ಆಮೀರ್ ಖಾನ್ ಪುತ್ರನ ಜೊತೆ ಜಪಾನ್ ನಲ್ಲಿ ಏನ್ಮಾಡ್ತಿದ್ದಾರೆ ಸಾಯಿ ಪಲ್ಲವಿ ? ವೈರಲ್ ಫೋಟೋ ಹಿಂದಿನ ಕಥೆ ಏನು..?
ತಮಿಳಿನ ರೌಡಿ ಬೇಡಿ, ಮಲಯಾಳಂನ ಮನಮೋಹಕ ಸುಂದರಿ ಸಾಯಿ ಪಲ್ಲವಿ ಸಪ್ತಸಾಗರದಾಚೆ ದೂರದ ಜಪಾನ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅದು, ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಅವರ ಪುತ್ರ ಜುನೈದ್ ಖಾನ್ ಜೊತೆ ಅನ್ನುವುದೇ ಈ ಕ್ಷಣದ ಬ್ರೇಕಿಂಗ್ ನ್ಯೂಸ್.
ಹೌದು, ತನ್ನ ಸಹಜವಾದ ಸೌಂದರ್ಯ ಹಾಗೂ ಸಹಜವಾದ ಅಭಿನಯದಿಂದ, ಕೋಟ್ಯಂತರ ಸಿನಿ ಪ್ರೇಮಿಗಳ ಹೃದಯಕ್ಕೆ ಲಗ್ಗೆ ಇಟ್ಟಿರುವ ಸಾಯಿ ಪಲ್ಲವಿ, ಆಮೀರ್ ಖಾನ್ ಅವರ ಪುತ್ರ ಜುನೈದ್ ಖಾನ್ ಜೊತೆ ಜಪಾನ್ ನಲ್ಲಿ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿದ್ದಾರೆ. ಹಾಗಂಥ, ಸಾಯಿ ಪಲ್ಲವಿ ಮತ್ತು ಜುನೈದ್ ನಡುವೆ, ಪ್ರೀತಿ.. ಗೀತಿ.. ಇತ್ಯಾದಿಯ ಕಥೆ ಆರಂಭವಾಗಿದೆ ಎಂದು ಅಂದುಕೊಳ್ಳಬೇಡಿ. ಅದು ತಪ್ಪು ಕೂಡ. ಯಾಕೆಂದರೆ, ಸಾಯಿ ಪಲ್ಲವಿ ಹಾಗೂ ಜುನೈದ್ ಇಬ್ಬರೂ ಜಪಾನ್ ನಲ್ಲಿ ಬೀಡು ಬಿಟ್ಟಿರುವುದು ಚಿತ್ರದ ಚಿತ್ರೀಕರಣಕ್ಕಾಗಿ.

ನಿಮಗೆ ಗೊತ್ತಿರಲಿ.. ಅನೇಕ ದಿನಗಳಿಂದ ಹಿಂದಿ ಉದ್ಯಮದ ಮಂದಿ ಆಮೀರ್ ಖಾನ್ ಅವರ ಪುತ್ರ ಜುನೈದ್ ಮೇಲೆ ಕಣ್ಣಿಟ್ಟಿದ್ದಾರೆ. ಕಲೆ ರಕ್ತದಲ್ಲಿಯೇ ಇದೆ, ನಿಮ್ಮ ಮಗ ಜುನೈದ್ ಚಿತ್ರರಂಗಕ್ಕೆ ಬರುವುದು ಯಾವಾಗ ಎಂಬ ಪ್ರಶ್ನೆಯನ್ನ ಆಮೀರ್ ಎದುರಾದಾಗೆಲ್ಲ ಕೇಳ್ತಿದ್ದಾರೆ. ಆದರೆ, ಆಮೀರ್ ಖಾನ್ ಮಾತ್ರ ಮೌನಂ ಸಮ್ಮತಿ ಲಕ್ಷಣಂ ಎಂದು ಇಲ್ಲಿಯವರೆಗೆ ಸುಮ್ಮನಿದ್ದರು. ಪುತ್ರನ ಬಗ್ಗೆ ಹೆಚ್ಚು ಮಾತನಾಡದೇ ಪುತ್ರಿ ಇರಾ ಖಾನ್ ಮದುವೆಗಾಗಿ ಓಡಾಡುತ್ತಿದ್ದರು.
ಆದರೆ ಈಗ ಸೀದಾ ಜಪಾನ್ ನಿಂದ ಫೋಟೋಗಳು ತೇಲಿ ಬಂದಿವೆ. ಆಮೀರ್ ಖಾನ್ ಅವರ ಪುತ್ರ ಜುನೈದ್ ಖಾನ್ ಅವರಲ್ಲಿ ಸೂಪರ್ ಮ್ಯಾನ್ ಚಾಯೆ ಕೂಡ ಕಂಡು ಬರುತ್ತಿದೆ. ಇನ್ನೂ ಹೆಸರಿಡದ ಈ ಚಿತ್ರದ ಚಿತ್ರೀಕರಣ ಜಪಾನ್ ನಲ್ಲಿ ಭರದಿಂದ ನಡೆಯುತ್ತಿದೆ. ವಿಶೇಷ ಅಂದರೆ ಈ ಚಿತ್ರದಲ್ಲಿ ಜುನೈದ್ ಜೊತೆ ಸಾಯಿ ಪಲ್ಲವಿ ಕಾಣಿಸಿಕೊಳ್ತಿದ್ದಾರೆ. ಈ ಮೂಲಕ ಮಲಯಾಳಂನ ಕೆಂಪು ಗಲ್ಲದ ಸುಂದರಿ ಹಿಂದಿ ಚಿತ್ರರಂಗಕ್ಕೆ ನಾಯಕಿಯಾಗಿ ಅಧಿಕೃತವಾಗಿ ಕಾಲಿಡ್ತಿದ್ದಾರೆ. ಹೀಗಾಗಿ ಸಿಕ್ಕ ಸಿಕ್ಕವರೆಲ್ಲ ಹಿಂದಿ ಚಿತ್ರರಂಗಕ್ಕೆ ಕಾಲಿಡ್ತಿದ್ದಾರೆ. ಆದರೆ ಸಾಯಿ ಪಲ್ಲವಿ ಮಾತ್ರ ಮುಂಬೈನತ್ತ ಮುಖ ಮಾಡ್ತಿಲ್ಲವೆಂದು ಬೇಸರಗೊಂಡಿದ್ದ ಸಾಯಿ ಪಲ್ಲವಿ ಅಭಿಮಾನಿಗಳು, ಸದ್ಯಕ್ಕೆ ನಿಟ್ಟುಸಿರು ಬಿಡಬಹುದು.
ಮೊದಲ ಚಿತ್ರಕ್ಕೂ ಮುನ್ನವೇ ಎರಡನೇ ಚಿತ್ರದಲ್ಲಿ ಜುನೈದ್ ತಲ್ಲೀನ
ಅಂದ್ಹಾಗೇ ಇದು ಆಮೀರ್ ಖಾನ್ ಪುತ್ರ ಜುನೈದ್ ಅಭಿನಯದ ಮೊದಲ ಸಿನಿಮಾ ಅಲ್ಲ. ಬದಲಿಗೆ ಎರಡನೇ ಸಿನಿಮಾ ಇದು. ಈಗಾಗಲೇ ಮಹಾರಾಜ್ ಎಂಬ ಚಿತ್ರಕ್ಕೆ ಜುನೈದ್ ಬಣ್ಣ ಹಚ್ಚಿದ್ದಾರೆ. ವ್ಯತ್ಯಾಸ ಏನೆಂದರೆ ಈ ಚಿತ್ರ ಚಿತ್ರಮಂದಿರದಲ್ಲಿ ಬಿಡುಗಡೆಯಾಗ್ತಿಲ್ಲ. ಬದಲಿಗೆ ನೆಟ್ ಫ್ಲಿಕ್ಸ್ ನಲ್ಲಿ ಸದ್ಯದಲ್ಲಿಯೇ ಪ್ರಸಾರವಾಗಲಿದೆ. ಮೊದಲ ಚಿತ್ರದ ಬಿಡುಗಡೆಗೆ ಮುನ್ನವೇ, ಜುನೈದ್ ಎರಡನೇ ಚಿತ್ರದಲ್ಲಿ ಅಭಿನಯಿಸುತ್ತಿರುವುದು, ಎರಡನೇ ಚಿತ್ರಕ್ಕೆ ಸಾಯಿ ಪಲ್ಲವಿ ಅಂತಹ ಅಪ್ರತಿಮ ಪ್ರತಿಭಾವಂತೆ ನಾಯಕಿಯಾಗಿ ಆಯ್ಕೆಯಾಗಿರೋದು ಜುನೈದ್ ಖಾನ್ ಅವರ ಅದೃಷ್ಟ ಫಲ ಅಂದರೆ ಅದು ತಪ್ಪಾಗಲಿಕ್ಕಿಲ್ಲ.

ಇರಾ ಮದುವೆಯಲ್ಲಿ ಸೂಪರ್ ಮ್ಯಾನ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದ ಜುನೈದ್
ಅಮೀರ್ ಖಾನ್ ನಿರ್ಮಾಣದ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಜುನೈದ್ ಖಾನ್ ಅವರ ಈ ಹೊಸ ಚಿತ್ರದ ಸೆಟ್‌ನಲ್ಲಿರುವ ಚಿತ್ರಗಳಲ್ಲಿ ಜುನೈದ್ ಅವರ ಲುಕ್, ಸದ್ಯಕ್ಕೆ ಕಿಕ್ ಕೊಡ್ತಿದೆ. ಜುನೈದ್ ಖಾನ್ ಅವರ ಹೇರ್ ಸ್ಟೈಲ್ ಅನೇಕರಿಗೆ ಸೂಪರ್ ಹೀರೋ ಸೂಪರ್ ಮ್ಯಾನ್ ನ ನೆನಪಿಸುತ್ತಿದೆ. ಹಾಗಂಥ, ಜುನೈದ್ ದೇಸಿ ಸೂಪರ್ ಮ್ಯಾನ್ ಲುಕ್ ನಲ್ಲಿ ಮಿಂಚಲಿದ್ದಾರಾ ಎಂದು ಈಗಲೇ ಹೇಳಲು ಸಾಧ್ಯ ಇಲ್ಲ. ಆದರೆ ಜುನೈದ್ ಖಾನ್ ತಮ್ಮ ಸಹೋದರಿ ಇರಾ ಖಾನ್ ಅವರ ಮದುವೆಗೆ ಇದೇ ಹೇರ್ ಸ್ಟೈಲ್ ನಲ್ಲಿ ಆಗಮಿಸಿದ್ದರು. ಆಗ ಅನೇಕರು ಜುನೈದ್ ಅವರ ಹೇರ್ ಸ್ಟೈಲ್ ನೋಡಿ ಸೂಪರ್ ಮ್ಯಾನ್ ನ ನೆನಪು ಮಾಡಿಕೊಂಡಿದ್ದರು. ಸೂಪರ್ ಮ್ಯಾನ್ ಪಾತ್ರಕ್ಕೆ ಜುನೈದ್ ಹೇಳಿ ಮಾಡಿಸಿದ ವ್ಯಕ್ತಿಯೆಂಬ ಅಭಿಪ್ರಾಯ ಪಟ್ಟಿದ್ದರು.
ಸದ್ಯಕ್ಕೆ ಜಪಾನ್‌ನ ಸ್ನೋ ಫೆಸ್ಟಿವಲ್‌ನಲ್ಲಿ ಚಿತ್ರೀಕರಣಗೊಂಡ ಮೊದಲ ಬಾಲಿವುಡ್ ಚಿತ್ರ ಎಂಬ ಹೆಗ್ಗಳಿಕೆಗೆ ಸದ್ಯಕ್ಕೆ ಈ ಚಿತ್ರ ಪಾತ್ರವಾಗಿದೆ. ಅತಿಯಾದ ಹಿಮಪಾತದಿಂದಾಗಿ ಚಿತ್ರದ ಚಿತ್ರೀಕರಣವನ್ನ ಅನೇಕ ಬಾರಿ ಹಿಂದೆ ರದ್ದು ಕೂಡ ಮಾಡಲಾಗಿದೆ. ಮಿಕ್ಕಂತೆ ಸದ್ಯಕ್ಕೆ ಜುನೈದ್ ಖಾನ್ ಜೊತೆ ಸಾಯಿ ಪಲ್ಲವಿ ಇರುವ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಹಿಂದಿ ಚಿತ್ರರಂಗವನ್ನ ಪ್ರವೇಶಿಸಿದ್ದಕ್ಕೆ ಸಾಯಿ ಪಲ್ಲವಿಗೆ ಅಭಿನಂದನೆಯ ಮಹಾಪೂರ ಕೂಡ ಹರಿದು ಬರ್ತಿದೆ.


Click it and Unblock the Notifications











