'ಆರು ತಿಂಗಳು ನರಕ ಅನುಭವಿಸಿದೆ': ನೋವಿನ ಕಥೆ ಬಿಚ್ಚಿಟ್ಟ 'ಎಬಿಸಿಡಿ' ನಟಿ
2013 ರಲ್ಲಿ ತೆರೆಕಂಡಿದ್ದ 'ಎಬಿಸಿಡಿ: ಎನಿಬಡಿ ಕೆನ್ ಡ್ಯಾನ್ಸ್' ಸಿನಿಮಾ ದೊಡ್ಡ ಸಕ್ಸಸ್ ಕಂಡಿತ್ತು. ವಿಮರ್ಶಾತ್ಮಕವಾಗಿಯೂ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ರೆಮೋ ಡಿಸೋಜಾ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಪ್ರಭುದೇವ, ಗಣೇಶ್ ಆಚಾರ್ಯ ಸೇರಿದಂತೆ ಹಲವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.
ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅಮೇರಿಕನ್ ಮೂಲದ ಡ್ಯಾನ್ಸರ್ ಲಾರೆನ್ ಗಾಟ್ಲೀಬ್ ಗೂ ದೊಡ್ಡ ಬ್ರೇಕ್ ಸಿಕ್ತು. ವೈಯಕ್ತಿಕವಾಗಿ ಮೆಚ್ಚುಗೆ ಗಳಿಸಿಕೊಂಡಿದ್ದರು. ಒಂದೇ ಚಿತ್ರದ ಮೂಲಕ ಭಾರಿ ನೇಮೂ ಫೇಮೂ ದಕ್ಕಿಸಿಕೊಂಡ ಲಾರೆನ್ ನಂತರದ ವರ್ಷಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ.
ಯಾಕೆ ಎಂದು ಹುಡುಕುತ್ತಾ ಹೋದರೆ, ಅದರ ಹಿಂದೆ ಅಚ್ಚರಿ ಮತ್ತು ಆಘಾತಕಾರಿ ವಿಷಯಗಳು ಬಹಿರಂಗವಾಗಿದೆ. ಅಷ್ಟಕ್ಕೂ, ಆ ನಟಿ ಬಾಳಲ್ಲಿ ಏನಾಯ್ತು? ಮುಂದೆ ಓದಿ...

ಖಿನ್ನತೆಗೆ ಗುರಿಯಾಗಿದ್ದ ನಟಿ
ಎಬಿಸಿಡಿ ಸಿನಿಮಾದ ಮೂಲಕ ಸ್ಟಾರ್ ಆಗಿದ್ದ ನಟಿ ಲಾರೆನ್ ಬಳಿಕ ಮಾನಸಿಕ ಖಿನ್ನತೆಗೆ ಒಳಗಾದರಂತೆ. ಬಹಳ ದಿನದ ವರೆಗೂ ಆ ಖಿನ್ನತೆಯಿಂದ ಹೊರಬರಲು ಸಾಧ್ಯವಾಗಲಿಲ್ಲವಂತೆ. ಡ್ರಗ್ಸ್, ಮದ್ಯಪಾನಕ್ಕೆ ವ್ಯಸನಿಯಾದರಂತೆ. ಹೀಗೆ, ಸುಮಾರು ದಿನಗಳ ಕಾಲ ತನ್ನ ಜೀವನವನ್ನ ಕತ್ತಲೆ ಕೋಣೆಯಲ್ಲಿ ಕಳೆದಿದ್ದೇನೆ ಎಂದು ನಟಿ ಬಹಿರಂಗಪಡಿಸಿದ್ದಾರೆ.

ಭಾರತವನ್ನೆ ಮನೆ ಮಾಡಿಕೊಂಡೆ
ಲಾರೆನ್ ಗಾಟ್ಲೀಬ್ ಮೂಲತಃ ಅಮೇರಿಕನ್ ಡ್ಯಾನ್ಸರ್. ಆದರೆ, ಎಬಿಸಿಡಿ ಯಶಸ್ಸಿನ ಬಳಿಕ ಇಲ್ಲೇ ನೆಲೆಸುವ ಸುಳಿವು ನೀಡಿದ್ದರು. ''ಎಬಿಸಿಡಿ ಸಿನಿಮಾ ಬಳಿಕ ನನ್ನ ಜೀವನದಲ್ಲಿ ದೊಡ್ಡ ಯಶಸ್ಸು ಸಿಕ್ತು. ಭಾರತವನ್ನೇ ಮನೆ ಮಾಡಿಕೊಂಡೆ. ಭಾರತದಿಂದ ಅಮೇರಿಕಕ್ಕೆ ವಿಮಾನದಲ್ಲಿ ಹೋಗುವ ವೇಳೆ ಎಷ್ಟು ಅಳುತ್ತಿದ್ದೆ. ನಾನು ಇತತರೊಂದಿಗೆ ಎಷ್ಟು ನಿಯತ್ತಾಗಿ ಇದ್ದರೂ ಅವರು ಮಾತ್ರ ಬರಿ ಸುಳ್ಳುಗಳಿಂದಲೇ ನನ್ನ ಸುತ್ತಲೂ ಇದ್ದರೂ'' ಎಂದು ಹೇಳಿಕೊಂಡಿದ್ದಾರೆ.

ಪ್ರಚಾರಕ್ಕೆ ಕರೆದಿಲ್ಲ, ಡಿಲೀಟ್ ಮಾಡಿದ್ರು
ಎಬಿಸಿಡಿ ಚಿತ್ರದಲ್ಲಿ ಅಮೇರಿಕನ್ ಇಂಡಿಯನ್ ಡ್ಯಾನ್ಸರ್ ಪಾತ್ರದಲ್ಲಿ ನಟಿಸಿದ್ದ ಲಾರೆನ್ ಅವರಿಗೆ ಚಿತ್ರತಂಡದ ಮೇಲೂ ಬೇಸರ ಇದೆ. ''ಸಿನಿಮಾದ ಪ್ರಚಾರಕ್ಕೆ ನನ್ನ ಕರೆದಿಲ್ಲ. ನನ್ನ ಭಾಗದ ದೃಶ್ಯಗಳನ್ನು ಕೂಡ ಡಿಲೀಟ್ ಮಾಡಿದರು. ಇದೆಲ್ಲವೂ ನನಗೆ ನೋವು ತಂದಿತ್ತು'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಆರು ತಿಂಗಳು ನರಕ ಅನುಭವಿಸಿದ್ದೆ
''ಸುಮಾರು ತಿಂಗಳುಗಳ ಕಾಲ ಸೋಶಿಯಲ್ ಮೀಡಿಯಾದಲ್ಲಿ ನಾನು ನಗುಮುಖದ ಫೋಟೋಗಳನ್ನು ಹಾಕುತ್ತಿದ್ದೆ. ಆದರೆ, ಅದರ ಹಿಂದೆ ಇದ್ದ ನೋವು ಹಾಗೆ ಇತ್ತು. ಆರು ತಿಂಗಳು ನಾನು ನರಕ ಅನುಭವಿಸಿದ್ದೇನೆ. ಆ ಕರಾಳ ಜಗತ್ತಿನಿಂದ ಹೊರಬರಲು ಹೋರಾಡಿದ್ದೇನೆ'' ಎಂದು ನಟಿ ಇಷ್ಟು ದಿನ ಇಂಡಸ್ಟ್ರಿಯಿಂದ ಯಾಕೆ ದೂರು ಇದ್ದರು ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.


Click it and Unblock the Notifications











