ನಿಮಗ್ಯಾಕಿಷ್ಟು ಕುತೂಹಲ ; ಗೌರಿ ಜೊತೆ 3ನೇ ಮದುವೆ, ವೈಯಕ್ತಿಕ ಜೀವನದ ಚರ್ಚೆಗೆ ಕಿಡಿಕಾರಿದ ಆಮಿರ್ ಖಾನ್
ಚಿತ್ರರಂಗದ ಧ್ರುವತಾರೆಯರ ವೈಯಕ್ತಿಕ ಬದುಕಿನ ಕುರಿತು ಹಲವರಲ್ಲಿ ಎಲ್ಲಿಲ್ಲದ ಕುತೂಹಲ ಇರುತ್ತೆ. ಬೆಳ್ಳಿತೆರೆಯ ಮೇಲೆ ಕಾಣಿಸುವ ನೆಚ್ಚಿನ ಸ್ಟಾರ್, ನಿಜ ಜೀವನದಲ್ಲಿ ಹೇಗಿರುತ್ತಾರೆ..? ಎಂಬ ಜಿಜ್ಞಾಸೆ ಇರುತ್ತೆ. ಬದಲಾದ ಈ ಕಾಲದಲ್ಲಿ ಹಲವರಲ್ಲಿನ ಈ ಆತುರ-ಕಾತುರಕ್ಕೆ ಸಾಮಾಜಿಕ ಜಾಲತಾಣ ಸೇತುವೆಯಂತೆ ಕಾರ್ಯ ನಿರ್ವಹಿಸುತ್ತಿದೆ.
ಆದರೆ, ಇದೇ ಸಮಯದಲ್ಲಿ ಹಲವರು ಇದೇ ಸೋಶಿಯಲ್ ಮೀಡಿಯಾ ಮೂಲಕ ಸ್ಟಾರ್ ಗಳ ಲಿವಿಂಗ್ ರೂಮ್ ಪ್ರವೇಶ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ಪರಿಣಾಮ ಇಂದು ಸೆಲೆಬ್ರಿಟಿಗಳು ಒಂದು ಕೇವಲ ಸಾರ್ವಜನಿಕ ವ್ಯಕ್ತಿಯಾಗಿ ಉಳಿದಿಲ್ಲ. ಬದಲಿಗೆ ನಿರಂತರವಾಗಿ ಚರ್ಚೆಗೀಡಾಗುವ ವಸ್ತುಗಳಾಗಿದ್ದಾರೆ.

ಇವರ ಸಣ್ಣ ನಿರ್ಧಾರ, ಇವರ ವೈಯಕ್ತಿಕ ಬದುಕಿನಲ್ಲಾಗುವ ಬದಲಾವಣೆ, ಎಲ್ಲವೂ ಇವರ ಚಿತ್ರಗಳಿಗಿಂತ ಬಹುಬೇಗನೆ ಜನರ ಬಳಿ ತಲುಪುತ್ತವೆ. ಸಾರ್ವಜನಿಕರ ಈ ನಿರಂತರವಾದ ಕಣ್ಗಾವಲಿಂದ ಹಲವರು ತಮ್ಮ ಖಾಸಗಿ ಬದುಕಿಗೆ ಸಮಯವನ್ನೇ ನೀಡುವುದಿಲ್ಲ. ಇದು ಅವರನ್ನು ಒಂಟಿತನ, ನಿರಾಸೆ, ಮತ್ತು ಖಿನ್ನತೆಗೆ ಒಳಪಡಿಸುತ್ತೆ. ಮತ್ತೂ ಕೆಲವೊಮ್ಮೆ ಅತಿಯಾದ ಮೂಗು ತೂರಿಸುವಿಕೆ ಕೋಪ-ತಾಪಕ್ಕೂ ಕಾರಣವಾಗುತ್ತೆ. ಪಿತ್ತ ನೆತ್ತಿಗೇರಿಸುತ್ತೆ. ಇದಕ್ಕೆ ಕೈಗನ್ನಡಿ ಎಂಬಂತೆ ಆಮಿರ್ ಖಾನ್ ತಮ್ಮ ವೈಯಕ್ತಿಕ ಬದುಕು ಮತ್ತು ಅದರ ಸುತ್ತ ನಡೆಯುತ್ತಿರುವ ಚರ್ಚೆಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಹೌದು, ಈಗಾಗಲೇ ಸುದ್ದಿಯಾದಂತೆ ಆಮಿರ್ ಖಾನ್ ಮೂರನೇ ಮದುವೆಗೆ ಅಣಿಯಾಗಿದ್ದಾರೆ. ಇದೇ ಜುಲೈ 5ರಂದು ಬೆಂಗಳೂರಿನ ಗೌರಿ ಜೊತೆ ಹೊಸ ಬದುಕಿಗೆ ಮತ್ತೊಮ್ಮೆ ಮುನ್ನುಡಿ ಬರೆಯಲಿದ್ದಾರೆ. ಇವರ ಈ ಮದುವೆ ಸಮಾರಂಭ ತುಂಬಾನೇ ಖಾಸಗಿಯಾಗಿ ನಡೆಯಲಿದ್ದು ಕೆಲವೇ ಕೆಲ ಆಪ್ತರು ಮದುವೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಇನ್ನು ಆಮಿರ್ ಖಾನ್‌ಗೆ ಈಗ 61 ವರ್ಷ.ಗೌರಿಗೆ ಈಗ 46-47 ವಯಸ್ಸಿರಬಹುದು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇಬ್ಬರಿಗೂ ಎದೆಯೆತ್ತರಕ್ಕೆ ಬೆಳೆದ ಮಕ್ಕಳಿದ್ದಾರೆ. ಈ ಎಲ್ಲ ವಿಚಾರ ಸದ್ಯ ಮೀಡಿಯಾಗಳಲ್ಲಿ ಮಾತ್ರವಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಕೂಡ ಚರ್ಚೆಯಾಗುತ್ತಿವೆ. ಆಮಿರ್ ಖಾನ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಈ ಚರ್ಚೆ ಆಮಿರ್ ಖಾನ್ ಅವರಿಗೆ ಬೇಸರ ತರಿಸಿದೆ. ಹೀಗಾಗಿಯೇ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಆಮಿರ್ ಖಾನ್ ಹೊರ ಹಾಕಿದ್ದಾರೆ.
ಈ ಕುರಿತು ಅಂತರಾಷ್ಟ್ರೀಯ ಮ್ಯಾಗ್‌ಜೀನ್ ''ವೆರೈಟಿ''ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಆಮಿರ್ ಖಾನ್, ಚಿತ್ರರಂಗದವರ ವೃತ್ತಿಪರ ಸಾಧನೆಗಳಿಗಿಂತ ಅವರ ವೈಯಕ್ತಿಕ ಬದುಕು ಹೆಚ್ಚೆಚ್ಚು ಚರ್ಚೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದ್ದಾರೆ.

ತಮ್ಮ ಮದುವೆಯ ವಿಚಾರ ಹೊರ ಬಂದಿದ್ಹೇಗೆ..? ಎನ್ನುವ ಪ್ರಶ್ನೆಗೆ ಕೂಡ ಕಿಡಿ ಕಾರಿರುವ ಆಮಿರ್ ಖಾನ್, ಆಪ್ತ ವಲಯದಲ್ಲಿ ಮಾತ್ರ ಇರಬೇಕಿದ್ದ ಈ ಸುದ್ದಿ ಜಗಜ್ಜಾಹೀರು ಆಗಿದ್ಹೇಗೆ ಎನ್ನುವ ಪ್ರಶ್ನೆ ನನ್ನನ್ನೂ ಈಗಲೂ ಕಾಡುತ್ತಿದೆ ಎಂದಿದ್ದಾರೆ. ಇದರಿಂದ ನೆಮ್ಮದಿ ಹಾಳಾಗಿದೆ ಎಂದಿದ್ದಾರೆ.
ನಮ್ಮ ಮದುವೆಯ ಸುದ್ದಿ ಹೇಗೆ ಲೀಕ್ ಆಯ್ತು ಎನ್ನುವುದು ನನಗೆ ನಿಜಕ್ಕೂ ಅರ್ಥ ಆಗುತ್ತಿಲ್ಲ ಎಂದು ಹೇಳಿರುವ ಆಮಿರ್ ಖಾನ್, ಈಗೀಗ ಸಾರ್ವಜನಿಕ ಕ್ಷೇತ್ರದಲ್ಲಿರುವ ವ್ಯಕ್ತಿಗಳಿಗೆ ತಮ್ಮ ಖಾಸಗಿತನವನ್ನು ಕಾಪಾಡಿಕೊಳ್ಳುವುದೇ ಬಹುದೊಡ್ಡ ಸವಾಲು ಆಗಿದೆ ಎಂದು ಹೇಳಿದ್ದಾರೆ. ವಿಶೇಷವಾಗಿ ಕ್ರಿಕೆಟ್ ಪ್ಲೇಯರ್ಸ್ ಮತ್ತು ಚಿತ್ರರಂಗದ ಕಲಾವಿದರ ವೈಯಕ್ತಿಕ ಬದುಕಿನ ಕುರಿತು ಜನರಿಗೆ ಯಾಕಿಷ್ಟು ಆಸಕ್ತಿ ಎನ್ನುವುದೇ ನನಗೆ ಅರ್ಥ ಆಗದ ವಿಚಾರ ಎಂದಿದ್ದಾರೆ.
ಮುಂದುವರೆದು ಜನ ನಮ್ಮ ವೃತ್ತಿಪರ ಕೆಲಸಕ್ಕೆ ಪ್ರಾಮುಖ್ಯತೆ ನೀಡಬೇಕು, ಅದರ ಕುರಿತು ಚರ್ಚೆ ಮಾಡಬೇಕೆ ಹೊರತು ನಮ್ಮ ವೈಯಕ್ತಿಕ ಬದುಕಿನ ಬಗ್ಗೆ ಅಲ್ಲ ಎಂದು ತಮ್ಮ ಅಸಮಾಧಾನ ಹೊರ ಹಾಕಿರುವ ಆಮಿರ್ ಖಾನ್
ನಮಗೆ ಗೊತ್ತಾಗದಂತೆ ನಮ್ಮ ಸುದ್ದಿ ಹೊರ ಜಗತ್ತಿಗೆ ಹೇಗೆ ತಲುಪುತ್ತವೆ ಎನ್ನುವುದೇ ನನಗೆ ಅಚ್ಚರಿಯ ವಿಷಯ ಆಗಿದೆ ಎಂದು ಹೇಳಿದ್ಧಾರೆ. ಸಾಮಾಜಿಕ ಮಾಧ್ಯಮಗಳ ಪ್ರಭಾವ ಹೆಚ್ಚಾದಂತೆ, ಬದುಕಿನ ಗೌಪ್ಯತೆಯನ್ನು ಕಾಪಾಡುವುದು ನಿಜಕ್ಕೂ ತುಂಬಾನೇ ಕಷ್ಟವಾಗುತ್ತಿದೆ ಎಂದು ಬೇಸರದಿಂದ ಹೇಳಿದ್ದಾರೆ. ಇದೇ ವೇಳೆ ಜುಲೈ5ರಂದು ಮನೆಯಲ್ಲಿ ಸರಳವಾಗಿ ಮದುವೆ ನಡೆಯಲಿದೆ ಎಂದು ಕೂಡ ಆಮಿರ್ ಖಾನ್ ಸ್ಪಷ್ಟಪಡಿಸಿದ್ದಾರೆ.


Click it and Unblock the Notifications