Fact Check ; 'ಡಿವೋರ್ಸ್' ಬಗ್ಗೆ ಮೌನ ಮುರಿದು, 'ನಾನಿನ್ನೂ ವಿವಾಹಿತ' ಎಂದ ಅಭಿಷೇಕ್ ಬಚ್ಚನ್, ಆದರೆ...!
ಬದುಕು ಆಧುನಿಕವಾದಷ್ಟು ಸಂಸಾರ ಪ್ರಾಯೋಗಿಕವಾಗತೊಡಗಿದೆ. ಒಂದೊಂದು ಮನೆಯಲ್ಲೂ.. ಒಂದೊಂದು ಸಂಸಾರದಲ್ಲೂ.. ಒಂದೊಂದು ಜೀವದಲ್ಲೂ.. ಒಂದೊಂದು ಕಥೆ. ಉದಾಹರಣೆಗೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರನ್ನೇ ತೆಗೆದುಕೊಳ್ಳಿ.
ಹೌದು, ಕಳೆದ ಕೆಲ ದಿನಗಳಿಂದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಮಾತು ದಶದಿಕ್ಕುಗಳಿಂದ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಇಬ್ಬರ ನಡಾವಳಿ ಹಾಗೇ ಇದೆ. ಮೊದಲೆಲ್ಲ ಜೊತೆ ಜೊತೆಯಾಗಿ ಓಡಾಡುತ್ತಿದ್ದ ಇಬ್ಬರು ಈಗ ನಾನೊಂದು ತೀರ.. ನೀನೊಂದು ತೀರ.. ಎಂಬಂತೆ ಓಡಾಡುತ್ತಿದ್ದಾರೆ.

ಇನ್ನೂ ಮಗಳು ಆರಾಧ್ಯ ತಂದೆಯ ಜೊತೆ ಕಾಣಿಸಿಕೊಂಡಿದ್ದು ಇತ್ತೀಚಿನ ದಿನಗಳಲ್ಲಿ ತೀರಾ ಕಡಿಮೆ. ಹೀಗಾಗಿಯೇ ಇಬ್ಬರ ಸಂಸಾರ ಜೀವನದ ಬಗ್ಗೆ ದಿನಕ್ಕೊಬ್ಬರು ಒಂದೊಂದು ಮಾತು ಹೇಳುತ್ತಿದ್ದಾರೆ. ಇದರ ನಡುವೆ ಕೆಲ ಕಿಡಿಗೇಡಿಗಳು ನಾನು ಮತ್ತು ಐಶ್ವರ್ಯ ವಿಚ್ಛೇದನ ಪಡೆಯುತ್ತಿದ್ದೇವೆ ಎಂದು ಖುದ್ದು ಅಭಿಷೇಕ್ ಬಚ್ಚನ್ ಅವರೇ ಹೇಳಿದ್ದಾರೆ ಎಂದು ನಕಲಿ ವಿಡಿಯೋವನ್ನು ಕೂಡ ವೈರಲ್ ಮಾಡಿದ್ದಾರೆ. ಆದರೂ ಕೂಡ ಅಭಿಷೇಕ್ ಬಚ್ಚನ್ ಮೌನ ಮುರಿಯಲಿಲ್ಲ. ಐಶ್ವರ್ಯ ರೈ ಕೂಡ ನಮ್ಮನ್ನು ನೆಮ್ಮದಿಯಾಗಿ ಬದುಕಲು ಬಿಡಿ ಎಂದು ಗುಡುಗಲಿಲ್ಲ.
ಆದರೆ ಈಗ ಅಭಿಷೇಕ್ ಬಚ್ಚನ್ ಮಾತನಾಡಿದ್ಧಾರೆ. ನಾನಿನ್ನೂ ವಿವಾಹಿತ ಎಂದಿದ್ದಾರೆ ಎಂದು ಗುಲ್ಲಾಗಿದೆ. ಆದರೆ, ಇವರ ಅಭಿಮಾನಿಗಳ ದುರ್ದೈವ. ಹರಿದಾಡುತ್ತಿರುವ ಈ ಸುದ್ದಿ ಕೂಡ ಸುಳ್ಳು.

ಹೌದು, ಅಸಲಿಗೆ ಅಭಿಷೇಕ್ ಪ್ಯಾರಿಸ್ ನಲ್ಲಿ ನಡೆದ ಒಲಪಿಂಕ್ಸ್ ಕಣ್ತುಂಬಿಕೊಳ್ಳಲು ಇತ್ತೀಚೆಗೆ ಒಬ್ಬರೇ ಹೋಗಿದ್ದರು. ಈ ಸಮಯದಲ್ಲಿ ಅಲ್ಲಿರುವ ''ಬಾಲಿವುಡ್ ಯುಕೆ ಮೀಡಿಯಾ''ಗೆ ಅಭಿಷೇಕ್ ಬಚ್ಚನ್ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ವಿಚ್ಚೇದನದ ಕುರಿತ ಸುದ್ದಿಗಳಿಗೆ ಪ್ರತಿಕ್ರಿಯೆ ನೀಡಿರುವ ಅಭಿಷೇಕ್ ಬಚ್ಚನ್, ಮದುವೆಯ ಉಂಗುರ ತೋರಿಸಿ ನಾನಿನ್ನೂ ವಿವಾಹಿತ ಎಂದಿದ್ದಾರೆ ಎಂಬ ಸುದ್ದಿ ಸದ್ಯಕ್ಕೆ ಹಬ್ಬಿದೆ. ಮಾಧ್ಯಮಗಳ ಮೇಲೆ ಕಿಡಿ ಕಾರಿ ''ಅದರ ಬಗ್ಗೆ ಮಾತನಾಡಲು ಏನು ಉಳಿದಿಲ್ಲ. ಯಾಕೆಂದರೆ ಎಲ್ಲವನ್ನೂ ನೀವೇ ಹೇಳಿದ್ದೀರಾ ನೀವು ಅದನ್ನು ಯಾಕೆ ಮಾಡುತ್ತಿದ್ದೀರಾ ಅನ್ನುವುದು ನನಗೆ ಚೆನ್ನಾಗಿ ಗೊತ್ತು. ಕೆಲವು ಕಥೆಗಳನ್ನು ನೀವು ಹೇಳ್ಲೇಬೇಕು ಹೀಗಾಗಿ ಹೇಳುತ್ತಿದ್ದೀರಾ ಎಂದಿದ್ಧಾರೆ. ಪರವಾಗಿಲ್ಲ ನಾವು ಕಲಾವಿದರಾದ ಕಾರಣಕ್ಕೆ ಅದೆಲ್ಲವನ್ನೂ ನಾವು ಸಹಿಸಿಕೊಳ್ಳಬೇಕು'' ಎಂದು ಹೇಳಿದ್ದಾರೆ ಎಂದು ಎಲ್ಲೆಡೆ ವರದಿಯಾಗಿದೆ.
ನಿಜಾ. ಅಭಿಷೇಕ್ ಬಚ್ಚನ್ ಅವರೇ ಈ ಮಾತುಗಳನ್ನು ಹೇಳಿದ್ದಾರೆ. ಆದರೆ, ಅಭಿಷೇಕ್ ಬಚ್ಚನ್ ಹೇಳಿರುವ ಈ ಮಾತು ಇಂದು ನಿನ್ನೆಯದ್ದಲ್ಲ. ಮದುವೆಯ ಉಂಗುರ ತೋರಿಸಿ ನಾನಿನ್ನೂ ವಿವಾಹಿತ ಎಂದು ಹೇಳಿದ್ದು ನಿನ್ನೆ ಮೊನ್ನೆಯಲ್ಲ. ಬದಲಿಗೆ ಅಭಿಷೇಕ್ ಬಚ್ಚನ್ ಈ ಮಾತುಗಳನ್ನು ಹೇಳಿದ್ದು 2016ರಲ್ಲಿ.

ಹೌದು, 2016ರಲ್ಲಿ ಕೂಡ ಸದ್ಯ ಹಬ್ಬಿರುವಂತೆ ಅಭೀಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ವಿಚ್ಛೇದನದ ವದಂತಿ ಹಬ್ಬಿತ್ತು. ಇವತ್ತು ನಡೆಯುತ್ತಿರುವಂತೆಯೇ ಅವತ್ತು ಕೂಡ ಚರ್ಚೆ ಶುರುವಾಗಿತ್ತು. ಇದೇ ಸಮಯದಲ್ಲಿ ಐಶ್ವರ್ಯ ರೈ ಅಭಿನಯದ ''ಸರಬ್ಜೀತ್'' ಸಿನಿಮಾ ತೆರೆಗೆ ಬಂದಿತ್ತು. ಈ ಚಿತ್ರದ ಪ್ರೀಮಿಯರ್ ಶೋಗೆ ಅಭಿಷೇಕ್ ಬಚ್ಚನ್ ಬಂದಾಗ, ಮಾಧ್ಯಮದವರು ಅಭಿಷೇಕ್ ಬಚ್ಚನ್ ಅವರಲ್ಲಿ ವಿಚ್ಛೇದನದ ಕುರಿತು ಪ್ರಶ್ನೆಯನ್ನು ಕೇಳಿದ್ದರು.
ಈ ಪ್ರಶ್ನೆಗೆ 2016ರಲ್ಲಿ ಅಭಿಷೇಕ್ ಬಚ್ಚನ್ ನೀಡಿದ್ದ ಉತ್ತರವನ್ನು ಈಗ ಕೆಲವರು ವೈರಲ್ ಮಾಡಿದ್ದಾರೆ. ಪ್ಯಾರಿಸ್‌ನಲ್ಲಿ ಅಭಿಷೇಕ್ ಬಚ್ಚನ್ ಮಾತನಾಡಿದ್ದಾರೆ ಎಂಬಂತೆ ಬಿಂಬಿಸಿದ್ಧಾರೆ. ಸತ್ಯಾಸತ್ಯತೆಯನ್ನು ಅರಿಯದೇ ಅನೇಕರು, ಅಭಿಷೇಕ್ ಬಚ್ಚನ್ ನಿಜವಾಗಿಯೂ ತಮ್ಮ ವಿಚ್ಛೇದನದ ಕುರಿತು ಮೌನ ಮುರಿದು ಮಾತನಾಡಿದ್ದಾರೆ ಎಂದು ನಂಬಿದ್ದಾರೆ. ಇವರ ಅಭಿಮಾನಿಗಳು ಕೂಡ ತಮಗೆ ತಾವು ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ. ಅಂದ್ಹಾಗೇ 2016ರಲ್ಲಿ ಅಭಿಷೇಕ್ ಬಚ್ಚನ್ ತಮ್ಮ ಮದುವೆಯ ಕುರಿತು ಮಾತನಾಡಿದ್ದ ವಿಡಿಯೋ ಇನ್ನೂ ಯೂಟ್ಯೂಬ್‌ನಲ್ಲಿದೆ.


Click it and Unblock the Notifications