61ನೇ ವಯಸ್ಸಿನಲ್ಲಿ 3ನೇ ಮದುವೆ ; ಬೆಂಗಳೂರಿನ 47 ವರ್ಷದ ಗೌರಿ ಜೊತೆ ಈ ದಿನದಂದು ನಡೆಯಲಿದೆ ಆಮಿರ್ ಖಾನ್ ಕಲ್ಯಾಣ
ಹೇಳಿ ಕೇಳಿ ಇದು ಬಣ್ಣದ ಲೋಕ. ಇಲ್ಲಿ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತವೆ. ಹೀಗೆ ಹರಿದಾಡುವ ಸುದ್ದಿಗಳಲ್ಲಿ ಕೆಲವು ಸತ್ಯ ಆಗಿದ್ದರೆ ಇನ್ನು ಕೆಲವು ಮಿಥ್ಯ ಆಗಿರುತ್ತವೆ. ಆದರೂ.. ಈ ಅಂತೆ-ಕಂತೆಯ ಸಂತೆಯಲ್ಲಿ ಊಹಾಪೋಹ ಸುದ್ದಿಗಳಿಗೆ ಬರ ಇಲ್ಲ. ಅದರಲ್ಲಿಯೂ ಲವ್ .. ಬ್ರೇಕಪ್.. ಮದುವೆ.. ಡಿವೋರ್ಸ್ ಸುದ್ದಿಗಳು ಇಲ್ಲಿ ತುಂಬಾನೇ ಮಾಮೂಲು.
ಯಾಕೆಂದರೆ.. ಚಿತ್ರರಂಗದ ಧ್ರುವತಾರೆಯರ ಬದುಕಿನಲ್ಲಿ ಬ್ರೇಕಪ್ಪು.. ಲವ್ವು.. ಡವ್ವು.. ಕಡಿಮೆ ಇಲ್ಲ. ಒಬ್ಬರ ನಂತರ ಒಬ್ಬರನ್ನು ಮದುವೆಯಾಗುವುದು ಆ ನಂತರ ಅವರಿಗೂ ಕೂಡ ಗುಡ್ ಬೈ ಹೇಳಿ ಹೊರನಡೆಯುವುದು ಹೊಸದೇನೂ ಅಲ್ಲ. ಇಲ್ಲಿ ಹಲವರಿಗೆ ಎಲ್ಲವೂ ಬಟ್ಟೆ ಬದಲಿಸಿದಷ್ಟೇ ಸುಲಭ.

ಹೀಗಾಗಿ ಇವರ ವ್ಯೆಯಕ್ತಿಕ ಬದುಕಿನ ಮೇಲೆ ಹಲವರ ಕಣ್ಣಿರುತ್ತೆ. ಇವರ ಸೋಶಿಯಲ್ ಮೀಡಿಯಾ ಮೇಲೆ ಒಂದು ವರ್ಗ ನಿಗಾ ವಹಿಸಿರುತ್ತೆ. ಇದಕ್ಕೆ ಇನ್ನೊಂದು ಉದಾಹರಣೆಯಂತೆ ಸದ್ಯ ಆಮಿರ್ ಖಾನ್ ಸದ್ದಿಲ್ಲದೇ ತಮ್ಮ 61ನೇ ವರ್ಷದಲ್ಲಿ ತಮ್ಮ ಪ್ರೇಯಸಿ ಗೌರಿ ಜೊತೆ ಮದುವೆಯಾಗಲು ಮುಂದಾಗಿದ್ದಾರೆ ಎನ್ನುವ ಸುದ್ದಿ ಸದ್ಯ ಉತ್ತರದಿಂದ ದಕ್ಷಿಣದವರೆಗೆ ಕೇಳಿ ಬರುತ್ತಿದೆ.
ಇದಕ್ಕೆ ಪೂರಕವಾಗಿ ''ಹಾಟರ್ ಫ್ಲೈ'' ಆಮಿರ್ ಮತ್ತು ಗೌರಿ ಮದುವೆಯ ಕುರಿತು ವರದಿಯನ್ನು ಮಾಡಿದ್ದು, ಇದೇ ಜುಲೈ 5ರಂದು ಇಬ್ಬರು ಮದುವೆಯ ಬಂಧನಕ್ಕೊಳಗಾಗಲಿದ್ದಾರೆ ಎಂದು ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.
ಕಳೆದೊಂದು ವರ್ಷದಿಂದ ಆಮಿರ್ ಖಾನ್ ಮತ್ತು ಗೌರಿ ಒಂದೇ ಸೂರಿನಡಿ ವಾಸ ಮಾಡುತ್ತಿದ್ದು, ಇಬ್ಬರು ತಮ್ಮ ಈ ಸಂಬಂಧದಿಂದ ಖುಷಿಯಾಗಿದ್ಧಾರೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ಧಾರೆ. ಈಗ ತಮ್ಮ ಈ ಸಂಬಂಧದ ಮೇಲೆ ಅಧಿಕೃತವಾಗಿ ಮದುವೆಯ ಮುದ್ರೆ ಒತ್ತಲು ಸಿದ್ದರಾಗಿದ್ಧಾರೆ ಎಂದು ಆಪ್ತ ಮೂಲವೊಂದು ತಿಳಿಸಿದೆ ಎಂದು ಕೂಡ ''ಹಾಟರ್ ಫ್ಲೈ'' ತನ್ನ ವರದಿಯಲ್ಲಿ ತಿಳಿಸಿದೆ.
ಅತ್ಯಂತ ಖಾಸಗಿಯಾಗಿ ನಡೆಯಲಿರುವ ಈ ಮದುವೆ ಸಮಾರಂಭದಲ್ಲಿ ಆಮಿರ್ ಖಾನ್, ಕೆಲವೇ ಕೆಲ ಆಪ್ತರನ್ನು ಮಾತ್ರ ಆಹ್ವಾನಿಸಿದ್ದು, ಆಮಿರ್ ಅವರ ಆಪ್ತ ಗೆಳೆಯರಾದ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಈ ಮದುವೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ''ಇಂಡಿಯಾ ಟುಡೇ'' ವರದಿಯನ್ನು ಮಾಡಿದೆ. ಸಹಜವಾಗಿ ಆಮಿರ್ ಅವರ ಮಾಜಿ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್ ಕೂಡ ಈ ಮದುವೆ ಸಮಾರಂಭದ ಕಳೆ ಹೆಚ್ಚಿಸಲು ಹಾಜರಿರಲಿದ್ಧಾರೆ.

ಅಂದ್ಹಾಗೇ ಕಳೆದ ವರ್ಷ ಮಾಧ್ಯಮದವರಿಗೆ ತಮ್ಮ ಪ್ರೇಯಸಿ ಗೌರಿ ಅವರನ್ನು ಆಮಿರ್ ಖಾನ್ ಪರಿಚಯಿಸಿದಾಗ, ಮದುವೆಯ ಪ್ರಶ್ನೆ ಎದುರಾಗಿತ್ತು. ಆಗ ನಾಚಿಕೊಂಡಿದ್ದ ಆಮಿರ್ ಖಾನ್, ಈ ವಯಸ್ಸಿನಲ್ಲಿ ಮೂರನೇ ಮದುವೆಯಾಗುವುದು ಅಷ್ಟೊಂದು ಚೆನ್ನಾಗಿರಲ್ಲ ಎಂದು ನನಗೆ ಅನ್ಸುತ್ತೆ ಎಂದು ಹೇಳಿದ್ದರು. 60ನೇ ವಯಸ್ಸಿನಲ್ಲಿ ಮದ್ವೆಯಾದರೆ ಜನ ನಗುವುದಿಲ್ವಾ ಎಂದು ತಮಾಷೆಯನ್ನು ಕೂಡ ಮಾಡಿದ್ದರು. ಆದರೆ ಇದೇ ಸಂದರ್ಭದಲ್ಲಿ ನೋಡೋಣ ಸಮಯ ಮತ್ತು ಸಂದರ್ಭಕ್ಕೆ ಅನುಗುಣವಾಗಿ ಮದುವೆಯ ಕುರಿತು ಇನ್ನೊಮ್ಮೆ ಆಲೋಚನೆಯನ್ನು ಮಾಡುತ್ತೇನೆ ಎಂದು ಕೂಡ ಅಮೀರ್ ಖಾನ್ ಹೇಳಿದ್ದರು. ಬಹುಶಃ ಆ ಸಮಯ ಈಗ ಬಂದಂತೆ ಇದೆ.
ಇನ್ನುಳಿದಂತೆ ಆಮಿರ್ ಖಾನ್‌ಗೆ ಈಗ 61ರ ಹರೆಯ. ಈಗಾಗಲೇ ರೀನಾ ದತ್ತ ಜೊತೆ ಹದಿನಾರು ವರ್ಷ ಮತ್ತು ಕಿರಣ್ ರಾವ್ ಅವರ ಜೊತೆ ಕೂಡ ಹದಿನಾರು ವರ್ಷ ಸಂಸಾರದ ಸುಖ ದುಃಖಗಳನ್ನು ಅಮೀರ್ ಖಾನ್ ಅನುಭವಿಸಿದ್ದಾರೆ.
ಇನ್ನು ಮೊದಲ ಪತ್ನಿ ರೀನಾ ಅವರಿಂದ ಜುನೈದ್ ಮತ್ತು ಇರಾ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಎದೆಯೆತ್ತರಕ್ಕೆ ಬೆಳೆದಿದ್ದಾರೆ. ಆ ಪೈಕಿ ಜುನೈದ್ ತಂದೆಯ ಹೆಜ್ಜೆಯ ಜಾಡನ್ನು ಹಿಡಿದು ಚಿತ್ರರಂಗಕ್ಕೆ ಬಂದಿದ್ದಾರೆ.
ಮಗಳು ಇರಾ ಮದುವೆಯಾಗಿ ಮನೆ ಗಂಡ ಎಂದು ನೆಮ್ಮದಿಯಿಂದ ಇದ್ದಾರೆ. ಇನ್ನು ಕಿರಣ್ ರಾವ್ ಅವರಿಂದ ಆಜಾದ್ ರಾವ್ ಖಾನ್ ಎಂಬ ಮಗ ಆಮಿರ್ ಖಾನ್‌ಗೆ ಇದ್ದಾನೆ. ಏಜ್ ಗ್ಯಾಪ್ ವಿಚಾರಕ್ಕೆ ಬಂದರೆ ಗೌರಿಗೆ ಈಗ 46-47 ವಯಸ್ಸಿರಬಹುದು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆ ಪ್ರಕಾರ ಇಬ್ಬರ ನಡುವೆ ಹೆಚ್ಚು ಕಡಿಮೆ 14-15 ವರ್ಷಗಳ ಅಂತರ ಇದೆ.
ಒಟ್ನಲ್ಲಿ ಸದ್ಯ ಆಮಿರ್ ಖಾನ್ ಮತ್ತು ಗೌರಿ ಇದೇ ಜುಲೈ 5ರಂದು ಮದುವೆಯಾಗಲಿದ್ದಾರೆ ಎನ್ನುವ ಮಾತು ಬಲವಾಗಿ ಕೇಳಿ ಬರುತ್ತಿದೆ. ಬಾಲಿವುಡ್‌ನ ಮಿ.ಪರ್ಫೆಕ್ಷನಿಸ್ಟ್‌ನ ಮೂರನೇ ಮದುವೆ ಎಲ್ಲಿ ನಡೆಯಲಿದೆ..? ಯಾರೆಲ್ಲ ಮದುವೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ..? ಎನ್ನುವುದನ್ನು ನೋಡಬೇಕಿದೆ. ಆಮಿರ್ ಖಾನ್ ಮತ್ತು ಗೌರಿ ಕೂಡ ತಮ್ಮ ಈ ಮದುವೆ ಸುದ್ದಿ ಮೇಲೆ ಇನ್ನೂ ಅಧಿಕೃತವಾದ ಮುದ್ರೆ ಒತ್ತಬೇಕಿದೆ.


Click it and Unblock the Notifications