ಅರಿಜಿತ್ ಸಿಂಗ್ ಮನೆಯಲ್ಲಿ 4 ದಿನ ಬಿಡಾರ ಹೂಡಿದ ಆಮಿರ್ ಖಾನ್ ; ಇದಕ್ಕಂತಾರೆ ಪರ್ಫೆಕ್ಟ್ ಪ್ಲಾನ್
ಬಾಲಿವುಡ್ ಅಂಗಳದಲ್ಲಿ ಯಾವಾಗಲೂ ಏನಾದರೂ ಒಂದು ಹೊಸ ವಿಷಯ ಚರ್ಚೆಯಾಗುತ್ತಲೇ ಇರುತ್ತದೆ. ಅದರಲ್ಲೂ ಚಿತ್ರರಂಗದ 'ಮಿಸ್ಟರ್ ಪರ್ಫೆಕ್ಷನಿಸ್ಟ್' ಎನಿಸಿಕೊಂಡಿರುವ ನಟ ಅಖಾಡಕ್ಕೆ ಇಳಿದರೆ ಅಲ್ಲಿ ವಿಶೇಷತೆ ಇದ್ದೇ ಇರುತ್ತದೆ. ಅಭಿಮಾನಿಗಳು ಅವರ ಪ್ರತಿ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ.
ಸಿನಿಮಾ ಅಂದಮೇಲೆ ಅಲ್ಲಿ ಬಣ್ಣದ ಲೋಕದ ಜಾದೂ ಇರಬೇಕು. ಕಲಾವಿದರ ನಡುವಿನ ಬಾಂಧವ್ಯ ಇರಬೇಕು. ಇತ್ತೀಚಿನ ದಿನಗಳಲ್ಲಿ ಇಂತಹದ್ದೇ ಒಂದು ಅಪರೂಪದ ಭೇಟಿ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ. ಗಾಳಿ ಸುದ್ದಿಗಳ ನಡುವೆ ಈ ಹೊಸ ಅಪ್ಡೇಟ್ ಸಖತ್ ಸೌಂಡ್ ಮಾಡುತ್ತಿದೆ. ಸಿನಿಮಾ ಪ್ರೇಮಿಗಳಿಗೆ ಇದು ನಿಜಕ್ಕೂ ಒಂದು ಹಬ್ಬದ ಔತಣದಂತೆ ಕಾಣಿಸುತ್ತಿದೆ. ಅಷ್ಟಕ್ಕೂ ಆ ನಟ ಹೋದದ್ದು ಎಲ್ಲಿಗೆ? ಅಲ್ಲಿ ನಡೆದದ್ದೇನು ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ.

ಪಶ್ಚಿಮ ಬಂಗಾಳದ ಹಳ್ಳಿಯಲ್ಲಿ ಅಮೀರ್ ಖಾನ್ ಪ್ರತ್ಯಕ್ಷ...
ಹೌದು, ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ದಿಢೀರ್ ಎಂದು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಜಿಯಾಗಂಜ್ ಎಂಬ ಪುಟ್ಟ ಊರಿನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಅಲ್ಲಿಗೆ ಹೋದದ್ದು ಮತ್ಯಾರನ್ನೂ ಭೇಟಿ ಮಾಡಲಿಕ್ಕಲ್ಲ, ಭಾರತದ ಸದ್ಯದ ಸೆನ್ಸೇಷನಲ್ ಗಾಯಕ ಅರಿಜಿತ್ ಸಿಂಗ್ ಅವರನ್ನು ನೋಡಲು.
ಯಾವುದೇ ಆರ್ಭಟವಿಲ್ಲದೆ, ಅದ್ದೂರಿತನವಿಲ್ಲದೆ ಅಮೀರ್ ಖಾನ್ ಅವರು ಅರಿಜಿತ್ ಸಿಂಗ್ ಅವರ ಮನೆಗೆ ಭೇಟಿ ನೀಡಿದ್ದಾರೆ. ಅರಿಜಿತ್ ಸಿಂಗ್ ಅವರ ಸರಳತೆಗೆ ಅಮೀರ್ ಖಾನ್ ಮಾರುಹೋಗಿದ್ದಾರೆ. ಇವರಿಬ್ಬರೂ ಒಟ್ಟಿಗೆ ಕುಳಿತು ಹರಟೆ ಹೊಡೆದಿದ್ದಲ್ಲದೇ ಆಮಿರ್ ಖಾನ್ ನಾಲ್ಕು ದಿನ ಅರಿಜಿತ್ ಸಿಂಗ್ ಜೊತೆ ಕಾಲ ಕಳೆದಿದ್ದಾರೆ.
'ಏಕ್ ದಿನ್' ಚಿತ್ರಕ್ಕಾಗಿ ಈ ದಿಗ್ಗಜರ ಜುಗಲ್ಬಂದಿ...
ಆಮಿರ್ ಖಾನ್ ಸದ್ಯ ತಮ್ಮ ಮಗ ಜುನೈದ್ ಮತ್ತು ಸಾಯಿ ಪಲ್ಲವಿ ಅಭಿನಯದ ''ಏಕ್ ದಿನ್'' ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಇದೇ ಚಿತ್ರಕ್ಕೆ ಸಂಬಂಧಿಸಿದಂತೆ ಮಾತನಾಡಲು ಆಮಿರ್ ಖಾನ್, ಅರಿಜಿತ್ ಮನೆಗೆ ಹೋಗಿದ್ದರು. ಎಲ್ಲರಿಗೆ ಗೊತ್ತಿರುವಂತೆ ಅರಿಜಿತ್ ಬಾಲಿವುಡ್‌ಗೆ ವಿದಾಯ ಹೇಳಿದ್ದಾರೆ. ಆದರೆ ಆಮಿರ್ ಖಾನ್ ಬಿಡಬೇಕಲ್ಲ.
'ಏಕ್ ದಿನ್' ಚಿತ್ರಕ್ಕೆ ಅರಿಜಿತ್ ಸಿಂಗ್ ಅವರ ಧ್ವನಿ ಅತ್ಯಗತ್ಯ ಎಂದು ಅಮೀರ್ ಖಾನ್ ಅಭಿಮತ. ಅದರಲ್ಲಿಯೂ ಈ ಚಿತ್ರದಲ್ಲಿನ 5 ಹಾಡುಗಳನ್ನು ಅರಿಜಿತ್ ಅವರಿಂದಲೇ ಹಾಡಿಸುವ ಹೆಬ್ಬಯಕೆ ಅವರದ್ದು. ಹಾಗಾಗಿಯೇ ಖುದ್ದಾಗಿ ಅವರ ಊರಿಗೇ ಹೋಗಿ ಸಂಗೀತದ ಬಗ್ಗೆ ಆಮಿರ್ ಖಾನ್ ಚರ್ಚೆ ನಡೆಸಿದ್ದಾರೆ. ಇಷ್ಟೇ ಅಲ್ಲ ''ಏಕ್ ದಿನ್'' ನಮ್ಮ ಮತ್ತು ನಿಮ್ಮ ನಡುವಿನ ಹಳೆಯ ಒಪ್ಪಂದ, ಇಲ್ಲ ಎನ್ನಬೇಡಿ ಎಂದು ಹೇಳಿ ಕೊನೆಗೂ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಮಿರ್ ಹೇಳಿದ್ದೇನು..?
''ಸುಭಾಶ್ ಕೆ ಜಾ'' ಅವರಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಆಮಿರ್ ಖಾನ್, ನಾನು ಅವರ ಮನವೊಲಿಸುವ ಪ್ರಯತ್ನ ಮಾಡಿದೆ. ಆದರೆ ಅವರು ತಮ್ಮ ಈ ನಿರ್ಧಾರದಲ್ಲಿ ಧೃಡವಾಗಿದ್ದಾರೆ ಎಂದು ಹೇಳಿದ್ದಾರೆ. ಮುಂದುವರೆದು ''ಏಕ್ ದಿನ್'' ಚಿತ್ರದ ಹಾಡುಗಳನ್ನು ಅವರಿಂದಲೇ ಹಾಡಿಸಬೇಕಿತ್ತು ಎನ್ನುವುದು ನನ್ನ ಆಸೆ ಆಗಿತ್ತು. ಹಿಂದೆ ಈ ಕುರಿತು ಮಾತುಕಥೆ ಕೂಡ ಆಗಿತ್ತು. ಆದರೆ, ಅರಿಜಿತ್ ಏಕಾಏಕಿ ನಿವೃತ್ತಿ ಘೋಷಿಸಿದರು. ಈ ಹಿನ್ನೆಲೆ ''ಏಕ್ ದಿನ್'' ಚಿತ್ರದ ಹಾಡುಗಳನ್ನು ಹಾಡಿ ಎಂದು ನಾನು ಮನವಿ ಮಾಡಿಕೊಳ್ಳಲು ಹೋಗಿದ್ದೇ ಎಂದು ಹೇಳಿರುವ ಆಮಿರ್ ಖಾನ್ ನನ್ನ ಮನವಿಗೆ ಮನ್ನಣೆ ಸಿಕ್ಕಿದೆ. ''ಏಕ್ ದಿನ್'' ಚಿತ್ರದ 5 ಹಾಡುಗಳನ್ನು ಅರಿಜಿತ್ ಹಾಡಲಿದ್ದಾರೆ ಎಂದಿದ್ದಾರೆ.
ಅರಿಜಿತ್ ಮನೆಯಲ್ಲಿ ಸಿಂಪಲ್ ಆಮಿರ್
ಅರಿಜಿತ್ ಸಿಂಗ್ ಅವರ ಮನೆಯಲ್ಲಿ ಅಮೀರ್ ಖಾನ್ ತುಂಬಾ ಸಾಧಾರಣ ವ್ಯಕ್ತಿಯಂತೆ ಕಾಲ ಕಳೆದಿದ್ದಾರೆ. ಅಲ್ಲಿನ ಸ್ಥಳೀಯ ಅಡುಗೆಗಳನ್ನು ಸವಿದಿದ್ದಾರೆ. ಇದು ಕೇವಲ ಪ್ರೊಫೆಷನಲ್ ಭೇಟಿ ಮಾತ್ರವಲ್ಲದೆ, ಇಬ್ಬರು ಕಲಾವಿದರ ನಡುವಿನ ಸ್ನೇಹಕ್ಕೆ ಹಿಡಿದ ಕನ್ನಡಿಯಾಗಿದೆ.
ಒಟ್ನಲ್ಲಿ ಸಿನಿಮಾ ರಂಗದಲ್ಲಿ ಇಂತಹ ಸೃಜನಶೀಲ ಭೇಟಿಗಳು ಹೊಸ ಕ್ರಾಂತಿಗೆ ನಾಂದಿ ಹಾಡುತ್ತವೆ. 'ಏಕ್ ದಿನ್' ಚಿತ್ರದ ಮೂಲಕ ಅಮೀರ್ ಮತ್ತು ಅರಿಜಿತ್ ಯಾವ ರೀತಿಯ ಮ್ಯಾಜಿಕ್ ಮಾಡಲಿದ್ದಾರೆ ಎಂದು ಕಾದು ನೋಡಬೇಕು.


Click it and Unblock the Notifications