ಮಗಳ ಮದುವೆಯಲ್ಲಿ ತುಂಬಾ ಅಳುತ್ತೇನೆ ಎಂಬುದು ನಿಜ ಎಂದ ನಟ ಆಮಿರ್ ಖಾನ್
ಮಕ್ಕಳ ಮದುವೆಯಲ್ಲಿ ಪೋಷಕರು ಭಾವುಕರಾಗುವುದು ಸಹಜ. ಅದರಲ್ಲೂ ಮಗಳ ಮದುವೆ ಎಂದರೆ ತಂದೆ ತಾಯಿ ಹೆಚ್ಚು ಭಾವುಕರಾಗುತ್ತಾರೆ. ಸೆಲಬ್ರಿಟಿಗಳು ಕೂಡ ಹೀಗೆಯೇ. ಕೆಲವರು ಹೇಳಿಕೊಳ್ಳುತ್ತಾರೆ. ಮತ್ತೆ ಕೆಲವರು ಹೇಳಿಕೊಳ್ಳುವುದಿಲ್ಲ. ಈಗ ನಟ ಆಮಿರ್ ಖಾನ್ ತಮ್ಮ ಮಗಳ ಮದುವೆಯ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ಇರಾ ಖಾನ್ ಮದುವೆ ದಿನಾಂಕ ಬಹಿರಂಗಪಡಿಸಿದ ಆಮಿರ್ ಖಾನ್
ನಟ ಆಮಿರ್ ಖಾನ್ ತಮ್ಮ ಮಗಳು ಇರಾ ಖಾನ್ ಮದುವೆ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ. ನ್ಯೂಸ್ 18 ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ಮುಂದಿನ ವರ್ಷ ಈ ಮದುವೆ ನಡೆಯಲಿದೆ ಎಂದು ಹೇಳಿದ್ದಾರೆ. ಇರಾ ಖಾನ್ ಪ್ರಸಿದ್ಧ ಫಿಟ್‌ನೆಸ್ ತರಬೇತುದಾರ ನೂಪುರ್ ಶಿಖರೆ ಅವರನ್ನು ವರಿಸಲಿದ್ದಾರೆ.

ಮಗಳ ಮದುವೆಯಲ್ಲಿ ತಾವು ತುಂಬಾ ಅಳುವುದಾಗಿ ಆಮಿರ್ ಖಾನ್ ಹೇಳಿಕೊಂಡಿದ್ದಾರೆ. ಮಗಳ ಮದುವೆ ಈಗಾಗಲೇ ಅವರ ಕುಟುಂಬದಲ್ಲಿ ಆತಂಕವನ್ನು ಉಂಟುಮಾಡಿದೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ. ಇರಾ ಖಾನ್ ಫಿಟ್‌ನೆಸ್ ತರಬೇತುದಾರ ನೂಪುರ್ ಶಿಖರೆ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಇರಾ ಮತ್ತು ನೂಪುರ್ ಮದುವೆಯ ದಿನಾಂಕದ ಬಗ್ಗೆ ಅಮೀರ್ ಮಾತು
ಸಂದರ್ಶನದಲ್ಲಿ ಮಾತನಾಡಿರುವ ಆಮಿರ್ ಖಾನ್ "ಇರಾ ಜನವರಿ 3 ರಂದು ಮದುವೆಯಾಗುತ್ತಿದ್ದಾರೆ. ಅವಳು ಆಯ್ಕೆ ಮಾಡಿಕೊಂಡಿರುವ ಹುಡುಗನ ಮುದ್ದಿನ ಹೆಸರು ಪೊಪಿಯೆ, ಅವರ ಹೆಸರು ನೂಪುರ್ ಅವರೊಬ್ಬ ತರಬೇತುದಾರ. ತುಂಬಾ ಮುದ್ದಾದ ಹುಡುಗ. ಇರಾ ಖಿನ್ನತೆಯೊಂದಿಗೆ ಹೋರಾಡುತ್ತಿದ್ದಾಗ ಆಕೆಗೆ ಬೆಂಬಲವಾಗಿ ನಿಂತವರು. ಅವಳೊಂದಿಗೆ ಇದ್ದವರು" ಎಂದು ಹೇಳಿದ್ದಾರೆ.
ನೂಪುರ್ ನಿಜವಾಗಿಯೂ ಇರಾ ಖಾನ್ ಬೆಂಬಲಕ್ಕೆ ನಿಂತವನು ಮತ್ತು ಅವಳನ್ನು ಭಾವನಾತ್ಮಕವಾಗಿ ಬೆಂಬಲಿಸಿದವನು. ಅವರು ಒಟ್ಟಿಗೆ ತುಂಬಾ ಸಂತೋಷವಾಗಿರುತ್ತಾರೆ. ಅಂತಹವರನ್ನೇ ಆಯ್ಕೆ ಮಾಡಿದ್ದಾರೆ ಎಂದು ನನಗೆ ಸಂತೋಷವಾಗಿದೆ. ಇಬ್ಬರ ನಡುವಿನ ಕಮ್ಯೂನಿಕೇಷನ್ ಚೆನ್ನಾಗಿದೆ. ಅವರು ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಾರೆ ಮತ್ತು ಪರಸ್ಪರ ಕಾಳಜಿ ವಹಿಸುತ್ತಾರೆ" ಎಂದು ಭಾವಿ ಅಳಿಯ ಮತ್ತು ಮಗಳ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.

ನಾನು ತುಂಬಾ ಭಾವನಾತ್ಮಕ ವ್ಯಕ್ತಿ ಎಂದ ಆಮಿರ್ ಖಾನ್
ತಾವು ತುಂಬಾ ಭಾವನಾತ್ಮಕ ವ್ಯಕ್ತಿ ಎಂದು ಹೇಳಿಕೊಂಡಿರುವ ನಟ ಆಮಿರ್ ಖಾನ್, " ನಾನು ಮಾತನಾಡುವುದು ಸಿನಿಮಾ ಡೈಲಾಗ್ ತರಹ ಇರಬಹುದು. ಆದರೆ, ನೂಪುರ್ ನನಗೆ ಮಗನಂತೆ ಅನಿಸುತ್ತದೆ. ನೂಪುರ್ ತುಂಬಾ ಒಳ್ಳೆಯ ಹುಡುಗ, ಅವರು ನಮ್ಮ ಕುಟುಂಬದ ಭಾಗವೆಂದು ನಾವು ಭಾವಿಸುತ್ತೇವೆ. ಅವರ ತಾಯಿ ಪ್ರೀತಮ್ ಜಿ ಅವರು ಈಗಾಗಲೇ ನಮ್ಮ ಕುಟುಂಬದ ಭಾಗವಾಗಿದ್ದಾರೆ" ಎಂದು ಮಾತನಾಡಿದ್ದಾರೆ.
"ನಾನು ತುಂಬಾ ಭಾವುಕನಾಗುತ್ತೇನೆ, ಮಗಳ ಮದುವೆಯ ದಿನ ನಾನು ತುಂಬಾ ಅಳುತ್ತೇನೆ, ಅದು ಖಚಿತ. ಆ ದಿನ ಆಮಿರ್ ಖಾನ್ ಅವರನ್ನು ನೋಡಿಕೊಳ್ಳಿ ಎಂಬ ಚರ್ಚೆ ಈಗಾಗಲೇ ಕುಟುಂಬದಲ್ಲಿ ಶುರುವಾಗಿದೆ. ಏಕೆಂದರೆ ನಾನು ತುಂಬಾ ಭಾವುಕನಾಗಿದ್ದೇನೆ. ನನ್ನ ನಗು ಮತ್ತು ನನ್ನ ಕಣ್ಣೀರನ್ನು ನಾನು ನಿಯಂತ್ರಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
ಇರಾ ಖಾನ್ ಮತ್ತು ನೂಪುರ್
ಕಳೆದ ವರ್ಷ ನವೆಂಬರ್ 18 ರಂದು ಇರಾ ಖಾನ್ ನೂಪುರ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆಪ್ತರು ಹಾಗೂ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆದಿತ್ತು. ನಿಶ್ಚಿತಾರ್ಥ ಸಮಾರಂಭದಲ್ಲಿ ಆಮಿರ್ ಖಾನ್ ಕುಟುಂಬ, ಇಮ್ರಾನ್ ಖಾನ್, ಆಮಿರ್ ಅವರ ಮಾಜಿ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್, ನಟಿ ಫಾತಿಮಾ ಸನಾ ಶೇಖ್ ಸೇರಿದಂತೆ ಹಲವರು ಇದ್ದರು. ಇರಾ ಖಾನ್ ಆಮಿರ್ ಖಾನ್ ಮತ್ತು ರೀನಾ ದತ್ತಾ ಅವರ ಮಗಳು.


Click it and Unblock the Notifications











