ಸಲ್ಮಾನ್ ಖಾನ್ ಒಬ್ಬ 'ಗೂಂಡಾ' ಎಂದು ನಿರ್ದೇಶಕ ಅಭಿನವ್ ಕಶ್ಯಪ್ ಆಕ್ರೋಶ
ಬಾಲಿವುಡ್ ನಿರ್ದೇಶಕ ಅಭಿನವ್ ಕಶ್ಯಪ್ ಮತ್ತೆ ಸಲ್ಮಾನ್ ಖಾನ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಲ್ಲು 'ಗೂಂಡಾ' ಎಂದು ಕರೆದಿದ್ದಾರೆ. 2010ರಲ್ಲಿ ಬಾಲಿವುಡ್ ಬ್ಯಾಡ್‌ಬಾಯ್ ನಟನೆಯ 'ದಬಂಗ್' ಚಿತ್ರಕ್ಕೆ ಅಭಿನವ್ ಆಕ್ಷನ್ ಕಟ್ ಹೇಳಿದ್ದರು. ಆದರೆ ಸಿನಿಮಾ ರಿಲೀಸ್ ಬಳಿಕ ಸಲ್ಲು ಕುಟುಂಬದ ಜೊತೆ ಭಿನ್ನಾಭಿಪ್ರಾಯ ಶುರುವಾಗಿತ್ತು.
ಮುಂದೆ 'ದಬಂಗ್'-2 ಸಿನಿಮಾ ನಿರ್ದೇಶಿಸಲು ನಿರಾಕರಿಸಿದ ನಂತರ, ಖಾನ್ ಕುಟುಂಬ ತಮ್ಮ ವೃತ್ತಿಜೀವನವನ್ನು ಹಾಳುಮಾಡಲು ಪ್ರಯತ್ನಿಸಿತು ಎಂದು ಅಭಿನವ್ ಆರೋಪಿಸಿದ್ದರು. 'ದಬಂಗ್' ಚಿತ್ರಕ್ಕೆ 15 ವರ್ಷ ಪೂರೈಸುತ್ತಿದೆ. ಇದೇ ಸಮಯದಲ್ಲಿ SCREENಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅಭಿನವ್, ಚಿತ್ರೀಕರಣದ ವೇಳೆ ಸಲ್ಮಾನ್ ಅವರ ವರ್ತನೆ ಬಗ್ಗೆ ಮಾತನಾಡಿದ್ದಾರೆ.

ಸಂದರ್ಶನದಲ್ಲಿ ಸಲ್ಮಾನ್ ಅವರನ್ನು ಅಭಿನವ್'ಗೂಂಡಾ' ಎಂದು ಸಂಬೋಧಿಸಿ, "ಸಲ್ಮಾನ್ ಖಾನ್ ಎಂದಿಗೂ ತಮ್ಮನ್ನು ಯಾವುದರಲ್ಲೂ ತೊಡಗಿಸಿಕೊಳ್ಳುವುದಿಲ್ಲ. ಅವರಿಗೆ ನಟನೆಯಲ್ಲಿ ಆಸಕ್ತಿ ಇಲ್ಲ, ಕಳೆದ 25 ವರ್ಷಗಳಿಂದಲೂ ಇಲ್ಲ. ಅವರು ಕೆಲಸಕ್ಕೆ ಬರುವುದು ಒಂದು ಉಪಕಾರವಿದ್ದಂತೆ ಭಾವಿಸುತ್ತಾರೆ" ಎಂದಿದ್ದಾರೆ.
ಮಾತು ಮುಂದುವರೆಸಿರುವ ಅಭಿನವ್ " ಸೆಲೆಬ್ರಿಟಿ ಎಂಬ ಅಹಂ ಬಗ್ಗೆ ಸಲ್ಲು ಹೆಚ್ಚು ಆಸಕ್ತಿ ಹೊಂದಿದ್ದಾರೆ, ಆದರೆ ನಟನೆಯ ಬಗ್ಗೆ ಅಲ್ಲ. ಅವ್ರು ಗೂಂಡಾ. 'ದಬಂಗ್'ಗೆ ಮೊದಲು ನನಗೆ ಇದು ತಿಳಿದಿರಲಿಲ್ಲ. ಸಲ್ಮಾನ್ ಅಸಭ್ಯ, ಅವರು ಕೆಟ್ಟ ವ್ಯಕ್ತಿ" ಎಂದು ಬೇಸರ ಹೊರಹಾಕಿದ್ದಾರೆ.
ತಮ್ಮ ಸಹೋದರ, ನಿರ್ದೇಶಕ ಅನುರಾಗ್ ಕಶ್ಯಪ್, 2003ರ 'ತೆರೆ ನಾಮ್' ಚಿತ್ರಕ್ಕೆ ಕೆಲಸ ಮಾಡಿದ್ರು. ಆಗ ನಿರ್ಮಾಪಕ ಬೋನಿ ಕಪೂರ್ ಜೊತೆಗಿನ ಭಿನ್ನಾಭಿಪ್ರಾಯದಿಂದ ಸಮಸ್ಯೆ ಎದುರಿಸಿದ್ದರು. 'ತೆರೆ ನಾಮ್' ಚಿತ್ರದಲ್ಲಿಯೂ ಸಲ್ಮಾನ್ ನಟಿಸಿದ್ದರು ಎಂದು ಅಭಿನವ್ ತಿಳಿಸಿದ್ದಾರೆ.
"ಖಾನ್ ಕುಟುಂಬ ಇಡೀ ಚಿತ್ರರಂಗವನ್ನು ನಿಯಂತ್ರಿಸಲು ಬಯಸುತ್ತದೆ. ಸೇಡು ತೀರಿಸಿಕೊಳ್ಳುವ ವರ್ತನೆ ತೋರುತ್ತದೆ ಎಂದು ಅಭಿನವ್ ಹೇಳಿದ್ದಾರೆ. "ಸಲ್ಮಾನ್ ಖಾನ್ಬಾಲಿವುಡ್‌ನ ಸ್ಟಾರ್ ಸಿಸ್ಟಂನ ಪಿತಾಮಹ. 50 ವರ್ಷಗಳಿಂದ ಚಿತ್ರರಂಗದಲ್ಲಿರುವ ಕುಟುಂಬದಿಂದ ಬಂದವರು. ಅವರು ಅದನ್ನು ಮುಂದುವರಿಸುತ್ತಾರೆ. ಸೇಡು ತೀರಿಸಿಕೊಳ್ಳುವ ಜನ. ಎಲ್ಲವನ್ನು ನಿಯಂತ್ರಿಸುತ್ತಾರೆ. ನೀವು ಒಪ್ಪದಿದ್ದರೆ, ನಿಮ್ಮನ್ನು ಬಿಡಲ್ಲ" ಎಂದು ಅಭಿನವ್ ವ್ಯಂಗ್ಯವಾಡಿದ್ದಾರೆ.


Click it and Unblock the Notifications











