ದಾರೆ.
ಆ ಪೈಕಿ ಜುನೈದ್ ತಂದೆಯ ಹೆಜ್ಜೆಯ ಜಾಡನ್ನು ಹಿಡಿದು ಚಿತ್ರರಂಗಕ್ಕೆ ಬಂದಿದ್ದಾರೆ. ಇನ್ನು ಇರಾ ಮದುವೆಯಾಗಿ ಮನೆ ಗಂಡ ಎಂದು ನೆಮ್ಮದಿಯಿಂದ ಇದ್ದಾರೆ. ಇನ್ನು ಕಿರಣ್ ರಾವ್ ಅವರಿಂದ ಆಜಾದ್ ರಾವ್ ಖಾನ್ ಎಂಬ ಮಗ ಅಮೀರ್ ಖಾನ್‌ಗೆ ಇದ್ದಾನೆ. ತಮ್ಮ 60ನೇ ಹುಟ್ಟುಹಬ್ಬದಂದು ಆಮಿರ್ ಖಾನ್ ತಮ್ಮ ಮೂರನೇ ಪ್ರೇಯಸಿ ಗೌರಿಯನ್ನು ಪರಿಚಯಿಸಿದ್ದರು.


Click it and Unblock the Notifications










