ಅವಳು ನನ್ನಿಂದ ದೂರವಾದ ಮೇಲೆ ನಾನು ದೇವದಾಸನಾದೆ, ಕುಡುಕನಾದೆ- ಆಮೀರ್ ಖಾನ್..!
ಬಹುಶಃ ತಮ್ಮ ಪಾಡಿಗೆ ತಾವೂ ಇದ್ದು, ಕೇವಲ ಒಂದು ಚಿತ್ರದ ಮೂಲಕ ಸುದ್ದಿಯಾಗುವ ಕಲೆ ಆಮಿರ್ ಖಾನ್‌ಗಷ್ಟೇ ಗೊತ್ತು. ಯಾಕೆಂದರೆ, ಬಾಲಿವುಡ್ ಒಂದು ಸಿದ್ಧ ಮಾದರಿಯ ಹಿಂದೆ ಬಿದ್ದಾಗ ಭಿನ್ನವಾದ ಹಾದಿಯನ್ನು ತುಳಿದವರು ಆಮಿರ್ ಖಾನ್. ಕೇವಲ ಕಮರ್ಷಿಯಲ್ ಚಿತ್ರಗಳನ್ನಷ್ಟೇ ಮಾಡದೇ ಹತ್ತು ಹಲವು ಪ್ರಯತ್ನ ಮತ್ತು ಪ್ರಯೋಗಗಳನ್ನು ಮಾಡಿದರು.
ತಮ್ಮ ಚಿತ್ರ ಮತ್ತು ಪಾತ್ರಗಳ ಮೂಲಕವೇ ಹೆಸರುವಾಸಿಯಾದ ಆಮಿರ್ ಖಾನ್ ತಮ್ಮ ಪ್ರತಿ ಚಿತ್ರಕ್ಕೂ ಅದಕ್ಕೇ ಬೇಕಾದ ತಯಾರಿಯನ್ನೆಲ್ಲ ಮಾಡಿಕೊಂಡೇ ಅಖಾಡಕ್ಕೆ ಇಳಿಯುತ್ತಾರೆ. ಕೆಲಸದ ಮೇಲೆ ಆಮಿರ್ ಗೆ ಇರುವ ಈ ಶ್ರದ್ಧೆ ಮತ್ತು ಭಕ್ತಿಯನ್ನು ಮೆಚ್ಚಿಯೇ ಇವರಿಗೆ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂಬ ಬಿರುದನ್ನು ಕೂಡ ಬಾಲಿವುಡ್ ನೀಡಿದೆ. ಇಂಥಾ ಆಮಿರ್ ಖಾನ್ ಸದ್ಯ ತಮ್ಮ ಮೂರನೇ ಪ್ರೇಯಸಿ ಗೌರಿ ಸ್ಟ್ರಾಟ್ ಅವರ ವಿಚಾರದಿಂದ ಸುದ್ದಿಯಲ್ಲಿದ್ದಾರೆ. ಅನೇಕರ ಪಾಲಿಗೆ ಚರ್ಚೆಯ ವಿಷಯ ಕೂಡ ಆಗಿದ್ಧಾರೆ. ಇದರ ನಡುವೆ ಆಮಿರ್ ಖಾನ್ ಈಗ ತಮ್ಮ ವ್ಯೆಯಕ್ತಿಕ ಬದುಕಿನ ಕುರಿತು ಕೆಲ ವಿಚಾರ ಹಂಚಿಕೊಂಡಿದ್ದಾರೆ. ಕಂಠಪೂರ್ತಿ ಕುಡಿದು ಎಣ್ಣೆಯ ಅಮಲಿನಲ್ಲಿ ತೂರಾಡಿದ ದಿನಗಳನ್ನು ನೆನಪು ಮಾಡಿಕೊಂಡಿದ್ಧಾರೆ. ಹೌದು, ಇನ್ಸ್ಟೆಂಟ್ ಬಾಲಿವುಡ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಆಮಿರ್ ಖಾನ್.

ಆಮಿರ್ ಖಾನ್ ಅವರು, "ನಾನು ಮತ್ತು ರೀನಾ ದತ್ತ ಬೇರೆಯಾದಾಗ, ಸುಮಾರು 2-3 ವರ್ಷಗಳ ಕಾಲ ನಾನು ಅದೇ ದುಃಖದಲ್ಲಿದ್ದೆ. ನಾನು ಕೆಲಸ ಮಾಡುತ್ತಿರಲಿಲ್ಲ, ಸಿನಿಮಾ ಸ್ಕ್ರಿಪ್ಟ್‌ಗಳನ್ನು ಕೂಡ ಕೇಳುತ್ತಿರಲಿಲ್ಲ. ಮನೆಯಲ್ಲಿ ನಾನು ಒಬ್ಬಂಟಿಯಾಗಿ ಕಾಲಕಳೆಯುತ್ತಿದ್ದೆ, ಸುಮಾರು ಒಂದೂವರೆ ವರ್ಷಗಳ ಕಾಲ ಕುಡಿತಕ್ಕೆ ನಾನು ದಾಸನಾಗಿಬಿಟ್ಟಿದ್ದೆ" ಎಂದು ಆಮಿರ್ ಖಾನ್ ಅವರು ಹೇಳಿಕೊಂಡಿದ್ದಾರೆ.
ಇದು ನಿಮಗೆ ಅಚ್ಚರಿ ಎನಿಸಬಹುದು, ಆದರೂ ಸತ್ಯ; ನಾನು ದೊಡ್ಡ ಕುಡುಕನಾಗಿದ್ದೆ! ನಾವಿಬ್ಬರೂ ದೂರ ದೂರ ಆದಮೇಲೆ ಮುಂದೇನು ಮಾಡಬೇಕು ಎಂಬುದು ನನಗೆ ನಿಜಕ್ಕೂ ಗೊತ್ತಿರಲಿಲ್ಲ. ರಾತ್ರಿ ನನಗೆ ನಿದ್ದೆಯೇ ಬರುತ್ತಿರಲಿಲ್ಲ, ಆಗ ನಾನು ಸಿಕ್ಕಾಪಟ್ಟೆ ಕುಡಿಯೋದಕ್ಕೆ ಆರಂಭಿಸಿದೆ. ಮದ್ಯವನ್ನೇ ಸೇವಿಸಿದ ವ್ಯಕ್ತಿಯಾಗಿದ್ದ ನಾನು, ಒಂದು ದಿನದಲ್ಲಿ ಯಾರೂ ಕುಡಿಯಲು ಸಾಧ್ಯವಾಗದಷ್ಟು ಮದ್ಯವನ್ನು ನಾನೊಬ್ಬನೇ ಕುಡಿದು ಖಾಲಿ ಮಾಡುವಷ್ಟರ ಮಟ್ಟಿಗೆ ದೊಡ್ಡ ನಾನು ಕುಡುಕನಾದೆ" ಎಂದು ಆಮಿರ್ ಖಾನ್ ತಿಳಿಸಿದ್ದಾರೆ.
ಆಗ ನಾನು ದೇವದಾಸ್ ರೀತಿ ಇದ್ದೆ, ತನ್ನನ್ನು ತಾನು ನಾಶ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ವ್ಯಕ್ತಿಯಂತಾಗಿದ್ದೆ. ಇದನ್ನೇ ಒಂದೂವರೆ ವರ್ಷಗಳ ಕಾಲ ಮಾಡುತ್ತಿದ್ದೆ. ಆಗ ನಾನು ತುಂಬ ಖಿನ್ನತೆಯಲ್ಲಿದ್ದೆ" ಎಂಬ ಸತ್ಯವನ್ನು ಆಮಿರ್ ಖಾನ್ ಹೊರಹಾಕಿದ್ದಾರೆ. 2001ರಲ್ಲಿ 'ದಿಲ್ ಚಾಹ್ತ ಹೈ' ಸಿನಿಮಾ ತೆರೆಕಂಡಿತ್ತು. ಆನಂತರ ಆಮಿರ್ ಖಾನ್ 3 ವರ್ಷ ಸಿನಿಮಾಗಳನ್ನು ಮಾಡಿಯೇ ಇರಲಿಲ್ಲ. ಆನಂತರ 2005ರಲ್ಲಿ 'ಮಂಗಲ್ ಪಾಂಡೆ' ಸಿನಿಮಾ ಮೂಲಕ ಕಮ್‌ಬ್ಯಾಕ್ ಮಾಡಿದರು.
"ನಿಮ್ಮ ನಷ್ಟಗಳನ್ನು ನೀವು ನೇರವಾಗಿ ಎದುರಿಸಬೇಕು. ಒಂದು ಕಾಲದಲ್ಲಿ ಅದು ನಿಮ್ಮದಾಗಿತ್ತು, ಅದರೊಂದಿಗೆ, ಒಳ್ಳೆಯ ಸಮಯಗಳನ್ನು ಆನಂದಿಸಿದ್ದೆವು ಮತ್ತು ಅದು ಈಗ ನಿಮ್ಮಿಂದ ದೂರಹೋಗಿದೆ ಎಂದು ಒಪ್ಪಿಕೊಳ್ಳಿ. ಬದುಕಿನಲ್ಲಿ ಮುಂದುವರಿಯಲು ಅದೊಂದೇ ಮಾರ್ಗ" ಎಂದು ಆಮಿರ್ ಖಾನ್ ಹೇಳಿಕೊಂಡಿದ್ದಾರೆ.
ಅಂದ್ಹಾಗೇ ಆಮಿರ್ ಖಾನ್ ರೀನಾ ದತ್ತ ಜೊತೆ ಹದಿನಾರು ವರ್ಷ ಮತ್ತು ಕಿರಣ್ ರಾವ್ ಅವರ ಜೊತೆ ಕೂಡ ಹದಿನಾರು ವರ್ಷ ಸಂಸಾರದ ಸುಖ ದುಃಖಗಳನ್ನು ಅಮೀರ್ ಖಾನ್ ಅನುಭವಿಸಿದ್ದಾರೆ. ಇನ್ನು ಮೊದಲ ಪತ್ನಿ ರೀನಾ ಅವರಿಂದ ಜುನೈದ್ ಮತ್ತು ಇರಾ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಎದೆಯೆತ್ತರಕ್ಕೆ ಬೆಳೆದಿದ್ದಾರೆ. ಆ ಪೈಕಿ ಜುನೈದ್ ತಂದೆಯ ಹೆಜ್ಜೆಯ ಜಾಡನ್ನು ಹಿಡಿದು ಚಿತ್ರರಂಗಕ್ಕೆ ಬಂದಿದ್ದಾರೆ. ಇನ್ನು ಇರಾ ಮದುವೆಯಾಗಿ ಮನೆ ಗಂಡ ಎಂದು ನೆಮ್ಮದಿಯಿಂದ ಇದ್ದಾರೆ. ಇನ್ನು ಕಿರಣ್ ರಾವ್ ಅವರಿಂದ ಆಜಾದ್ ರಾವ್ ಖಾನ್ ಎಂಬ ಮಗ ಅಮೀರ್ ಖಾನ್‌ಗೆ ಇದ್ದಾನೆ. ಆದರೂ ಕೂಡ ಆಮಿರ್ ಖಾನ್ ಮೂರನೇ ಬಾರಿ ಪ್ರೀತಿಯಲ್ಲಿ ಬಿದ್ದಿದ್ದಾರೆ. ಬೆಂಗಳೂರು ಮೂಲದ ಗೌರಿ ಅವರನ್ನು ಮನಸಾರೆ ಪ್ರೀತಿಸುತ್ತಿದ್ದಾರೆ.


Click it and Unblock the Notifications










