ಹೆತ್ತ ತಂದೆಗೆ ಹೇಳದೇ ತಾಯಿಯ ಫೋಟೊ ಎದುರು ಎರಡನೇ ಮದುವೆಯಾದ ಸೂಪರ್ ಸ್ಟಾರ್‌ನ ಮಗ..!
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಮದುವೆ ಸ್ವರ್ಗದಲ್ಲಿ ನಡೆಯುತ್ತೆ ಎನ್ನುವ ನಂಬಿಕೆ ಇತ್ತು. ಸ್ವರ್ಗಕ್ಕೆ ಕಿಚ್ಚು ಹಚ್ಚುವಷ್ಟು ಅದ್ದೂರಿಯಾಗಿ ಮದುವೆ ಕೂಡ ನಡೆಯುತ್ತಿತ್ತು. ಊರಿನವರೆಲ್ಲ ಜೊತೆಯಲ್ಲಿ ಮದುವೆ ನಡೆಸಿ ಕೊಡುತ್ತಿದ್ದ ಕಾಲ ಅದು. ಆದರೆ ಈಗ ಕಾಲ ಬದಲಾಗಿದೆ.
ಬದಲಾದ ಈ ಕಾಲದಲ್ಲಿ ಮದುವೆಯ ರೂಪುರೇಶೆ ಕೂಡ ಬದಲಾಗಿದೆ. ಆಗೆಲ್ಲ ಮಗ ಅಥವಾ ಮಗಳಿಗೆ ಮದುವೆ ಗೊತ್ತಾಗುತ್ತಿದ್ದಂತೆಯೇ ಸಂಭ್ರಮ ಶುರುವಾಗುತ್ತಿತ್ತು. ಆದರೆ ಈಗ ಮಗ ಅಥವಾ ಮಗಳು ಮದುವೆಯಾದ ವಿಚಾರ ಕೇಳಿದರೆ ಸಾಕು ಹೆತ್ತವರ ಎದೆ ಧಸಕ್ ಎನ್ನುತ್ತೆ. ಯಾಕೆಂದರೆ ತಮ್ಮ ಮಗ ಅಥವಾ ಮಗಳ ಮದುವೆ ವಿಚಾರ ಹೆತ್ತವರಿಗೆ ಗೊತ್ತಿರಲ್ಲ. ಮದುವೆಯಾಗುತ್ತಿರುವ ಸುಳಿವು ಇರಲ್ಲ. ಉದಾಹರಣೆಗೆ ಪ್ರತೀಕ್ ಬಬ್ಬರ್ ಮದುವೆಯನ್ನೇ ತೆಗೆದುಕೊಳ್ಳಿ.

ಹೌದು, ಪ್ರತೀಕ್ ಬಬ್ಬರ್, ಅಂದಕಾಲತ್ತಿಲ್‌ನ ಸ್ಟಾರ್ ಕಂ ವಿಲನ್ ರಾಜ್ ಬಬ್ಬರ್ ಅವರ ಮುದ್ದಿನ ಮಗ. ಇವರ ತಾಯಿ ಸ್ಮಿತಾ ಪಾಟೀಲ್. 1985ರಲ್ಲಿಯೇ ಪದ್ಮಶ್ರೀ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದವರು. ಖ್ಯಾತಿಯ ತುತ್ತ ತುದಿಯಲ್ಲಿದ್ದಾಗ ಕೇವಲ 31ರ ಪ್ರಾಯದಲ್ಲಿ ಪ್ರಾಣವನ್ನು ಚೆಲ್ಲಿದವರು ಸ್ಮಿತಾ ಪಾಟೀಲ್.
ಇಂಥಾ ಸ್ಮಿತಾ ಪಾಟೀಲ್ ಮತ್ತು ರಾಜ್ ಬಬ್ಬರ್ ಅವರ ಮನೆಯ ಕುಲ ಗೌರವ ಪ್ರತೀಕ್ ಬಬ್ಬರ್ ಮೊನ್ನೆ ಮೊನ್ನೆ ಪ್ರೇಮಿಗಳ ದಿನದ ಪ್ರಯುಕ್ತ ಹೇಳದೇ ಕೇಳದೇ ಮದುವೆಯಾಗಿದ್ದಾರೆ. ಕೊನೆ ಪಕ್ಷ ಬದುಕಿನ ಸಂಧ್ಯಾಕಾಲದಲ್ಲಿರುವ ತಮ್ಮ ತಂದೆ ರಾಜ್ ಬಬ್ಬರ್ ಅವರನ್ನು ಕೂಡ ಮದುವೆಗೆ ಕರೆಯಬೇಕು ಎನ್ನುವ ಆಲೋಚನೆ ಪ್ರತೀಕ್ ಬಬ್ಬರ್‌ಗೆ ಬರಲಿಲ್ಲ. ಇದೇ ವಿಚಾರ ಈಗ ಬಾಲಿವುಡ್‌ನಲ್ಲಿ ಚರ್ಚೆಯ ವಸ್ತುವಾಗಿದೆ. ಪ್ರತೀಕ್ ಬಬ್ಬರ್ ಅವರ ಈ ನಡೆಯ ಕುರಿತು ಕೇವಲ ಸಾಮಾನ್ಯ ಸಿನಿಮಾ ಪ್ರೇಮಿಗಳು ಮಾತ್ರವಲ್ಲ ಅವರ ಮನೆಯ ಸದಸ್ಯರೇ ಅಪಸ್ವರ ತೆಗೆದಿದ್ದಾರೆ. ಪ್ರತೀಕ್ ಬಬ್ಬರ್‌ಗೆ ತಪರಾಕಿ ಹಾಕಿದ್ದಾರೆ.
ಹೌದು, ಜಾನೇ ತೂ ಯಾ ಜಾನೇ ಜಾನ್, ಭಾಗಿ 2, ಏಕ್ ದಿವಾನಾ ಥಾ, ಹೀಗೆ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ಪ್ರತೀಕ್ ಬಬ್ಬರ್ ಮೊನ್ನೆ ಪ್ರೇಮಿಗಳ ದಿನದಂದು ಎರಡನೇ ಮದುವೆಯಾಗಿದ್ದಾರೆ. ಪ್ರಿಯಾ ಬ್ಯಾನರ್ಜಿ ಜೊತೆ ಸಪ್ತಪದಿ ತುಳಿದಿದ್ದಾರೆ. ಆದರೆ ತಮ್ಮ ಬದುಕಿನ ಈ ಮಹತ್ವದ ಘಟ್ಟಕ್ಕೆ ಸಾಕ್ಷಿಯಾಗುವಂತೆ ಪ್ರತೀಕ್ ಬಬ್ಬರ್ ತಮ್ಮ ತಂದೆ ರಾಜ್ ಬಬ್ಬರ್ ಅವರನ್ನು ಕೇಳಿಕೊಂಡಿಲ್ಲ. ಮದುವೆಗೆ ಕರೆದಿಲ್ಲ.
ಹೀಗಾಗಿಯೇ ಕೆರಳಿರುವ ರಾಜ್ ಬಬ್ಬರ್ ಅವರ ಎರಡನೇ ಪತ್ನಿಯ ಮಗ ಆರ್ಯ ಬಬ್ಬರ್ ಸದ್ಯ ತಮ್ಮ ಮಲ ಸಹೋದರ ಪ್ರತೀಕ್ ಬಬ್ಬರ್ ವಿರುದ್ದ ಕೆಂಡ ಕಾರಿದ್ದಾರೆ. ಕೇವಲ ತಮ್ಮ ತಂದೆ ರಾಜ್ ಬಬ್ಬರ್‌ಗೆ ಮಾತ್ರವಲ್ಲ ಅಗಲಿರುವ ತಮ್ಮ ತಾಯಿ ಸ್ಮಿತಾ ಪಾಟೀಲ್ ಅವರ ಆತ್ಮಕ್ಕೂ ಕೂಡ ಪ್ರತೀಕ್ ಬಬ್ಬರ್ ನೋವುಂಟು ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ಆರ್ಯ ಬಬ್ಬರ್ ನನ್ನ ತಾಯಿ, ನನ್ನ ಸಹೋದರಿಯನ್ನು ಮದುವೆಗೆ ಕರೆದಿಲ್ಲ ಅದಕ್ಕೆ ನಮಗೆ ಯಾವುದೇ ಬೇಸರ ಇಲ್ಲ ಬಹುಶಃ, ನಾವು ತಪ್ಪು ಮಾಡಿರಬಹುದು, ಅವನಿಗೆ ನೋವು ಕೊಟ್ಟಿರಬಹುದು ಆದರೆ ಅವರ ತಂದೆ ? ಅವರೇನು ಮಾಡಿದ್ದಾರೆ ಎಂದು ಪ್ರಶ್ನೆಯನ್ನು ಕೇಳಿದ್ದಾರೆ. ಒಂದು ಕ್ಷಣ ಅವನು ಯೋಚನೆ ಮಾಡಿದರೆ ಸಾಕು ಅವನು ಯಾವಾಗಲೂ ಗೌರವಿಸುವ ಮತ್ತು ಪ್ರೀತಿಸುವ ಅವರ ತಾಯಿಗೆ ಕೂಡ ಅವನು ನೋವು ನೀಡಿರುವ ವಿಚಾರ ಅವನಿಗೆ ಗೊತ್ತಾಗುತ್ತೆ ಎಂದಿದ್ದಾರೆ.
ಮುಂದುವರೆದು ನಾವು ಅವನನ್ನು ಯಾವಾಗಲೂ ನಮ್ಮ ಕುಟುಂಬದ ಸದಸ್ಯನಂತೆಯೇ ನೋಡಿಕೊಂಡಿದ್ದೇವೆ, ನಡೆದುಕೊಂಡಿದ್ದೇವೆ, ರಣ್‌ಬೀರ್ ಕಪೂರ್ ಅವರಷ್ಟೇ ಪ್ರತಿಭಾವಂತ ಎಂದು ಅಂದುಕೊಂಡಿದ್ದೇವೆ, ಆದರೆ ದುರಾದೃಷ್ಟವಶಾತ್ ಅವನು ದಾರಿ ತಪ್ಪಿದ ಮಗನಾಗಿದ್ದಾನೆ ಎಂದು ಕೂಡ ಹೇಳಿರುವ ಆರ್ಯ ಬಬ್ಬರ್ ಅವನ ಈ ನಡಾವಳಿಯಿಂದ ನಮ್ಮ ತಂದೆ ರಾಜ್ ಬಬ್ಬರ್ ತುಂಬಾ ನೊಂದುಕೊಂಡಿದ್ದಾರೆ ಎಂದು ಹೇಳಿದ್ದಾರೆ.


Click it and Unblock the Notifications











