ಮಾಜಿ ಮತ್ತು ಭಾವಿ ಪತ್ನಿಯ ಜೊತೆ ಒಂದೇ ಕಾರಿನಲ್ಲಿ ಆಮಿರ್ ಖಾನ್ ಜಾಲಿ..ಜಾಲಿ ; ನಕ್ಕು ನಲಿದ ಕಿರಣ್ - ಗೌರಿ, ಹುಬ್ಬೇರಿಸಿದ ಜನ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಮದುವೆ ಎನ್ನುವುದು ಜನುಮ ಜನ್ಮದ ಅನುಬಂಧ ಎಂಬ ನಂಬಿಕೆ ಇತ್ತು. ವಿಚ್ಚೇದನ ಎಂಬ ಪದ ಆ ಕಾಲಕ್ಕೆ ಶಾಪದಂತೆ ಭಾಸವಾಗುತ್ತಿತ್ತು. ಡಿವೋರ್ಸ್ ಪಡೆದವರನ್ನು ಸಮಾಜ ಅವಮಾನ ಮಾಡುತ್ತಿತ್ತು. ಒಡೆದ ಕನ್ನಡಿಯನ್ನು ಮತ್ತೆ ಜೋಡಿಸಿದರೂ ಕೂಡ ಅದರಲ್ಲಿ ಗೆರೆಗಳು ಕಾಣುತ್ತಾವೆ, ಆದರೆ..ಒಡೆದ ಹೃದಯವನ್ನು ಯಾವತ್ತು ಕೂಡ ಸರಿಪಡಿಸಲು ಸಾಧ್ಯವಿಲ್ಲ ಎಂಬ ಮಾತು ಕೇಳಿ ಬರುತ್ತಿತ್ತು. ಪರಸ್ಪರ ಮುಖ ನೋಡಲು ಕೂಡ ಅಸಹ್ಯ ಪಡುವಂತಾಗುತ್ತಿತ್ತು.
ಆದರೆ ಈಗ ಕಾಲ ಬದಲಾಗಿದೆ. ಪ್ರೀತಿಯನ್ನೂ ಅರ್ಥೈಸಿಕೊಳ್ಳುವ ರೀತಿ ಕೂಡ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅದರಲ್ಲಿಯೂ ಚಿತ್ರರಂಗ ಮತ್ತು ಹಣವಂತರ ವಿಚಾರದಲ್ಲಿ ವಿಚ್ಛೇದನ ಕೇವಲ ದಾಂಪತ್ಯ ಜೀವನದ ಅಂತ್ಯವೇ ಹೊರತು ಸಂಬಂಧಗಳ ಅಂತ್ಯ ಅಲ್ಲ.

ಹೌದು, ಈಗಾಗಲೇ ಜಗಜ್ಜಾಹೀರಾಗಿರುವಂತೆ ಆಮಿರ್ ಖಾನ್ ಸದ್ಯ ಮೂರನೇ ಬಾರಿ ಪ್ರೀತಿಯಲ್ಲಿ ಬಿದ್ದಿದ್ದಾರೆ. ಬೆಂಗಳೂರು ಮೂಲದ ಗೌರಿ ಜೊತೆ ಪ್ರೇಮ ಗೀತೆ ಹಾಡುತ್ತಾ ನೆಮ್ಮದಿಯಾಗಿದ್ದಾರೆ. ಇನ್ನೇನು ಇದೇ ಜುಲೈ 5ರಂದು ಮೂರನೇ ಬಾರಿ ಮದುವೆ ಕೂಡ ಆಗಲಿದ್ಧಾರೆ.
ಹಾಗಂಥ ಆಮಿರ್ ಖಾನ್ ಹಳೆಯ ಪತ್ನಿಯರ ಸಾಂಗತ್ಯವನ್ನು ಬಿಟ್ಟಿಲ್ಲ. ತಮ್ಮ ಇಬ್ಬರು ಮಾಜಿ ಹೆಂಡತಿಯರಾದ ರೀನಾ ದತ್ತ, ಕಿರಣ್ ರಾವ್ ಅವರಿಗೆ ವಿಚ್ಛೇದನ ನೀಡಿದ್ದರೂ ಕೂಡ ಮೂವರ ನಡುವೆ ಆತ್ಮೀಯತೆ ಹಾಗೇ ಇದೆ.
ಇದಕ್ಕೆ ಕೈಗನ್ನಡಿ ಎಂಬಂತೆ ತಮ್ಮ ಭಾವಿ ಪತ್ನಿ ಗೌರಿ ಮತ್ತು ತಮ್ಮ ಮಾಜಿ ಹೆಂಡ್ತಿಯರಾದ ರೀನಾ ದತ್ತ ಮತ್ತು ಕಿರಣ್ ರಾವ್ ಅವರ ಜೊತೆ ಹಬ್ಬ ಹರಿದಿನಗಳನ್ನು ಆಮಿರ್ ಖಾನ್ ಆಚರಿಸುತ್ತಾರೆ. ಮೂರು ಜನರ ಜೊತೆ ಸುತ್ತಾಡಲು ತೆರಳುತ್ತಾರೆ. ಇದಕ್ಕೆ ವೈರಲ್ ಆದ ವಿಡಿಯೋ ಸದ್ಯದ ಪುರಾವೆ.
ಹೌದು, ಅಸಲಿಗೆ ಆಮಿರ್ ಖಾನ್ ವೃತ್ತಿ ಬದುಕಿನ ಕಳಶ ಪ್ರಾಯ ''ಲಗಾನ್'' ತೆರೆಗೆ ಬಂದು 25 ವರ್ಷಗಳಾಗಿವೆ. ಆಮಿರ್ ನಿರ್ಮಾಪಕರಾಗಿ ಬಡ್ತಿ ಪಡೆದಿದ್ದು ಇದೇ ಚಿತ್ರದ ಮೂಲಕ. ಹೀಗಾಗಿ ಮುಂಬೈನಲ್ಲಿ ಆಮಿರ್ ಖಾನ್ ಅದ್ದೂರಿಯಾದ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ತಮ್ಮ ಈ ಬೆಳ್ಳಿ ಹಬ್ಬಕ್ಕೆ ''ಲಗಾನ್'' ತಂಡ ಮಾತ್ರವಲ್ಲದೇ ಚಿತ್ರರಂಗದ ಎಲ್ಲರನ್ನೂ ಕೂಡ ಕರೆದಿದ್ದರು. ಈ ಹಿನ್ನೆಲೆ ಸಲ್ಮಾನ್ ಖಾನ್, ಕರೀನಾ ಕಪೂರ್, ಸೇರಿ ಚಿತ್ರರಂಗದ ಹಲವರು ಬಂದಿದ್ದರು. ಆಮಿರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ಕೂಡ ತಮ್ಮ ಮಗ ಆಜಾದ್ ರಾವ್ ಜೊತೆ ಕಾರ್ಯಕ್ರಮದಲ್ಲಿ ಹಾಜರಿದ್ದರು. ಕೇವಲ ಕಿರಣ್ ಮಾತ್ರ ಅಲ್ಲ ರೀನಾ ದತ್ತಾ ಕೂಡ ಆಗಮಿಸಿದ್ದರು.
ಇದೇ ಕಾರ್ಯಕ್ರಮ ಮುಕ್ತಾಯ ಆದ ನಂತರ, ಎಲ್ಲರೂ ಒಂದೇ ಕಾರಿನಲ್ಲಿ ಪ್ರಯಾಣ ಮಾಡಿದ್ದಾರೆ. ಆಮಿರ್ ಖಾನ್ ಕಾರಿನ ಮುಂಭಾಗದಲ್ಲಿ ಕುಂತರೆ, ಕಿರಣ್ ಮತ್ತು ಗೌರಿ ಹಿಂಬರಿ ಸೀಟಿನಲ್ಲಿ ಕುಂತಿದ್ದಾರೆ. ಮಗ ಆಜಾದ್ ಕೂಡ ಇದ್ದಾನೆ.
ಕಾರಿನ ಹಿಂದೆ ಕುಂತಿದ್ದ ಕಿರಣ್ ರಾವ್ ಮತ್ತು ಗೌರಿ ಆತ್ಮೀಯವಾಗಿ ಹರಟೆ ಹೊಡೆದಿದ್ದಾರೆ. ಆಮಿರ್ ಖಾನ್ ಮತ್ತು ಗೌರಿ ಜೊತೆ ಸೇರಿ ಕಿರಣ್ ರಾವ್ ಮನಸಾರೆ ನಕ್ಕಿದ್ಧಾರೆ. ಸದ್ಯ ಇವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತರಹೇವಾರಿ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಯಾಕೆಂದರೆ ಆರಂಭದಲ್ಲೇ ಹೇಳಿದಂತೆ ಸಾಮಾನ್ಯವಾಗಿ ವೈಯಕ್ತಿಕ ಭಿನ್ನಾಭಿಪ್ರಾಯಗಳು ಅಥವಾ ವಿಚ್ಛೇದನದ ನಂತರ ಕುಟುಂಬಗಳಲ್ಲಿ ಇಂತಹ ಸೌಹಾರ್ದಯುತ ವಾತಾವರಣ ಕಂಡು ಬರುವುದು ತೀರಾ ಅಪರೂಪ.
ಹೀಗಾಗಿಯೇ ಅಚ್ಚರಿ ವ್ಯಕ್ತಪಡಿಸುತ್ತಿರುವ ಹಲವರು, ಇದೆಂಥಾ ಸಂಬಂಧ..? ಈ ಸಂಬಂಧಕ್ಕೆ ಏನೆಂದು ಹೆಸರಿಡಬೇಕು..? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಕೆಲವರು ಈ ಸಂಬಂಧ ವಿಶಿಷ್ಟ ಹೊಂದಾಣಿಕೆಯಿಂದ ಕೂಡಿರುವಂತಹದ್ದು, ಪ್ರಬುದ್ಧತೆ.. ಹೃದಯವಂತಿಕೆ.. ಎಂದರೆ ಇನ್ನು ಕೆಲವರು ಸೆಲೆಬ್ರಿಟಿಗಳ ಇಂತಹ ಜೀವನ ಜನಸಾಮಾನ್ಯರ ಮೇಲೆ ಅಭಿಮಾನಿಗಳ ಮೇಲೆ ಪ್ರಭಾವ ಬೀರುತ್ತೆ ಎನ್ನುತ್ತಿದ್ದಾರೆ. ಮಧ್ಯಮ ವರ್ಗದ ಅಥವಾ ಕುಟುಂಬ ಪ್ರಧಾನ ಸಂಸ್ಕೃತಿಯಲ್ಲಿ ಇಂತಹ ಬದುಕನ್ನು ಬದುಕುವುದು ಅಸಾಧ್ಯ ಎನ್ನುತ್ತಿರುವ ಹಲವರು ಆಮಿರ್ ಖಾನ್ ವಿರುದ್ದ ಕಿಡಿ ಕಾರುತ್ತಿದ್ದಾರೆ.
ಇನ್ನುಳಿದಂತೆ ಆಮಿರ್ ಖಾನ್‌ಗೆ ಈಗ 61ರ ಹರೆಯ. ಈಗಾಗಲೇ ರೀನಾ ದತ್ತ ಜೊತೆ ಹದಿನಾರು ವರ್ಷ ಮತ್ತು ಕಿರಣ್ ರಾವ್ ಅವರ ಜೊತೆ ಕೂಡ ಹದಿನಾರು ವರ್ಷ ಸಂಸಾರದ ಸುಖ ದುಃಖಗಳನ್ನು ಅಮೀರ್ ಖಾನ್ ಅನುಭವಿಸಿದ್ದಾರೆ. ಇನ್ನು ಮೊದಲ ಪತ್ನಿ ರೀನಾ ಅವರಿಂದ ಜುನೈದ್ ಮತ್ತು ಇರಾ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಎದೆಯೆತ್ತರಕ್ಕೆ ಬೆಳೆದಿದ್ದಾರೆ. ಆ ಪೈಕಿ ಜುನೈದ್ ತಂದೆಯ ಹೆಜ್ಜೆಯ ಜಾಡನ್ನು ಹಿಡಿದು ಚಿತ್ರರಂಗಕ್ಕೆ ಬಂದಿದ್ದಾರೆ. ಮಗಳು ಇರಾ ಮದುವೆಯಾಗಿ ಮನೆ ಗಂಡ ಎಂದು ನೆಮ್ಮದಿಯಿಂದ ಇದ್ದಾರೆ. ಇನ್ನು ಕಿರಣ್ ರಾವ್ ಅವರಿಂದ ಆಜಾದ್ ರಾವ್ ಖಾನ್ ಎಂಬ ಮಗ ಆಮಿರ್ ಖಾನ್‌ಗೆ ಇದ್ದಾನೆ. ಸದ್ಯ ಆಮಿರ್ ಖಾನ್ ಅವರ ಈ ಪ್ರಯಾಣದ ವಿಡಿಯೋ ವೈರಲ್ ಆಗಿದೆ.


Click it and Unblock the Notifications